ಹಾಸಿಗೆ, ತಟ್ಟೆಯೊಂದಿಗೆ ಬಸ್ ನಿಲ್ದಾಣಕ್ಕೆ ಬಂದ ವಾಟಾಳ್
ಬೆಂಗಳೂರು, ಏ. 30 : 'ರಸ್ತೆ ಸಾರಿಗೆ ಮತ್ತು ಸುರಕ್ಷತೆ ವಿಧೇಯಕ' ವಿರೋಧಿಸಿ ವಿವಿಧ ಸಂಘಟನೆಗಳು ಒಂದು ದಿನದ ಸಾರಿಗೆ ಮುಷ್ಕರಕ್ಕೆ ಕಡೆ ನೀಡಿವೆ. ಸದಾ ವಿಭಿನ್ನವಾಗಿ ಪ್ರತಿಭಟನೆ ಮಾಡುವ ವಾಟಾಳ್ ನಾಗರಾಜ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಲಗುವ ಮೂಲಕ ಮುಷ್ಕರಕ್ಕೆ ಬೆಂಬಲ ನೀಡಿದರು.
ಗುರುವಾರ ಬೆಳಗ್ಗೆ ಮೆಜೆಸ್ಟಿಕ್‌ನ ಬಿಎಂಟಿಸಿ ನಿಲ್ದಾಣದ ಮುಂಭಾಗಕ್ಕೆ ತಮ್ಮ ಸಂಗಡಿಗರೊಂದಿಗೆ ಹಾಸಿಗೆ, ತಟ್ಟೆ, ದಿಂಬಿನೊಂದಿಗೆ ಹಾಜರಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಿಲ್ದಾಣದಲ್ಲಿ ಮಲಗುವ ಮೂಲಕ ಮುಷ್ಕರಕ್ಕೆ ಬೆಂಬಲ ಕೊಟ್ಟರು. [ಸಾರಿಗೆ ಮುಷ್ಕರದ ಮುಖ್ಯಾಂಶಗಳು]

ನಿಲ್ದಾಣದ ಮುಂಭಾಗದಲ್ಲಿ ಹಾಸಿಗೆ ಹಾಸಿಕೊಂಡು ತಟ್ಟೆ, ಲೋಟ ಇಟ್ಟುಕೊಂಡು ಕೆಲವು ಕಾಲ ಮಲಗಿದ ವಾಟಾಳ್ ನಾಗರಾಜ್, ರಸ್ತೆ ಸಾರಿಗೆ ಮತ್ತು ಸುರಕ್ಷತೆ ವಿಧೇಯಕ ವಿರೋಧಿಸಿ ನಡೆಸುತ್ತಿರುವ ಬಂದ್‌ಗೆ ತಮ್ಮ ಬೆಂಬಲವಿದೆ ಎಂದು ಘೋಷಿಸಿದರು. [ಸಾರಿಗೆ ಮುಷ್ಕರ ಏಕೆ ಮಾಡಲಾಗುತ್ತಿದೆ?]
ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿಯವರು ಬಂದ್‌ಗೆ ಬೆಂಬಲ ನೀಡಿರುವುದು ಸರಿಯಾಗಿದೆ ಎಂದು ಹೇಳಿದ ವಾಟಾಳ್ ನಾಗರಾಜ್, ಕೇಂದ್ರ ಸರ್ಕಾರ ವಾಸ್ತವ ಸ್ಥಿತಿಯನ್ನು ಅರಿತು ವಿಧೇಯಕವನ್ನು ಜಾರಿಗೆ ತರಲಿ. ಎಲ್ಲೋ ಕುಳಿತುಕೊಂಡು ನಿಯಮ ರೂಪಿಸಿದರೆ, ಅದು ಚಾಲಕರ ಮೇಲೆ ಪರಿಣಾಮ ಬೀರಲಿದೆ ಎಂದರು. [ಸಾರಿಗೆ ಮುಷ್ಕರ ಬೆಂಗಳೂರಿನಲ್ಲಿ ಹೇಗಿದೆ?]

ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ : 'ರಸ್ತೆ ಸಾರಿಗೆ ಮತ್ತು ಸುರಕ್ಷತೆ ವಿಧೇಯಕ' ವಿರೋಧಿಸಿ ಒಂದು ದಿನದ ಸಾರಿಗೆ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ದೇಶಾದ್ಯಂತ 54ಕ್ಕೂ ಹೆಚ್ಚು ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ. ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಮುಷ್ಕರಕ್ಕೆ ಕೈಜೋಡಿಸಿವೆ.
ಬೆಳಗ್ಗೆ 6 ರಿಂದ ಸಂಜೆ 6ರ ತನಕ ಮುಷ್ಕರ ನಡೆಯತ್ತಿದ್ದು ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಆಟೋ, ಟ್ಯಾಕ್ಸಿ, ಲಾರಿಗಳು ಎಂದಿನಂತೆ ಸಂಚರಿಸುತ್ತಿವೆ. ಕರ್ನಾಟಕದಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.



Click it and Unblock the Notifications
