ಗಾಡಿ ಕೈಕೊಟ್ತು ಅಂತ ರಸ್ತೆಬದಿ ನಿಲ್ಲಿಸಿ ಹೋದರೆ ಏನಾಗುತ್ತೆ ಗೊತ್ತಾ?
ಬೆಂಗಳೂರು, ಮೇ 28: ನೀವು ಕಚೇರಿಗೋ , ಮನೆಗೋ ಅಥವಾ ಇನ್ಯಾವುದೋ ಕಾರ್ಯಕ್ರಮಕ್ಕೆ ಹೊಗ್ತಿರ್ತೀರಾ ಏಕಾಏಕಿ ನಿಮ್ಮ ವಾಹನ ಮುಂದಕ್ಕೆ ಹೋಗದೆ ಕೆಟ್ಟುನಿಂತುಬಿಡುತ್ತದೆ. ಹಾಗಂತಾ ಗಾಡಿಯನ್ನು ಅಲ್ಲಿಯೇ ಬಿಟ್ಟು ಹೋದರೆ ಗಂಟೆಗೆ 50 ರೂ ದಂಡ ತೆರಬೇಕಾಗುತ್ತದೆ ನೆನಪಿನಲ್ಲಿಡಿ.
ನಗರದಲ್ಲಿ ಸಂಚಾರ ಪೊಲೀಸರು ಹಾಳಾದ ವಾಹನಗಳ ಮೇಲೆ ಭಾರಿ ಮೊತ್ತದ ದಂಡ ವಿಧಿಸಲು ತೀರ್ಮಾನಿಸುವ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಈ ಕ್ರಮದಂತೆ ಕೆಟ್ಟು ನಿಂತ ವಾಹನಗಳನ್ನು ರಸ್ತೆ ಬದಿ ಒಂದು ಗಂಟೆ ನಿಲ್ಲಿಸಿದರೆ 50 ರೂ ದಂಡ ವಿಧಿಸಲಾಗುತ್ತದೆ. ಇಡೀ ದಿನ ನಿಲ್ಲಿಸಿದರೆ 1200 ರೂ ಹಾಗೂ ಒಂದು ತಿಂಗಳು ನಿಲ್ಲಿಸಿದರೆ 36 ಸಾವಿರ ರೂ ದಂಡ ಹಾಕಲಾಗುವುದು ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಎಲ್ಲೆಂದರಲ್ಲಿ ಹಾಳಾದ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ, ಈಗಾಗಲೇ ಬೆಂಗಳೂರಲ್ಲಿ 80 ಲಕ್ಷಕ್ಕೂ ಹೆಚ್ಚು ವಾಹನಗಳಿವೆ, ಇವುಗಳು ಓಡಾಡುವುದೇ ಕಷ್ಟವಾಗಿರುವಾಗ ಮಧ್ಯ ಮಧ್ಯೆ ಕೆಟ್ಟಿರುವ ವಾಹನಗಳು ನಿಂತುಕೊಂಡರೆ ಪ್ರಯಾಣಿಕರಿಗೆ ಕಷ್ಟವಾಗುತ್ತದೆ.
ದಂಡ ವಿಧಿಸುವ ಕ್ರಮಕ್ಕೆ ಸರ್ಕಾರಿ ವಾಹನಗಳು ಕೂಡ ಹೊರತಾಗಿಲ್ಲ, ಬಿಎಂಟಿಸಿ, ಬಿಬಿಎಂಪಿಯ ವಾಹನಗಳಿಗೂ ಈ ಪ್ರಮಾಣದ ದಂಡ ವಿಧಿಸಲು ನಿರ್ಧರಿಸಲಾಗಿದೆ. ಕೆಲ ವಾಹನಗಳು ಸಾರ್ವಜನಿಕ ಸ್ಥಳಗಳಲ್ಲಿ ತಿಂಗಳುಗಟ್ಟಲೆ ನಿಂತಿರುವುದು ಕಂಡು ಬಂದಿದೆ. ಹೀಗಾಗಿ ಪೊಲೀಸ್ ಇಲಾಖೆ ಈ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.












Click it and Unblock the Notifications