ಬೆಂಗಳೂರಲ್ಲಿ ಅಂಧರ ಕ್ರಿಕೆಟ್ ತಂಡ ಭೇಟಿಯಾದ ಅಮೆರಿಕ ರಾಯಭಾರಿ ಎರಿಕ್
ಬೆಂಗಳೂರು, ಮೇ 25: ಈ ಬಾರಿಯ ಟಿ20 ವಿಶ್ವಕಪ್ ಆತಿಥ್ಯವನ್ನು ಅಮೆರಿಕ ವಹಿಸಲಿದೆ. ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಬೆಂಗಳೂರು ನಗರದಲ್ಲಿ ಅಂಧರ ಕ್ರಿಕೆಟ್ ತಂಡವನ್ನು ಭೇಟಿ ಮಾಡಿದರು.
ಶನಿವಾರ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮೊದಲ ಬಾರಿಗೆ ಬೆಂಗಳೂರು ಭೇಟಿ ನೀಡಿದರು. ಬೆಂಗಳೂರಿನ ವಿಜ್ಞಾನ ಗ್ಯಾಲರಿಗೆ ಭೇಟಿ ನೀಡಿದರು ಮತ್ತು ಅಂಧರ ಕ್ರಿಕೆಟ್ ತಂಡವನ್ನು ಭೇಟಿ ಮಾಡಿದರು. ಅಂಧರ ಕ್ರಿಕೆಟ್ ಉತ್ತೇಜಿಸಲು ಈ ತಂಡ ಅಮೆರಿಕಕ್ಕೆ ಭೇಟಿ ನೀಡುತ್ತಿರುವುದಕ್ಕೆ ಶುಭ ಹಾರೈಸಿದರು.

ರಾಯಭಾರಿ ಎರಿಕ್ ಗಾರ್ಸೆಟ್ಟಿ ಬಾಹ್ಯಾಕಾಶ ವಲಯದ ಮಂಚೂಣಿ ನಾಯಕರು ಮತ್ತು ಉದ್ಯಮಿಗಳನ್ನು ಭೇಟಿ ಮಾಡಲು ಬೆಂಗಳೂರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ಅಮೆರಿಕ-ಭಾರತದ ಸಂಬಂಧ ಕಡಲ ತಡಿಯಿಂದ ಬಾಹ್ಯಾಕಾಶದ ನಕ್ಷತ್ರಗಳವರೆಗೂ ವಿವಿಧ ವಲಯಗಳಲ್ಲಿ ವಿಸ್ತರಿಸಲಿರುವ ವ್ಯಾಪಾರ ವಾಣಿಜ್ಯ ಸಂಬಂಧಗಳ ಮಹತ್ವವನ್ನು ಸಾರಿದರು.
ಕಾನ್ಸಲ್ ಜನರಲ್ ಕ್ರಿಸ್ ಹಾಡ್ಜಸ್ ಅವರೊಂದಿಗೆ ಇಸ್ರೋ ಅಧ್ಯಕ್ಷ ಡಾ. ಸೋಮನಾಥ್ ಅವರನ್ನು ಭೇಟಿ ಮಾಡಿದ ಎರಿಕ್ ಗಾರ್ಸೆಟ್ಟಿ ನಾಸಾ-ಇಸ್ರೋ ಸಿಂಥೆಟಿಕ್ ಅರ‍್ಚರ್ ರಾಡಾರ್ ಮಿಷನ್ (NISAR) ಸೇರಿದಂತೆ ಬಾಹ್ಯಾಕಾಶವಲಯದಲ್ಲಿ ಸಹಯೋಗಗಳ ಕುರಿತು ಮಾತುಕತೆ ನಡೆಸಿದರು.
ಉದ್ಯಮದ ಪ್ರಮುಖರು ಮತ್ತು ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಇಂಡಿಯಾದ ಸದಸ್ಯರೊಂದಿಗೆ, ವ್ಯೂಹಾತ್ಮಕ ಭದ್ರತೆ ಮತ್ತು ತಂತ್ರಜ್ಞಾನದ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಯುಎಸ್-ಇಂಡಿಯಾ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎರ‍್ಜಿಂಗ್ ಟೆಕ್ನಾಲಜೀಸ್ (iCET) ಮಹತ್ವದ ಕುರಿತು ಮಾತನಾಡಿದರು.
ಅಮೆರಿಕದ ರಾಯಭಾರಿಗಳು ಭಾರತದ ಮೊದಲ ಸಂಶೋಧನೆ ಆಧಾರಿತ ಹಾಗೂ ಸ್ವತಂತ್ರ ಲಾಭರಹಿತ ಸಾರ್ವಜನಿಕ ಸಂಸ್ಥೆಯಾದ ಬೆಂಗಳೂರು ಸೈನ್ಸ್ ಗ್ಯಾಲರಿಗೆ ಭೇಟಿ ನೀಡಿ 'ಕಾರ್ಬನ್' ಪ್ರದರ್ಶನವನ್ನು ವೀಕ್ಷಿಸಿದರು. ಜಂಟಿ ಬಾಹ್ಯಾಕಾಶ ಅನ್ವೇಷಣೆ, ಉಪಗ್ರಹಗಳ ಉಡಾವಣೆ ಹಾಗೂ ಗಗನಯಾತ್ರಿಗಳಿಗೆ ತರಬೇತಿ ನೀಡುವುದರ ಕುರಿತು ಕೇಂದ್ರೀಕೃತವಾಗಿದ್ದ ಅಮೆರಿಕ-ಭಾರತ ವಾಣಿಜ್ಯ ಬಾಹ್ಯಾಕಾಶ ಸಹಕಾರ ಸಮ್ಮೇಳನದಲ್ಲಿ ಮಾತನಾಡಿದರು.
"ಅಮೆರಿಕ-ಭಾರತ ವಾಣಿಜ್ಯ ಬಾಹ್ಯಾಕಾಶ ಸಹಕಾರ ಸಮ್ಮೇಳನದಲ್ಲಿ ಭಾಗವಹಿಸಲು ನಾನು ಬೆಂಗಳೂರಿಗೆ ಬಂದಿರುವುದಕ್ಕೆ ಸಂತೋಷವಾಗಿದೆ. ಇಸ್ರೋ ಅಧ್ಯಕ್ಷ ಡಾ. ಸೋಮನಾಥ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿರುವುದು ಹೆಮ್ಮೆಯ ಸಂಗತಿ" ಎಂದರು.
"ನಾವು ನಮ್ಮ ಪಾಲುದಾರಿಕೆಯನ್ನು ನಕ್ಷತ್ರಗಳಿಗೆ ಮತ್ತು ಅದರಾಚೆಗೆ ಕೊಂಡೊಯ್ಯಲು ವಾಣಿಜ್ಯ ಅವಕಾಶಗಳನ್ನು ಅನಾವರಣ ಮಾಡುತ್ತೇವೆ. ಇಂದಿನ ಕಾರ್ಯಕ್ರಮ ಅಮೆರಿಕ ಮತ್ತು ಭಾರತದ ಬಾಹ್ಯಾಕಾಶ ಸಹಕಾರವನ್ನು ವಾಯುಮಂಡಲಕ್ಕೆ ವಿಸ್ತರಿಸುವ ಹಲವು ಕ್ರಮಗಳಲ್ಲಿ ಒಂದಾಗಿದೆ" ಎಂದು ಹೇಳಿದರು.
ಕ್ರಿಕೆಟ್ ತಂಡದ ಭೇಟಿ: ರಾಯಭಾರಿ ಎರಿಕ್ ಗಾರ್ಸೆಟ್ಟಿ ಅಂಧರ ಕ್ರಿಕೆಟ್ ಕ್ಷೇತ್ರದಲ್ಲಿ ಮಾಜಿ ವಿಶ್ವ ಚಾಂಪಿಯನ್ ಆಗಿರುವ ಭಾರತ ತಂಡವನ್ನು ಭೇಟಿ ಮಾಡಿದರು. 2028ರ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್‌ಗೆ ಮುನ್ನ ಅಂಧರ ಕ್ರಿಕೆಟ್ ಅನ್ನು ಉತ್ತೇಜಿಸಲು ತಂಡ ಅಮೆರಿಕಕ್ಕೆ ಭೇಟಿ ನೀಡುತ್ತಿರುವುದಕ್ಕೆ ಶುಭ ಹಾರೈಸಿದರು.












Click it and Unblock the Notifications