'ಕನ್ನಡ ಅಧ್ಯಯನ ಕೇಂದ್ರ' ಶೀಘ್ರ ಬೆಂಗಳೂರಿಗೆ ಬರಲಿ
ಬೆಂಗಳೂರು, ನ. 27: ನಗರದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಸ್ಥಾಪನೆಗೆ ಮೂರು ಎಕರೆ ಜಮೀನು ಗುರುತಿಸಲಾಗಿದೆ. ಆದ್ದರಿಂದ ಪ್ರಸ್ತುತ ಮೈಸೂರಿನಲ್ಲಿರುವ ಕೇಂದ್ರವನ್ನು ಬೆಂಗಳೂರಿಗೆ ಶೀಘ್ರ ಸ್ಥಳಾಂತರಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಉಮಾಶ್ರೀ ಪತ್ರ ಬರೆದಿದ್ದಾರೆ. [ಸಿಂಗಾಪುರದಲ್ಲೊಂದು ಕನ್ನಡ ಅಧ್ಯಯನ ಕೇಂದ್ರ]
ಮೈಸೂರಿನಲ್ಲಿರುವ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ತಾತ್ವಿಕ ಒಪ್ಪಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಪತ್ರ ಬರೆದಿದ್ದ ಮುಖ್ಯಮಂತ್ರಿ: ಅಲ್ಲದೆ, ಈ ಕುರಿತು ರಚಿಸಿರುವ ಯೋಜನೆ ಪರಿವೀಕ್ಷಣಾ ಮಂಡಳಿಗೆ ಒಪ್ಪಿಗೆ ಸೂಚಿಸಬೇಕು, ಅಧ್ಯಯನ ಕೇಂದ್ರದಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ತುಂಬಬೇಕು, ಹೊಸ ಕೇಂದ್ರದ ಕಟ್ಟಡ ನಿರ್ಮಾಣ ಹಾಗೂ ವಿವಿಧ ಚಟುವಟಿಕೆಗಳಿಗಾಗಿ 40 ಕೋಟಿ ರೂ. ಮಂಜೂರು ಮಾಡಬೇಕೆಂದು ಕೋರಿ ಇದೇ ವರ್ಷ ನವೆಂಬರ್ 17ರಂದು ಕರ್ನಾಟಕದ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದು ಕೋರಿದ್ದರು ಎಂದು ಉಮಾಶ್ರೀ ನೆನಪಿಸಿದ್ದಾರೆ. [ತುಳು ಭಾಷೆಗೆ ಅಧಿಕೃತ ಸ್ಥಾನಮಾನ]
ಈ ಕೇಂದ್ರವನ್ನು ಮುನ್ನಡೆಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸ್ವಾಯತ್ತ ಸಂಸ್ಥೆಯೊಂದನ್ನು ರಚಿಸಲಾಗಿದೆ. ಆದ್ದರಿಂದ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರದ ವರ್ಗಾವಣೆಯನ್ನು ತ್ವರಿತಗೊಳಿಸಬೇಕೆಂದು ಸಚಿವೆ ಉಮಾಶ್ರೀ ಪತ್ರದಲ್ಲಿ ಕೋರಿದ್ದಾರೆ.
ಅನಂತ್‌ಕುಮಾರ್ ಜೊತೆ ಚರ್ಚೆ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಲ್ಲಿ ಇರುವ ಸಮಸ್ಯೆ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಲು ನವ ದೆಹಲಿಗೆ ತೆರಳಿದ್ದ ಸಚಿವೆ ಉಮಾಶ್ರೀ ಕೇಂದ್ರದ ರಾಸಾಯನಿಕ ಹಾಗೂ ಗೊಬ್ಬರ ಸಚಿವ ಅನಂತ್‌ಕುಮಾರ್ ಜೊತೆ ಮಾತನಾಡಿದರು. [ರಾಜ್ಯೋತ್ಸವ ಕೊಡುಗೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ]
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಕರ್ನಾಟಕದ ಸ್ಥಾನಿಕ ಆಯುಕ್ತರಾದ ವಂದನಾ ಗುರುನಾಯಿ ಉಪಸ್ಥಿತರಿದ್ದರು.











Click it and Unblock the Notifications