ಕನ್ನಡಿಗರಿಗೆ ಜಯ: ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ, ಕರವೇ ಹೇಳಿದ್ದೇನು ?
ರೈಲ್ವೆ ಪದನ್ನೋತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಕನ್ನಡಿಗರಿಗೆ ಜಯ ಸಿಕ್ಕಂತಾಗಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು, ಡಿಸೆಂಬರ್ 19ರಂದು ಕರವೇ ನಿಯೋಗದೊಂದಿಗೆ ಬೆಂಗಳೂರಿನ ನೈಋತ್ಯ ರೈಲ್ವೆ ವಿಭಾಗದ (South Western Railway - Bengaluru Division) ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರೈಲ್ವೆ ಪದೋನ್ನತಿ ಪರೀಕ್ಷೆಗಳಲ್ಲಿ (ಗೂಡ್ಸ್ ಟ್ರೈನ್ ಮ್ಯಾನೇಜರ್ - Goods Train Manager - GTEM ನೋಟಿಫಿಕೇಶನ್ ಸೇರಿದಂತೆ) ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡುವಂತೆ ಆಗ್ರಹಪತ್ರ ಸಲ್ಲಿಸಲಾಗಿತ್ತು.
ನೈಋತ್ಯ ರೈಲ್ವೆಯ ಬೆಂಗಳೂರು, ಹುಬ್ಬಳ್ಳಿ, ಮೈಸೂರು ವಿಭಾಗಗಳಲ್ಲಿ ಹೊರಡಿಸಲಾದ ಅಧಿಸೂಚನೆಗಳಲ್ಲಿ ಬೆಂಗಳೂರು ವಿಭಾಗದಲ್ಲಿ ಮಾತ್ರ ಕನ್ನಡವನ್ನು ಕಡೆಗಣಿಸಿ ಹಿಂದಿ-ಇಂಗ್ಲಿಷ್ ಮಾಧ್ಯಮಗಳಲ್ಲಿ ಮಾತ್ರ ಪರೀಕ್ಷೆ ನಡೆಸುವ ಉದ್ದೇಶ ಕರ್ನಾಟಕದ ರಾಜಧಾನಿಯಾದ ಬೆಂಗಳೂರನ್ನು ಕರ್ನಾಟಕಕ್ಕೆ ಸೇರದಂತೆ ಮಾಡುವ, ಕನ್ನಡಿಗರ ಹಕ್ಕುಗಳನ್ನು ದಮನ ಮಾಡುವ ದೊಡ್ಡ ಅನ್ಯಾಯವಾಗಿತ್ತು. ಇದು ರೈಲ್ವೆ ಇಲಾಖೆಯ ಮಾಸ್ಟರ್ ಸರ್ಕ್ಯುಲರ್ (MC) 31 (19-12-2019)

ನಮ್ಮ ಆಗ್ರಹಕ್ಕೆ ಸ್ಪಂದಿಸಿ, ರೈಲ್ವೆ ಇಲಾಖೆಯ ಅಧಿಕಾರಿಗಳು (ನೈಋತ್ಯ ರೈಲ್ವೆಯ DRM, PCPO ಮತ್ತು ಇತರ ಹಿರಿಯ ಅಧಿಕಾರಿಗಳು) ತಕ್ಷಣ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಿದ್ದಾರೆ. ಬೆಂಗಳೂರು ವಿಭಾಗದ ಕನ್ನಡಿಗ ರೈಲ್ವೆಯ ಉದ್ಯೋಗಿಗಳಿಗೆ ಇದು ದೊಡ್ಡ ಗೆಲುವು. ಇಲಾಖೆಯ ತ್ವರಿತ ಕ್ರಮಕ್ಕೆ ವಿಶೇಷ ಧನ್ಯವಾದಗಳು. ಹಾಗೆಯೇ ಎಲ್ಲ ಮಾಧ್ಯಮಬಂಧುಗಳಿಗೂ ನನ್ನ ಧನ್ಯವಾದಗಳು.
ನಿನ್ನೆಯಿಂದಲೇ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೊಂದಿಗೆ ಈ ವಿಷಯದ ಕುರಿತು ಚರ್ಚಿಸಿದ್ದೆ. ಅವರು ಸಮಸ್ಯೆ ಬಗೆಹರಿಸುವ ಕುರಿತು ಭರವಸೆ ನೀಡಿದ್ದಲ್ಲದೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಅವರಿಗೆ ವಿಶೇಷ ಕೃತಜ್ಞತೆಗಳು. ಅದೇ ರೀತಿ ಸಂಸದರಾದ ಪಿ.ಸಿ.ಮೋಹನ್ ಮತ್ತು ತೇಜಸ್ವಿ ಸೂರ್ಯ ಕೂಡ ವಿಶೇಷ ಕಾಳಜಿ ವಹಿಸಿದರು. ಅವರಿಗೂ ಧನ್ಯವಾದಗಳು. ಕನ್ನಡ - ಕನ್ನಡಿಗ - ಕರ್ನಾಟಕದ ಹಕ್ಕುಗಳಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸದಾ ಧ್ವನಿ ಎತ್ತುತ್ತದೆ. ಕನ್ನಡಿಗರ ಹಿತಾಸಕ್ತಿ ಕಾಪಾಡುವ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಹೇಳಿದ್ದಾರೆ.
ರೈಲ್ವೆ ನಿರ್ಧಾರದ ವಿರುದ್ಧ ಕನ್ನಡಿಗರ ಆಕ್ರೋಶ
ರೈಲ್ವೆ ಇಲಾಖೆಯ ಅನ್ಯಾಯದ ವಿರುದ್ಧ ಕನ್ನಡಿಗರು ಒಂದಾಗಿದ್ದರು. ನಾಡ ಪ್ರಭು, ಧರ್ಮ ಪ್ರಭು ಕೆಂಪೇಗೌಡರು ಬೆಂಗಳೂರು ನಗರ ಕಟ್ಟಿದ್ದು ಕನ್ನಡಿಗರಿಗಾಗಿ.ಎಲ್ಲಿದಂದಲೋ ಬಂದು ನಮ್ಮ ಉದ್ಯೋಗಗಳನ್ನು ಕಿತ್ತುಕೊಳ್ಳುವವರಿಗೆ ಅಲ್ಲ. ಬೆಂಗಳೂರು, ಗುಜರಾತನ ಅಹಮದಾಬಾದ್, ಬಿಹಾರದ ಪಾಟ್ನಾದಲ್ಲಿ ಇಲ್ಲ.ಇದು ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿಯ ಮಾತೃ ಭಾಷೆ ಕನ್ನಡ ಎಂದು ಕನ್ನಡಿಗರು ಹೇಳಿದ್ದರು.
ರೈಲ್ವೆ ರಾಜ್ಯ ಸಚಿವ ಕನ್ನಡಿಗ ವಿ. ಸೋಮಣ್ಣ ಅವರಿಗೆ ಟ್ಯಾಗ್ ಮಾಡಿ ಜನ ಪ್ರಶ್ನೆ ಮಾಡಿದ್ದರು. ರೈಲ್ವೆ ಇಲಾಖೆಯ ಈ ಮೂರ್ಖ ನಡೆಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಬೆಂಗಳೂರಿನಲ್ಲಿ ಈ ಪರೀಕ್ಷೆ ಯಾವುದೇ ಕಾರಣಕ್ಕೂ ನಾವು ನಡೆಸಲು ಬಿಡುವುದಿಲ್ಲ. ಕನ್ನಡಿಗರಿಗೆ ಉದ್ಯೋಗ #JobforKannadiga ಆದೇಶವನ್ನು ಉಲ್ಲಂಘಿಸುತ್ತದೆ. ಈ ಮಾಸ್ಟರ್ ಸರ್ಕ್ಯುಲರ್ ಹೊರಬರಲು ಪ್ರಮುಖ ಕಾರಣವೇ ಕರ್ನಾಟಕ ರಕ್ಷಣಾ ವೇದಿಕೆಯ ದಶಕಗಳ ಕಾಲದ ಹೋರಾಟ. ಆದರೂ ಇದನ್ನು ಉಲ್ಲಂಘಿಸಿ ಕನ್ನಡಿಗರ ಹಕ್ಕುಗಳನ್ನು ದಮನಿಸುವ ಕಾರ್ಯ ಮಾಡಲಾಗಿತ್ತು ಎಂದು ನೆಟ್ಟಿಗರು ಹೇಳಿದ್ದರು. ಕೊನೆಗೂ ಈ ವಿಚಾರದಲ್ಲಿ ಕನ್ನಡಿಗರ ಹೋರಾಟಕ್ಕೆ ನ್ಯಾಯ ಸಿಕ್ಕಿದೆ.
ರೈಲ್ವೆ ಸಚಿವ ವಿ. ಸೋಮಣ್ಣ ಹೇಳಿದ್ದೇನು ?
ರೈಲ್ವೆ ಇಲಾಖೆಯ ಸಿಬ್ಬಂದಿಗಾಗಿ ನಡೆಯುವ ಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಲಾಗುವುದು ಹಾಗೂ ಕನ್ನಡವನ್ನೂ ಸೇರಿಸಿ ಮರು ಅಧಿಸೂಚನೆ ಹೊರಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ತಿಳಿಸಿದ್ದಾರೆ.
ನೈರುತ್ಯ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಸರಕು ಸಾಗಣೆ ರೈಲಿನ ವ್ಯವಸ್ಥಾಪಕ ಹುದ್ದೆಗೆ ಪರೀಕ್ಷೆಗಳು ನಡೆಯಲಿದ್ದು, ಇದರಲ್ಲಿ ಬೆಂಗಳೂರು ವಿಭಾಗದಲ್ಲಿ 317 ಹುದ್ದೆಗಳಿಗೆ, ಹುಬ್ಬಳ್ಳಿ ವಿಭಾಗದಲ್ಲಿ 101 ಹಾಗೂ ಮೈಸೂರು ವಿಭಾಗದಲ್ಲಿ 56 ಹುದ್ದೆಗಳಿಗೆ ಆಯಾ ವಿಭಾಗೀಯ ಮಟ್ಟದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಪರೀಕ್ಷೆ ಬರೆಯಲು ಇಂಗ್ಲಿಷ್ ಅಥವಾ ಹಿಂದಿ ಅಥವಾ ಕನ್ನಡ ಭಾಷೆಯನ್ನು ಆಯ್ಕೆ ಮಾಡಲು ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳು ಅವಕಾಶ ಕೊಡಲಾಗಿದೆ. ಆದರೆ, ಬೆಂಗಳೂರು ವಿಭಾಗದ ಅಧಿಸೂಚನೆಯಲ್ಲಿ ಇಂಗ್ಲಿಷ್ ಇಲ್ಲವೇ ಹಿಂದಿಯಲ್ಲಿ ಮಾತ್ರ ಉತ್ತರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು, ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಅಧಿಕಾರಿಗಳನ್ನು ಕರೆಯಿಸಿಕೊಂಡು ವಿವರಣೆ ಕೇಳಿದ್ದೇನೆ. ಕಣ್ತಪ್ಪಿನಿಂದ ಈ ರೀತಿ ಆಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ಕೊಟ್ಟಿದ್ದು, ಕೂಡಲೇ ಇದನ್ನು ಸರಿಪಡಿಸಬೇಕು. ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡುವ ಮೂಲಕ ಮರು ಅಧಿಸೂಚನೆ ಹೊರಡಿಸಿ ಎಂದು ತಿಳಿಸಲಾಗಿದೆ ಎಂದಿದ್ದಾರೆ.












Click it and Unblock the Notifications