ಬೆಂಗಳೂರು ರೋಡ್ ಕ್ವಾಲಿಟಿ ಚೆಕ್‌ಗೆ ಬಂತು ಲಕ್ಷ.. ಲಕ್ಷದ ವಾಹನ!
ಬೆಂಗಳೂರಿನಲ್ಲಿ ಕಾಮಗಾರಿಗಳ ಪರಿಶೀಲನೆಗೆ ಸಂಬಂಧಿಸಿದಂತೆ ಹೊಸ ಕ್ರಮವನ್ನು ಕೈಗೊಳ್ಳಲಾಗಿದೆ. ಬಿಬಿಎಂಪಿಯ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಮಾಡಲು ಹೆಚ್ಚು ಅನುಕೂಲಕರವಾಗಿರುವ ನಿಟ್ಟಿನಲ್ಲಿ 2 ಸಂಚಾರಿ ಪ್ರಯೋಗಾಲಯ / ಟ್ರಾನ್ಸ್‌ಪೋರ್ಟ್ ವಾಹನಗಳು ಇಂದಿನಿಂದಲೇ ಕಾರ್ಯನಿರ್ವಹಿಸಲಿವೆ. 2 ವಾಹನಗಳಿಗಾಗಿ ಬರೋಬ್ಬರಿ 38.50 ಲಕ್ಷ ವೆಚ್ಚ ಮಾಡಲಾಗಿದೆ. ಗುಣಮಟ್ಟ ಪರೀಕ್ಷಿಸುವ ಉಪಕರಣಗಳಿಗೆ 11.40 ಲಕ್ಷ ಸೇರಿದಂತೆ 49.90 ಲಕ್ಷ ರೂಪಾಯಿ ವ್ಯಯಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಹೇಳಿದೆ.
ಒಂದು ಸಂಚಾರಿ ವಾಹನದಲ್ಲಿ ಚಾಲಕ, ಲ್ಯಾಬ್ ಟೆಕ್ನಿಷಿಯನ್, ಲ್ಯಾಬ್ ಸಹಾಯಕ ಸೇರಿ ಮೂರು ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಈ 2 ವಾಹನಗಳು ಗುಣ ನಿಯಂತ್ರಣ ವಿಭಾಗದಡಿ ಕಾರ್ಯನಿರ್ವಹಿಸಲಿವೆ. ಪಾಲಿಕೆಯ ಎಂಟೂ ವಲಯಗಳಲ್ಲಿ ಕಾಮಗಾರಿ ಗುಣಮಟ್ಟ ಪರಿಶೀಲಿಸಲು ಬಳಸಿಕೊಳ್ಳಲಾಗುತ್ತದೆ.

ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳಿಗಾಗಿ ಉಪಯೋಗಿಸುವ ಸಾಮಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸಲಾಗುವುದು. ಸಂಚಾರಿ ವಾಹನದಲ್ಲಿ ಬಿಟುಮಿನ್ ಮಾದರಿ, ಕಾಬುಲ್ ಸ್ಟೋನ್, ಕಬ್ಬಿಣ, ಅಗ್ರಿಗೇಟ್ಸ್, ಕಾಂಕ್ರೀಟ್ ಮಾದರಿ, ತಾಪಮಾನ ಪರಿಶೀಲಿಸುವ ಉಪಕರಣ, ಕೋರ್ ಕಟ್ಟಿಂಗ್ ಯಂತ್ರ, ತೂಕ ಮಾಡುವ ಯಂತ್ರ ಸೇರಿದಂತೆ 16 ಉಪಕರಣಗಳು ಇರಲಿವೆ ಎಂದು ಬಿಬಿಎಂಪಿಯು ಹೇಳಿದೆ.
ಪ್ರಮುಖ ಉಪಕರಣಗಳ ಕೆಲಸದ ವಿವರ
* ಅಗ್ರಿಗೆಟ್ ಇಂಪ್ಯಾಕ್ಟ್ ಟೆಸ್ಟರ್: ಕಾಮಗಾರಿಗೆ ಬಳಸುವ ಅಗ್ರಿಗೇಟ್ಸ್ ನ ಸಾಮರ್ಥ್ಯ ತಿಳಿಯಲು ಬಳಸುವ ಯಂತ್ರವಾಗಿದ್ದು, ಅಗ್ರಿಗೇಟ್ಸ್ ಇಂಪ್ಯಾಕ್ಟ್ ಶೇ.30ಕ್ಕೂ ಹೆಚ್ಚು ಪುಡಿಯಾದರೆ, ಅಂತಹ ಅಗ್ರಿಗೇಟ್ಸ್ ರಸ್ತೆ ಕಾಮಗಾರಿಗೆ ಬಳಸಲು ಯೋಗ್ಯವಿದೆಯೇ ಅಂತ ಗೊತ್ತಾಗಲಿದೆ.
* ಕಂಪ್ರೆಷನ್ ಟೆಸ್ಟಿಂಗ್ ಯಂತ್ರ: ಕಟ್ಟಡಕ್ಕೆ ಅಥವಾ ರಸ್ತೆಗೆ ಬಳಸುವ ಕಾಂಕ್ರೀಟ್‌ನ ಸಂಕುಚಿತ ಸಾಮರ್ಥ್ಯ ತಿಳಿಯಲು ಹಾಗೂ ರಸ್ತೆ / ಪಾದಚಾರಿ ಮಾರ್ಗಕ್ಕೆ ಬಳಸುವ ಕಾಬುಲ್ ಸ್ಟೋನ್‌ನ ಸಂಕುಚಿತ ಸಾಮರ್ಥ್ಯ ತಿಳಿಯಲಿದೆ.
* ಸೀವ್ಸ್(ಜರಡಿ): ಕಾಮಗಾರಿಯಲ್ಲಿ ಬಳಸುವ ಅಗ್ರಿಗೇಟ್ಸ್ಗಳ ಗ್ರೇಡಿಂಗ್ ವಿಶಿಷ್ಟತೆ / ವಿಶಿಷ್ಟ ವಿವರಣೆಯಂತೆ ಇರುವ ಬಗ್ಗೆ ತಿಳಿಯಬಹುದು.
* ಡಿಜಿಟಲ್ ವರ್ನಿಯರ್ ಕ್ಯಾಲಿಪರ್: ಕಬ್ಬಿಣದ ಸರಳು, ಟ್ಯೂಬ್ ಪೈಪ್‌ಗಳ ವ್ಯಾಸ/ಸುತ್ತಳತೆ ತಿಳಿಯುವ ಸಾಧನ.
* ಡಿಜಿಟಲ್ ಇನ್ಫ್ರಾರೆಡ್ ಥರ್ಮಾಮೀಟರ್: ಬಿಟುಮಿನ್ ಮಿಶ್ರಣದ ಉಷ್ಣಾಂಶವನ್ನು ತಿಳಿಯುವ ಸಾಧನ.
* ಕೋರ್ ಕಟ್ಟರ್ ಯಂತ್ರ: ರಸ್ತೆ ಕಾಮಗಾರಿ ನಿರ್ವಹಿಸಲಾದ ನಂತರದಲ್ಲಿ, ಡಾಂಬರೀಕರಣ / ಕಾಂಕ್ರೀಟ್‌ನ ದಪ್ಪ(Thickness)ದ ಬಗ್ಗೆ ತಿಳಿಯಲು ಬಳಸುವ ಸಾಧನ.
* ಅಲ್ಟ್ರಾ ಸೊನಿಕ್ ಪಲ್ಸ್ ವೆಲೊಸಿಟಿ(UPV): ಕಾಂಕ್ರೀಟ್‌ನಿಂದ ನಿರ್ಮಿತವಾದ ಕಾಮಗಾರಿಗಳಲ್ಲಿ ಬಳಸಲಾಗಿರುವ ಕಾಂಕ್ರಿಟ್‌ನ ಗುಣಮಟ್ಟಮಟ್ಟದ ಬಗ್ಗೆ ತಿಳಿಯುವ ಸಾಧನ.
* ರೀಬೌಂಡ್ ಹ್ಯಾಮರ್: ಬಳಸಲಾಗಿರುವ ಕಾಂಕ್ರೀಟ್‌ನ ಸಾಮರ್ಥ್ಯ ತಿಳಿದುಕೊಳ್ಳಬಹುದಾದ ಮತ್ತೊಂದು ಸಾಧನ.
* ವೇಯಿಂಗ್ ಸ್ಕೇಲ್: 30 ಕೆ.ಜಿ ತೂಕ ಮಾಡುವ ಸಾಮರ್ಥ್ಯವಿರುವ ಯಂತ್ರ.
ಪಾಲಿಕೆಯ ವ್ಯಾಪ್ತಿಯಲ್ಲಿ ನಿರ್ವಹಿಸುವ ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ಸಿದ್ಧಪಡಿಸಿರುವ ಈ ಸಂಚಾರಿ ವಾಹನಗಳ ಸುರಕ್ಷತೆಯ ಹಿತದೃಷ್ಟಿಯಿಂದ, ಮುಂಜಾಗೃತಾ ಕ್ರಮವಾಗಿ ತಲಾ 1 ಅಗ್ನಿಶಾಮಕ ವಾಹನ ಸರ ಇರಿಸಲಾಗಿದೆ ಎಂದು ಬಿಬಿಎಂಪಿಯ ಗುಣ ನಿಯಂತ್ರಣ ವಿಭಾಗದ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.












Click it and Unblock the Notifications