ಮೋದಿ ಟೀಕೆ : ಅನಂತಮೂರ್ತಿಗೆ ಬೆದರಿಕೆ ಕರೆ
ಬೆಂಗಳೂರು, ಮೇ 21 : ಭಾರತದ ಪ್ರಧಾನಿಯಾಗಲಿರುವ ನರೇಂದ್ರ ಮೋದಿ ಅವರನ್ನು ಬಹಿರಂಗವಾಗಿ ಟೀಕಿಸುತ್ತಲೇ ಬಂದಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಕಳೆದ ವಾರದಿಂದ ಪೊಲೀಸ್ ಭದ್ರತೆಯಲ್ಲಿಯೇ ದಿನ ದೂಡುವಂತಾಗಿದೆ.
ಚುನಾವಣೆ ಫಲಿತಾಂಶ ಪ್ರಕಟವಾದ ದಿನದಿಂದಲೇ 81 ವರ್ಷದ ಹಿರಿಯ ಜೀವಿಗೆ ಮುನ್ನೆಚ್ಚರಿಕೆಯಾಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ, ತಮಗೆ ಅನಾಮಧೇಯರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಮೌಖಿಕವಾಗಿ ದೂರು ನೀಡಿರುವ ಕಾರಣ ಆರ್‌ಎಂವಿ ಎರಡನೇ ಹಂತದಲ್ಲಿರುವ ಅವರ ಮನೆಗೆ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದಾಗಿನಿಂದ ಅವರನ್ನು ತೀವ್ರವಾಗಿ ಟೀಕಿಸುತ್ತಲೇ ಬಂದವರು ಅನಂತಮೂರ್ತಿ. ಲೋಕಸಭೆ ಚುನಾವಣೆ ಪ್ರಕಟವಾಗಿ ಬಿಜೆಪಿ ಜಯಭೇರಿ ಬಾರಿಸಿ, ಮೋದಿ ಅವರು ಪ್ರಧಾನಿಯಾಗುವುದು ಖಚಿತವಾದ ಮೇಲೂ, 'ಮೋದಿ ಒಬ್ಬ ಸಾಧಾರಣ ನಾಯಕ' ಎಂದು ಮೂರ್ತಿಯವರು ವಾಕ್ ಸ್ವಾತಂತ್ರ್ಯದ ಪ್ರಯೋಗ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ತಾಣಗಳಲ್ಲಿ ಅನಂತಮೂರ್ತಿ ಅವರ ಟೀಕೆಯ ನುಡಿಗಳಿಗೆ ಮರುಟೀಕೆಯ ಅಸ್ತ್ರಗಳು ತೂರಿಕೊಂಡು ಬಂದಿದ್ದವು. "ಮೋದಿ ಪ್ರಧಾನಿಯಾದರೆ ನಾನು ಭಾರತದಿಂದ ತೊಲಗುತ್ತೇನೆ" ಎಂದು ಮೂರ್ತಿಯವರು ಆಡಿದ ಮಾತಿಗೆ ಪ್ರತಿಯಾಗಿ ಮಂಗಳೂರಿನ ನಮೋ ಬ್ರಿಗೇಡ್ ಅವರಿಗೆ ಪಾಕಿಸ್ತಾನಕ್ಕೆ ಹೋಗಲು ವಿಮಾನ ಟಿಕೆಟ್ ಕೂಡ ರವಾನೆ ಮಾಡಿತ್ತು.
"ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಸಿಆರ್‌ಎ (City Armed Reserve) ಪೊಲೀಸ್ ತುಕುಡಿಯನ್ನು ಅನಂತಮೂರ್ತಿ ಅವರ ಭದ್ರತೆಯಾಗಿ ನಿಯೋಜಿಸಲಾಗಿದ್ದು, ಇನ್‌ಸ್ಪೆಕ್ಟರೊಬ್ಬರು ಪ್ರತಿದಿನ ಎರಡು ಬಾರಿ ಅವರ ಮನೆಗೆ ಬಂದು ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುತ್ತಾರೆ" ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಹೇಳಿದ್ದಾರೆ.

ಇಂಥ ಹಿರಿಯ ಜೀವಿಗೆ ಈ ಸ್ಥಿತಿ ಬರಬಾರದಿತ್ತು
ಪ್ರಜಾಪ್ರಭುತ್ವದ ಅತಿದೊಡ್ಡ ರಾಷ್ಟ್ರವಾಗಿರುವ ಭಾರತದಲ್ಲಿ, ಯಾರನ್ನಾಗಲಿ ಹೊಗಳಲಾಗಲಿ ಅಥವಾ ಟೀಕಿಸಲಾಗಲಿ ಸ್ವಾತಂತ್ರ್ಯವಿದೆ. ಇಂಥ ಹಿರಿಯ ಜೀವಿಗೆ ಈ ಸ್ಥಿತಿ ಬರಬಾರದಿತ್ತು ಎಂದು ಹಲವಾರು ಗಣ್ಯ ಸಾಹಿತಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುಷ್ಕರ್ಮಿಗಳನ್ನು ಪ್ರಚೋದಿಸಲಾಗುತ್ತಿದೆ : ಕೆಎಂ
"ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮಗನಿಸಿದ್ದನ್ನು ಅಭಿವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ, ಬೆದರಿಸುವವರನ್ನು ನಿಯಂತ್ರಿಸಲು ಯಾವ ಬಿಜೆಪಿ ನಾಯಕರೂ ಮುಂದೆ ಬರುತ್ತಿಲ್ಲ. ಬದಲಾಗಿ, ಅವರನ್ನು ದುಷ್ಕರ್ಮಿಗಳನ್ನು ಪ್ರಚೋದಿಸಲಾಗುತ್ತಿದೆ. ನೋಡೋಣ, ಮುಂದಿನ ಐದು ವರ್ಷದಲ್ಲಿ ಏನಾಗುತ್ತೋ" ಎಂದು ಪ್ರಗತಿಪರ ಚಿಂತಕ, ವಿಮರ್ಷಕ ಕೆ ಮರುಳಸಿದ್ದಪ್ಪ ಅವರು ವಾಕ್ ಪ್ರಹಾರ ಮಾಡಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಬೆಲೆಯೆಲ್ಲಿ : ಕಾಸರವಳ್ಳಿ?
"ಮೋದಿ ಪ್ರಧಾನಿಯಾದರೆ ದೇಶ ಬಿಡುವುದಾಗಿ ಅನಂತಮೂರ್ತಿ ಹೇಳಿದ್ದನ್ನು ಯಥಾವತ್ತಾಗಿ ಅರ್ಥೈಸಬಾರದು. ಆ ಮಾತುಗಳ ಹಿಂದೆ ಅವರ ಕ್ರೋಧವಿರುವುದನ್ನು ಗಮನಿಸಬೇಕು. ಸ್ವತಂತ್ರವಾಗಿ ಅನಿಸಿಕೆಗಳನ್ನು ಹಂಚಿಕೊಳ್ಳಲು ಆಗಲಾರದಂಥ ಸನ್ನಿವೇಶವನ್ನು ಸೃಷ್ಟಿಸಬಾರದು. ಹೀಗಾದರೆ ಪ್ರಜಾಪ್ರಭುತ್ವಕ್ಕೆ ಬೆಲೆಯೆಲ್ಲಿ?" ಎಂದು ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಪ್ರಶ್ನಿಸಿದ್ದಾರೆ.

ಫಲಿತಾಂಶದ ದಿನ ಮೂರ್ತಿ ಏನೆಂದಿದ್ದರು?
ಚುನಾವಣೆ ಫಲಿತಾಂಶ ಪ್ರಕಟವಾದ ದಿನ, "ನರೇಂದ್ರ ಮೋದಿ ಒಬ್ಬ ಸಾಧಾರಣದಲ್ಲಿ ಸಾಧಾರಣ ವ್ಯಕ್ತಿ. ಅಂಥವರ ಪರವಾದ ಅಲೆ ಏಳುವುದಕ್ಕೆ ಹಗಲುರಾತ್ರಿ ಸುದ್ದಿ ಪ್ರಸಾರ ಮಾಡುವ ಸುದ್ದಿವಾಹಿನಿಗಳೇ ಕಾರಣ. ಅವರನ್ನು ವೈಟ್ ವಾಶ್ ಮಾಡಿ ಆಕರ್ಷಕವಾಗಿ ಕಾಣುವಂತೆ ಮಾಡಿವೆ" ಎಂದು ಡಾ. ಯು.ಆರ್. ಅನಂತಮೂರ್ತಿ ಅವರು ವ್ಯಂಗ್ಯವಾಡಿದ್ದರು.

ಮೋದಿ ಬೆಂಬಲಿಸಿದ್ದ ಎಸ್ಎಲ್ ಭೈರಪ್ಪ
ಅನಂತಮೂರ್ತಿಯವರಿಂದ ಟೀಕೆಗೊಳಗಾಗಿರುವ ಲೇಖಕ ಎಸ್ಎಲ್ ಭೈರಪ್ಪ ಅವರು ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸಿದ್ದರು. ನರೇಂದ್ರ ಮೋದಿ ಬಿಟ್ಟರೆ ಭಾರತಕ್ಕೆ ಪರ್ಯಾಯ ನಾಯಕರಿಲ್ಲ. ಅವರನ್ನು ಟೀಕಿಸುವ ಕೆಲ ಸಾಹಿತಿಗಳು, ಅವರು ಪ್ರಧಾನಿಯಾದರೆ ಹೂಗುಚ್ಛ ಹಿಡಿದು ನಿಲ್ಲುತ್ತಾರೆ ಎಂದು ಮೂರ್ತಿ ಅವರ ವಿರುದ್ಧ ಪರೋಕ್ಷ ದಾಳಿ ಮಾಡಿದ್ದರು.












Click it and Unblock the Notifications