Property Tax: 17ವರ್ಷದಿಂದ ಸೇವಾ ಶುಲ್ಕ ಕಟ್ಟದ 'ವಿಧಾನಸೌಧ-ವಿಕಾಸಸೌಧ'..
ಬೆಂಗಳೂರು, ಜುಲೈ 18: ಆಸ್ತಿ ತೆರಿಗೆ ಕಟ್ಟದವರ ಸಾರ್ವಜನಿಕರ ಮನೆ, ಆಸ್ತಿ ಬಗ್ಗೆ ಸರ್ವೇ ನಡೆಸಿ ನೋಟಿಸ್ ಕೊಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ರಾಜ್ಯದ ಶಕ್ತಿ ಕೇಂದ್ರಗಳಿಂದಲೇ ಕೋಟಿಗಟ್ಟಲೇ ಆಸ್ತಿ ಸೇವಾ ಶುಲ್ಕ ಪಾವತಿಯಾಗದೇ ಬಾಕಿ ಉಳಿದುಕೊಂಡಿದೆ. ಸುಮಾರು 17 ವರ್ಷದಿಂದ ಬಾಕಿ ಉಳಿದ ಹಣ ಪಾವತಿಸಿಕೊಳ್ಳಲು ಬಿಬಿಎಂಪಿ ಶತಪ್ರಯತ್ನ ನಡೆಸಲು ಮುಂದಾಗಿದೆ.
ಹೌದು, ರಾಜ್ಯ ಶಕ್ತಿ ಕೇಂದ್ರಗಳೆಂದು ಕರೆಯುವ ವಿಧಾನಸೌಧ ಮತ್ತು ವಿಕಾಸಸೌಧಗಳು ಬಿಬಿಎಂಪಿಗೆ ನಿಗದಿತ ಆಸ್ತಿ ತೆರಿಗೆ ಪಾವತಿಸದೇ ಒಂದೂವರೆ ದಶಕದಿಂದ ವಿಳಂಬ ಮಾಡಿದೆ. ಈ ಎರಡು ಸೌಧಗಳು ತರಿಗೆಯಿಂದ ವಿನಾಯಿತಿ ಪಡೆದಿದ್ದು, ಕನಿಷ್ಠ ತೆರಿಗೆಯ ಸೇವಾ ಭಾಗವನ್ನು ಕಟ್ಟಬೇಕು. ಆದರೆ ಕಟ್ಟದೇ ಬಾಕಿ ಉಳಿಸಿಕೊಂಡಿವೆ ಎಂದು 'ಕನ್ನಡಪ್ರಭ' ಪತ್ರಿಕೆ ವರದಿ ಮಾಡಿದೆ.

ಈ ಸಂಬಂಧ ರಾಜ್ಯ ಸರ್ಕಾರ ಶಕ್ತಿ ಸೌಧಗಳ ಬಿಬಿಎಂಪಿ ತೆರಿಗೆ ಕಟ್ಟುವ ವಿಚಾರದಲ್ಲಿ ವಿನಾಯಿತಿ ಪಡೆದುಕೊಂಡಿದೆ. ಆದರೆ ಕನಿಷ್ಠ ಮೊತ್ತದ ಸೇವಾ ಶುಲ್ಕವನ್ನು ನೋಟಿಸ್ ನೀಡಿದರೂ ಸಹ 17 ವರ್ಷಗಳಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಸದ್ಯ ಜಾರಿಗೆ ತಂದಿರುವ ''ಒನ್ ಟೈಮ್ ಸೆಟ್ಲಮೆಂಟ್'' (OTS) ಯೋಜನೆ ಮೂಲಕವಾದರೂ ಬಾಕಿ ಇರುವ 7 ಕೋಟಿ ರೂ. ಆಸ್ತಿ ಶುಲ್ಕ ಕಟ್ಟುವಂತೆ ಬಿಬಿಎಂಪಿ ಸರ್ಕಾರಕ್ಕೆ ದುಂಬಾಲು ಬೀಳಲು ಮುಂದಾಗಿದೆ.
ಪ್ರತ್ಯೇಕವಾಗಿ ಎಷ್ಟು ಕೋಟಿ ತೆರಿಗೆ ಬಾಕಿ ಇದೆ
ವಿಧಾನಸೌಧದಕ ಕಟ್ಟಡಕ್ಕೆ 5.35 ಕೋಟಿ ರೂಪಾಯಿ ಹಾಗೂ ವಿಕಾಸಸೌಧದಿಂದ 2.14 ಕೋಟಿ ರೂಪಾಯಿ ಸೇವಾ ಶುಲ್ಕ ಬಾಕಿ ಉಳಿದುಕೊಂಡಿದೆ.
2008ರಲ್ಲಿ ಬಿಬಿಎಪಿ ರಚನೆಯಾದ ಬಳಿಕ ಶಕ್ತಿಸೌಧಗಳ ತೆರಿಗೆ ಮನ್ನಾ ಮಾಡಿತ್ತು. ನಂತರದ ದಿನಗಳಲ್ಲಿ ಹಲವು ಬಿಬಿಎಂಪಿಯು ಶೇಕಡಾ 25ರಷ್ಟು ಮಾತ್ರ ಸೇವಾ ಶುಲ್ಕ ಪಾವತಿಸುವಂತೆ ಕೆಲವು ಬಾರಿ ಮನವಿ ಮಾಡಿತ್ತು. ಅಲ್ಲದೇ ನೋಟಿಸ್ ಮೂಲಕ ಆಡಳಿತ ಮಂಡಳಿಗೆ ಸೂಚನೆ ನೀಡಿತ್ತು.

OTS ಮೂಲಕ ಪಾವತಿಸಿದವರಿಗೆ ರಿಯಾಯಿತಿ
ಇದರ ನಡುವೆ ಇತ್ತೀಚೆಗೆ ಬಿಬಿಎಂಪಿ ಆಸ್ತಿ ತೆರಿಗೆ ಯಾರೆಲ್ಲ ಬಾಕಿ ಉಳಿಸಿಕೊಂಡಿದ್ದಾರೋ ಅವರೆಲ್ಲ ಬಗ್ಗೆ ಸರ್ವೇ ನಡೆಸಿದ ಬಿಬಿಎಂಪಿ ತೆರಿಗೆ ಕಟ್ಟಲು ನೋಟಿಸ್ ಜಾರಿ ಮಾಡಿತು. 'ಅಲ್ಲದೇ ಒನ್ ಟೈಮ್ ಸೆಟ್ಲಮೆಂಟ್' ಯೋಜನೆಯಡಿ ತೆರಿಗೆ ಪಾವತಿಸುವವರಿಗೆ ಒಂದಷ್ಟು ವಿನಾಯಿತಿ ಸಹ ಘೋಷಿಸಿದೆ.
ಇದರಿಂದ ತೆರಿಗೆ ಬಾಕಿ ಉಳಿದಿದ್ದ ಅದೇ ಆಸ್ತಿ ತೆರಿಗೆ ಪುನಃ ಪಾಲಿಕೆಗೆ ಸಂದಾಯವಾಗತೊಡಗಿತು. ಅದೇ ರೀತಿ ಶಕ್ತಿ ಸೌಧಗಳಿಗೂ ಒನ್ ಟೈಮ್ ಸೆಟ್ಲಮೆಂಟ್ ಮೂಲಕ ಕನಿಷ್ಠ ಸೇವಾ ಶುಲ್ಕ ಪಾವತಿಸುವಂತೆ ಕಂದಾಯ ವಿಭಾಗದ ಅಧಿಕಾರಿಗಳು ಮನವಿ ಮಾಡುತ್ತಲೇ ಬಂದಿದ್ದಾರೆ.
ಸೇವಾ ಶುಲ್ಕ ಮನ್ನಾ ಮಾಡಲು ಪತ್ರ: ಮಾಡಲ್ಲ ಎಂದ ಬಿಬಿಎಂಪಿ
ಆದರೆ ಬಿಬಿಎಂಪಿ ಮನವಿಗೆ ಒಪ್ಪದ ಶಕ್ತಿ ಸೌಧಗಳ ಆಡಳಿತ ಸಿಬ್ಬಂದಿ ಸೇವಾ ಶುಲ್ಕ ಸಹ ಮನ್ನಾ ಮಾಡುವಂತೆ ಕೋರಿ ಬಿಬಿಎಂಪಿಗೆ ಪತ್ರ ಬರೆದಿದೆ. ಈಗಾಗಲೇ ಆಸ್ತಿ ತೆರಿಗೆ ಸಂಪೂರ್ಣ ಮನ್ನಾ ಮಾಡಲಾಗಿದ್ದು, ಸೇವಾ ಶುಲ್ಕವನ್ನು ಯಾವುದೇ ಕಾರಣಕ್ಕೂ ಮನ್ನಾ ಮಾಡುವುದಿಲ್ಲ ಎಂದು ಬಿಬಿಎಂಪಿ ಸಷ್ಟಪಡಿಸಿದೆ. ಸೌಧಗಳ ಹೊರಾಂಗಣ ಸ್ವಚ್ಚತೆ, ಕಸ ವಿಲೇವಾರಿಯಂತ ನಿರ್ವಹಣೆಗಾಗಿ ಸೇವಾ ಶುಲ್ಕ ವಿಧಿಸಲಾಗಿದೆ. ಅದನ್ನು ಸರ್ಕಾರ ಪಾವತಿಸುವಂತೆ ಬಿಬಿಎಂಪಿ ಮನವಿ ಮಾಡಿದೆ. ಇದಕ್ಕೆ ಸರ್ಕಾರದ ಉತ್ತರ ನಿರೀಕ್ಷೆಯಲ್ಲಿ ಬಿಬಿಎಂಪಿ ಕಾಯುತ್ತಿದೆ.












Click it and Unblock the Notifications