Vande Bharat Express: ರೈಲಿನ ಹಾಟ್ ಎಕ್ಸೆಲ್‌ನಲ್ಲಿ ಬೆಂಕಿ ಕಿಡಿ, ದಾವಣಗೆರೆಯಲ್ಲಿ ತುರ್ತು ನಿಲುಗಡೆ
ಬೆಂಗಳೂರು, ಜೂನ್ 28: ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಹೆಚ್ಚು ದಕ್ಷತೆ, ಐಶಾರಾಮಿ ಮತ್ತು ಸುರಕ್ಷತಾ ಚಾಲನೆಗೆ ಹೆಸರಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರು ಸುರಕ್ಷತಾ ಭಯ ಎದುರಿಸುವಂತಾಯಿತು. ಹೌದು, ಧಾರವಾಡದಿಂದ ಬೆಂಗಳೂರಿಗೆ 502 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಂದೇ ಭಾರತ್ ರೈಲು ಮಾರ್ಗ ಮಧ್ಯದಲ್ಲಿಯೇ ತುರ್ತು ನಿಲುಗಡೆ ಮಾಡಿತು. ಇದರಿಂದ ಪ್ರಯಾಣಿಕರು ಕೆಲ ಕಾಲ ಪರದಾಡುವಂತಾಯಿತು.
ಎಂದಿನಂತೆ ಶುಕ್ರವಾರ ಮಧ್ಯಾಹ್ನ ಉತ್ತರ ಕರ್ನಾಟಕದ ಧಾರವಾಡದಿಂದ ರಾಜಧಾನಿ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತೆರಳುತ್ತಿತ್ತು. ಈ ವೇಳೆ ಅದು ದಾವಣಗೆರೆ ರೈಲು ನಿಲ್ದಾಣದಲ್ಲಿ ತುರ್ತು ನಿಲುಗಡೆ ಮಾಡುವಂತಾಯಿತು. ಇದರಿಂದ ಅಷ್ಟು ಪ್ರಯಾಣಿಕರು ಸುರಕ್ಷತಾ ಭಯ ಎದುರಿಸಬೇಕಾಯಿತು. ಮತ್ತೊಂದು ರೈಲಿಗೆ ತೆರಳುವಂತಾಯಿತು.

ನೈಋತ್ಯ ರೈಲ್ವೆ ವಲಯ ಹೇಳುವ ಪ್ರಕಾರ, ಹಾಟ್ ಎಕ್ಸೆಲ್ ನಿಂದಾಗಿ ಚಲಿಸುತ್ತಿದ್ದ ರೈಲಿನ ಕೆಳಭಾಗದಲ್ಲಿ ಬೆಂಕಿ ಕಿಡಿ ಹೊತ್ತಿಕೊಂಡಿದೆ. ಇದರಿಂದಾಗಿ ಕೊಂಚ ಸೃಷ್ಟಿಯಾಗುತ್ತಿದ್ದಂತೆ ಅದು ಇಂಜಿನ್‌ಗೆ ಮಾಹಿತಿ ರವಾನಿಸಿದೆ. ಕೂಡಲೇ ಎಚ್ಚೆತ್ತ ಲೋಕೋಪೈಲಟ್ ರೈಲು ನಿಲಿಸಿ ಬೆಂಕಿ ಕಿಡಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಹರಿಹರ-ದಾವಣಗೆರೆ ಮಧ್ಯ ಭಾಗದಲ್ಲಿ ನಡೆದಿದೆ.
ಈ ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು. ಪರಿಶೀಲಿಸಿದ ಅಧಿಕಾರಿಗಳು ಬೆಂಕಿ ಕಿಡಿ ಆರಿಸಿ, ಅಲ್ಲಿಂದ ದಾವಣೆಗೆರೆ ರೈಲು ನಿಲ್ದಾಣವರೆಗೆ ತಂದು ನಿಲ್ಲಿಸಿದರು. 100 ಕಿಲೋ ಮೀಟರ್ ವೇಗದಲ್ಲಿ ಚಲಿಸುವಾಗ ರೈಲಿನ 'ಸಿ 4' ಕೋಚ್ ನ ಹಾಟ್ ಎಕ್ಸೆಲ್‌ನಿಂದ ಬೆಂಕಿ ಕಿಡಿ ಹಾರಿ ಮಧ್ಯಾಹ್ನ 3:30 ಗಂಟೆಗೆ ಘಟನೆ ನಡೆದಿದೆ. ಲೋಪೋಪೈಲಟ್ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದೆ. ರೈಲ್ವೆ ಅಧಿಕಾರಿಗಳು ಮಾಹಿತಿ ತಿಳಿದು ರೈಲು ಪರಿಶೀಲಿಸಿ ನಂತರ ಅದನ್ನು ಹರಿಹರ ವರ್ಕ್ ಶಾಪ್‌ಗೆ ಕಳುಹಿಸಲಾಯಿತು ಎಂದು ನೈಋತ್ಯ ರೈಲ್ವೆ ವಲಯ (SWR) ಮಾಹಿತಿ ನೀಡಿದೆ.
ವಂದೇ ಭಾರತ್ ರೈಲಿನ 502 ಪ್ರಯಾಣಿಕರನ್ನು ಜನ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಜೋಧ್‌ಪುರ ಎಕ್ಸ್‌ಪ್ರೆಸ್ ಮೂಲಕ ಬೆಂಗಳೂರಿಗೆ ಕಳುಹಿಸಲಾಯಿತು. ಪ್ರಯಾಣಿಕರಿಗೆ ಆದ ಅಡಣೆಗೆ ವಿಷಾಧವಿದೆ. ಪ್ರಯಾಣಿಕರಿಗೆ ಟಿಕೆಟ್ ಹಣ ನೀಡಲಾಗುವುದು ಎಂದು ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ಹಾಟ್ ಆಕ್ಸಲ್' ಎಂದರೇನು?
'ಹಾಟ್ ಆಕ್ಸಲ್' ಎಂದರೆ ಆಕ್ಸಲ್‌ನೊಳಗಿನ ಅಸಹಜ ಘರ್ಷಣೆಯಿಂದ ತೀವ್ರವಾದ ಶಾಖ ಉಂಟಾಗುತ್ತದೆ. ಅದು ಕೆಲವೊಮ್ಮೆ ಬೆಂಕಿ, ಹೊಗೆ ಉಂಟು ಮಾಡುತ್ತದೆ. ಆಕ್ಸೆಲ್ ಬಳಿಕ ಏನಾದರು ಸಿಲುಕಿದ್ದರೆ ಅದಕ್ಕೆ ಬೆಂಕಿ ಹೊತ್ತಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ಅದನ್ನು ಆರಿಸದಿದ್ದರೆ ಅಪಾಯ ಎದುರಾಗುವ ಸಂಭವ ಹೆಚ್ಚಿರುತ್ತದೆ ಎಂದು ತಿಳಿಸಿದರು.












Click it and Unblock the Notifications