Bengaluru 2nd Airport: ಬೆಂಗಳೂರು ನಗರದ ಮುಂದಿನ ಬೃಹತ್ ಯೋಜನೆಗಳ ಪಟ್ಟಿ
ಬೆಂಗಳೂರು, ಫೆಬ್ರವರಿ 12: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ಬಗೆಹರಿಸಲು ಹಲವು ಯೋಜನೆ ಜಾರಿಗೊಳಿಸಲಾಗುತ್ತಿದೆ. ಆದರೆ ಯಾವುವು ಸಹ ನಗರದ ಬೆಳೆಯುತ್ತಿರುವ ಜನಸಂಖ್ಯೆಗೆ ಪೂರಕವಾಗಿ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುತ್ತಿಲ್ಲ. ಬಿಎಂಟಿಸಿ, ನಮ್ಮ ಮೆಟ್ರೋ, ಆಟೋ, ಕ್ಯಾಬ್, ಖಾಸಗಿ ವಾಹನಗಳಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಸಾಮಾನ್ಯ ಎಂಬಂತೆ ಆಗಿದೆ.
ನಮ್ಮ ಮೆಟ್ರೋ ಜಾಲ ವಿಸ್ತರಣೆ, ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಸೇರಿ ಹಲವು ಯೋಜನೆಗಳನ್ನು ಹೊಸದಾಗಿ ರೂಪಿಸಲಾಗುತ್ತಿದೆ. ಇವು ಎಷ್ಟರ ಮಟ್ಟಿಗೆ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲಿವೆ? ಎಂದು ಕಾದು ನೋಡಬೇಕಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಅರಮನೆ ಮೈದಾನದಲ್ಲಿ ಆರಂಭವಾದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ 2025'ದಲ್ಲಿ ಪಾಲ್ಗೊಂಡು ನಗರದ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ.
ತಮ್ಮ ಭಾಷಣದಲ್ಲಿ ಡಿ. ಕೆ. ಶಿವಕುಮಾರ್ ಹಲವು ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ಇವುಗಳಲ್ಲಿ ಬಹುತೇಕ ಯೋಜನೆಗಳು ಇನ್ನೂ ಪ್ರಸ್ತಾವನೆಯ ಹಂತದಲ್ಲಿವೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಕಾರ್ಯಾಚರಣೆ 2026ರ ಅಂತ್ಯಕ್ಕೆ ಆರಂಭವಾಗುವ ನಿರೀಕ್ಷೆ ಇದೆ.
ಯಾವ-ಯಾವ ಯೋಜನೆಗಳು?
* 40 ಕಿ. ಮೀ. ಜೋಡಿ ಸುರಂಗ ಮಾರ್ಗ. ವೆಚ್ಚ 42,500 ಕೋಟಿ
* 41 ಕಿ. ಮೀ. ಡಬಲ್ ಡೆಕ್ಕರ್ ಮೆಟ್ರೋ. 18,000 ಕೋಟಿ
* 110 ಕಿ. ಮೀ. ಇವ್ಯಾಲ್ಯುವೇಟೆಡ್ ಕಾರಿಡಾರ್. 15,000 ಕೋಟಿ
* 320 ಕಿ. ಮೀ. ಬಫರ್ ರೋಡ್. 5000 ಕೋಟಿ
* ಸ್ಕೈ ಡೆಕ್. 500 ಕೋಟಿ
* 74 ಕಿ. ಮೀ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್. 27,000 ಕೋಟಿ
* ಬೆಂಗಳೂರು 2ನೇ ವಿಮಾನ ನಿಲ್ದಾಣ
ಇವುಗಳಲ್ಲಿ ಹಲವು ಯೋಜನೆಗಳು ಇನ್ನೂ ಪ್ರಾಥಮಿಕ, ಪ್ರಸ್ತಾವನೆ ಹಂತದಲ್ಲಿವೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಳ್ಳಲಿದ್ದು, ಇದಕ್ಕೆ ಈಗ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. 27,000 ಕೋಟಿ ರೂ. ವೆಚ್ಚದ ಯೋಜನೆಗೆ ಹುಡ್ಕೋ ಹಣಕಾಸಿನ ನೆರವು ಒದಗಿಸಲಿದೆ.
ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆ ಸಹ ಇನ್ನೂ ಪ್ರಸ್ತಾವನೆ ಹಂತದಲ್ಲಿದೆ. ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು? ಎಂದು ಇನ್ನೂ ಸಹ ಕರ್ನಾಟಕ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ಸ್ಥಳವನ್ನು ಅಂತಿಮಗೊಳಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಬೇಕಿದೆ.
ಅಚ್ಚರಿ ಎಂದರೆ ಡಿ. ಕೆ. ಶಿವಕುಮಾರ್ ನಮ್ಮ ಮೆಟ್ರೋ ಜಾಲದ ವಿಸ್ತರಣೆ, ಸಬ್ ಅರ್ಬನ್ ರೈಲು ಯೋಜನೆ ಕುರಿತು ಭಾಷಣದಲ್ಲಿ ಪ್ರಸ್ತಾಪ ಮಾಡಿಲ್ಲ. ಕೇವಲ ರಸ್ತೆ ಯೋಜನೆಗಳ ಕುರಿತು ಮಾತ್ರ ಮಾತನಾಡಿದ್ದಾರೆ.
ಸದ್ಯ ಬೆಂಗಳೂರು ನಗರದಲ್ಲಿ ಒಂದು ಡಬಲ್ ಡೆಕ್ಕರ್ ಫ್ಲೈ ಓವರ್ ಇದೆ. ಸುಮಾರು 449 ಕೋಟಿ ರೂ. ವೆಚ್ಚದಲ್ಲಿ 4 ಕಿ. ಮೀ. ಉದ್ದದ ಈ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಮೇಲೆ ನಮ್ಮ ಮೆಟ್ರೋ ರೈಲು, ಅದರ ಕೆಳಗೆ ವಾಹನಗಳು ಈ ಫ್ಲೈ ಓವರ್‌ನಲ್ಲಿ ಸಂಚಾರ ನಡೆಸುತ್ತವೆ. ರಾಗಿಗುಡ್ಡ-ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ ಇದು ಸಂಪರ್ಕ ಕಲ್ಪಿಸುತ್ತದೆ. ಈ ಮೆಟ್ರೋ ಮಾರ್ಗ (ಆರ್. ವಿ. ರಸ್ತೆ-ಬೊಮ್ಮಸಂದ್ರ)ದಲ್ಲಿ ಇನ್ನೂ ವಾಣಿಜ್ಯ ಸಂಚಾರ ಆರಂಭವಾಗಿಲ್ಲ. ಫ್ಲೈ ಓವರ್‌ನಲ್ಲಿ ಒಂದು ಕಡೆ ಮಾತ್ರ ಸದ್ಯ ವಾಹನ ಸಂಚಾರ ನಡೆಸುತ್ತಿದೆ.












Click it and Unblock the Notifications