Vaikuntha Ekadashi 2025: ವೈಕುಂಠ ಏಕಾದಶಿಯಂದು ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ ವೆಂಕಟೇಶ್ವರನ ದೇವಸ್ಥಾನಗಳು
ಇಂದು ವೈಕುಂಠ ಏಕಾದಶಿಯನ್ನು ಶ್ರದ್ಧಾಭಕ್ತಿಯಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿರುವ ಪ್ರಮುಖ ದೇವಸ್ಥಾನಗಳು ಕೂಡ ವೈಕುಂಠ ಏಕಾದಶಿಗೆ ಸಜ್ಜಾಗಿವೆ. ಈ ದಿನವನ್ನು ಪುತ್ತ್ರಾದಾ ಏಕಾದಶಿ ಎಂದೂ ಕರೆಯಲಾಗುತ್ತದೆ. ಇದು ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಈ ದಿನ ವಿಷ್ಣುವಿನ ವೈಕುಂಠ ಲೋಕದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ಭಕ್ತರು ಉಪವಾಸ, ಪೂಜೆ, ದಾನ ಮಾಡುವ ಮೂಲಕ ಮೋಕ್ಷ ಪಡೆಯುತ್ತಾರೆ. ಈ ದಿನವನ್ನು 'ಮೋಕ್ಷದ ಏಕಾದಶಿ' ಎಂದೂ ಕರೆಯುತ್ತಾರೆ. ಕಷ್ಟಗಳನ್ನು ನಿವಾರಿಸಿ, ಆತ್ಮ-ಶುದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಇದು ಉತ್ತಮ ದಿನ ಎಂದು ಪರಿಗಣಿಸಲಾಗಿದೆ. ಈ ವೈಕುಂಠ ಏಕಾದಶಿಯ ದಿನ ಬೆಂಗಳೂರಿನಲ್ಲಿ ವೆಂಕಟೇಶ್ವರನ ಆಶೀರ್ವಾದ ಪಡೆಯಲು ಭಕ್ತರು ಭೇಟಿ ನೀಡಬಹುದಾದ ಪ್ರಮುಖ ದೇವಸ್ಥಾನಗಳ ಪಟ್ಟಿ ಇಲ್ಲಿದೆ.
* ಕೋಟೆ ವೆಂಕಟರಮಣ ದೇವಸ್ಥಾನ
ಕೋಟೆ ವೆಂಕಟರಮಣ ದೇವಸ್ಥಾನವು ಬೆಂಗಳೂರಿನ ಕೃಷ್ಣರಾಜೇಂದ್ರ ರಸ್ತೆಯಲ್ಲಿರುವ ಹಳೆಯ ದೇವಸ್ಥಾನಗಳಲ್ಲಿ ಒಂದಾಗಿದ್ದು, 17ನೇ ಶತಮಾನದಲ್ಲಿ ಚಿಕ್ಕ ದೇವರಾಜ ಒಡೆಯರ್ ನಿರ್ಮಿಸಿದ್ದಾರೆ. ಇದು ದ್ರಾವಿಡ ಮತ್ತು ವಿಜಯನಗರ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ದಿನ ಇಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಗಿದ್ದು, ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿದೆ.

* ಟಿಟಿಡಿ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನ
ವಯ್ಯಾಲಿಕಾವಲ್‌ನಲ್ಲಿರುವ ಟಿಟಿಡಿ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆಯಿಂದ ತಡರಾತ್ರಿಯವರೆಗೆ ನಿರಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರಿಗೆ ಅನ್ನಪ್ರಸಾದ, ಕುಡಿಯುವ ನೀರು, ಮತ್ತು ಲಡ್ಡು ಪ್ರಸಾದ ವ್ಯವಸ್ಥೆ ಇರಲಿದೆ. ಹಿರಿಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆ ಕೂಡ ಮಾಡಲಾಗಿದೆ.
* ಇಸ್ಕಾನ್ ಬೆಂಗಳೂರು
ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿರುವ ಶ್ರೀನಿವಾಸ ಗೋವಿಂದರಿಗೆ ಇಂದು ವಿಶೇಷ ಅಭಿಷೇಕ ಮತ್ತು ಪೂಜೆಗಳು ನೆರವೇರಲಿವೆ. ಪಲ್ಲಕ್ಕಿ ಉತ್ಸವ, ಕಲ್ಯಾಣೋತ್ಸವದಂತಹ ಕಾರ್ಯಕ್ರಮಗಳು ವೈಭವದಿಂದ ನಡೆಯಲಿದ್ದು, ಭಕ್ತರಿಗೆ ದಿನವಿಡೀ ದರ್ಶನಕ್ಕೆ ಅವಕಾಶ ಇರಲಿದೆ.

* ರಾಜಾಜಿನಗರ ಶ್ರೀವೆಂಕಟೇಶ್ವರ ದೇವಸ್ಥಾನ
ಸುಮಾರು 140 ವರ್ಷಗಳಿಗಿಂತ ಹಳೆಯದಾದ ಈ ದೇವಾಲಯವು ಬೆಂಗಳೂರಿನ ರಾಜಾಜಿನಗರದಲ್ಲಿದೆ. ವೈಕುಂಠ ಏಕಾದಶಿಯಂದು ಈ ದೇವಸ್ಥಾನ ಕೂಡ ಭಕ್ತರನ್ನು ಆಕರ್ಷಿಸುತ್ತದೆ. ದಿನವಿಡೀ ವಿಶೇಷ ಪೂಜೆ ಅಲಂಕಾರಗಳೊಂದಿಗೆ ವೆಂಕಟೇಶ್ವರನನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ.
* ತ್ಯಾಗರಾಜನಗರದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ
ವೈಕುಂಠ ಏಕಾದಶಿಯಂದು ತ್ಯಾಗರಾಜನಗರದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ದ್ವಾರದ ನಿರ್ಮಾಣ,
ವಿಶೇಷ ಅಭಿಷೇಕ, ಪುಷ್ಪಾಲಂಕಾರ, ಮತ್ತು ದೇವರನಾಮ ಕಾರ್ಯಕ್ರಮಗಳು, ದೇವರ ಉತ್ಸವ ಕೂಡ ನಡೆಯುತ್ತದೆ. ಸಹಸ್ರಾರು ಭಕ್ತರು ಇಂದು ಇಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.
* ಬಸವನಗುಡಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ
ಬಸವನಗುಡಿಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು 1877ರಲ್ಲಿ ನಿರ್ಮಿಸಲ್ಪಟ್ಟಿತು, ಇದು ಚಿರೆಕಲ್ಲು ಮತ್ತು ಗಾರೆಗಳಿಂದ ನಿರ್ಮಿಸಲ್ಪಟ್ಟ ಹಳೆಯ ದೇವಾಲಯವಾಗಿದ್ದು, ನಂದಿ ದೇವಸ್ಥಾನದ ಸಮೀಪದಲ್ಲಿದೆ. ಈ ದೇವಸ್ಥಾನವು ಸ್ಥಳೀಯ ಗಾರೆಗಳ ಕೈಯಿಂದ ನಿರ್ಮಾಣಗೊಂಡಿದ್ದು, ಸಾಂಪ್ರದಾಯಿಕ ವಾಸ್ತುಶಿಲ್ಪವನ್ನು ಹೊಂದಿದೆ. ವೈಕುಂಠ ಏಕಾದಶಿಯಂದು ಇಲ್ಲಿ ವಿಶೇಷ ಅಲಂಕಾರ ಗಮನ ಸೆಳೆಯುತ್ತದೆ.

* ಜಯನಗರ ಶ್ರೀವೆಂಕಟರಮಣ ಸ್ವಾಮಿ ದೇವಸ್ಥಾನ
ಜಯನಗರದಲ್ಲಿ ಹಲವಾರು ವೆಂಕಟರಮಣ ಸ್ವಾಮಿ ದೇವಸ್ಥಾನಗಳಿದ್ದು, ಅವುಗಳಲ್ಲಿ 3ನೇ ಬ್ಲಾಕ್‌ನಲ್ಲಿರುವ ಈ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನ ಪ್ರಮುಖವಾಗಿದೆ. ಜಯನಗರದಲ್ಲಿರುವ ದೇವಸ್ಥಾನಗಳು ಪ್ರಶಾಂತ ವಾತಾವರಣ, ದ್ರಾವಿಡ ಶೈಲಿಯ ವಾಸ್ತುಶಿಲ್ಪ ಮತ್ತು ದೈನಂದಿನ ಪೂಜೆಗಳಿಂದ ಭಕ್ತರ ಪಾಲಿಗೆ ನೆಮ್ಮದಿಯ ತಾಣಗಳಾಗಿವೆ.
* ತಿರುಮಲಗಿರಿ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ
ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಪ್ರಸಿದ್ಧ ತಿರುಮಲಗಿರಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ತಿರುಪತಿ ತಿರುಮಲದಂತೆಯೇ ವೆಂಕಟೇಶ್ವರ ಸ್ವಾಮಿಯ ವಿಗ್ರಹ ಮತ್ತು ವೈಭವದಿಂದ ಭಕ್ತರನ್ನು ಸೆಳೆಯುತ್ತದೆ. ಇದು ಲಕ್ಷ್ಮಿ ದೇವಿಯೊಂದಿಗೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿತವಾಗಿದೆ. ಇದು ಸಾಂಪ್ರದಾಯಿಕ ದಕ್ಷಿಣ ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿದ್ದು, ಈ ದೇವಾಲಯವು ವೈಕುಂಠ ಏಕಾದಶಿ ಸೇರಿದಂತೆ ವಿವಿಧ ಹಬ್ಬಗಳಿಗೆ ಹೆಸರುವಾಸಿಯಾಗಿದೆ.
* ಇಸ್ಕಾನ್ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನ
ಇಸ್ಕಾನ್ ಶ್ರೀರಾಜಾಧಿರಾಜ ಗೋವಿಂದ ದೇವಸ್ಥಾನವು ಬೆಂಗಳೂರಿನ ವಸಂತಪುರ, ವೈಕುಂಠ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದು ತಿರುಮಲ ತಿರುಪತಿ ದೇವಾಲಯದ ಶೈಲಿಯಲ್ಲಿ ನಿರ್ಮಿಸಲಾದ ದ್ರಾವಿಡ ಶೈಲಿಯ ದೇವಾಲಯ. ಇಲ್ಲಿ ಶ್ರೀರಾಜಾಧಿರಾಜ ಗೋವಿಂದ ದೇವರ ವಿಗ್ರಹವಿದೆ. ಈ ದೇವಾಲಯವು ಬೆಂಗಳೂರಿನಲ್ಲಿ ತಿರುಪತಿಯ ಅನುಭವವನ್ನು ನೀಡುತ್ತದೆ.
ದೊಮ್ಮಲೂರಿನ ಚೊಕ್ಕನಾಥ ದೇವಸ್ಥಾನ, ಕೆ.ಆರ್.ಪುರದ ಕೋಟೆ ವೆಂಕಟೇಶ್ವರ ದೇವಸ್ಥಾನ, ಈಜಿಪುರದ ಕೋದಂಡರಾಮ ದೇವಸ್ಥಾನ, ವಸಂತಪುರದ ವಸಂತ ವಲ್ಲಭರಾಯ ದೇವಸ್ಥಾನ, ಅಂಚೆಪೇಟೆ ರಂಗನಾಥಸ್ವಾಮಿ ದೇವಸ್ಥಾನ, ಮಲ್ಲೇಶ್ವರದ ಲಕ್ಷ್ಮಿ ನರಸಿಂಹ ದೇವಸ್ಥಾನಗಳು ಕೂಡ ವೈಕುಂಠ ಏಕಾದಶಿಗೆ ಭಕ್ತರು ಹೆಚ್ಚಾಗಿ ಭೇಟಿ ನೀಡುವ ಪ್ರಮುಖ ದೇವಸ್ಥಾನಗಳಾಗಿವೆ.












Click it and Unblock the Notifications