ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಬಂಧನ : ಒಂದು ಕೋಟಿ ಮೌಲ್ಯದ ಮಾದಕ ವಸ್ತು ವಶ !
ಬೆಂಗಳೂರು, ಡಿಸೆಂಬರ್ 24: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಡ್ರಗ್ ಮಾರಾಟ ಮಾಡಲು ಯತ್ನಿಸಿದ ಇಬ್ಬರು ವಿದೇಶಿ ಪ್ರಜೆಗಳನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಬೈಯಪ್ಪನಹಳ್ಳಿ ಪೊಲೀಸರು ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ಒಂದು ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾ ಮೂಲದ ಸೆಲೆಸ್ಟಿನ್ ಅನುಗ್ವಾ ಮತ್ತು ಡಾನ್ಚಕ್ ಒಕೇಕೆ ಬಂಧಿತರು. ಆರೋಪಿಗಳಿಂದ ಆರು ನೂರು ಗ್ರಾಂ ತೂಕದ 3300 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿದ ಬೈಯಪ್ಪನಹಳ್ಳಿ ಠಾಣೆ ಪೊಲೀಸರ ಕಾರ್ಯವನ್ನು ಶ್ಲಾಘಿಸಿ ನಗರ ಪೊಲೀಸ್ ಆಯುಕ್ತ ಕಮಲಪಂತ್ ನಲವತ್ತು ಸಾವಿರ ಬಹುಮಾನ ಘೋಷಣೆ ಮಾಡಿದರು. ಡ್ರಗ್ ಜಾಲದ ವಿರುದ್ಧ ಬೆಂಗಳೂರು ಪೊಲೀಸರ ಸಮರ ಮುಂದುವರೆಯಲಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದರು.

ಡಾರ್ಕ್ ವೆಬ್ ತಾಣದ ಮೂಲಕ ಆರೋಪಿಗಳು ಡ್ರಗ್ ನ್ನು ತರಿಸಿ ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಐಟಿ ಉದ್ಯೋಗಿಗಳು ಇರುವ ಜಾಗದಲ್ಲಿ ಮಾರಾಟ ಮಾಡುತ್ತಿದ್ದರು. ಡಾರ್ಕ್ ವೆಬ್ ತಾಣದ ಮೂಲಕ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ತರಿಸಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಒಂದು ಕೋಟಿ ರೂಪಾಯಿ ಮೌಲ್ಯದ ಎಂಡಿಎಂ ಡ್ರಗ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ನಕಲಿ ವೀಸಾ ಮತ್ತು ಪಾಸ್ ಪೋರ್ಟ್ ಮೇಲೆ ಭಾರತಕ್ಕೆ ಬಂದು ನೆಲೆಸಿರುವುದು ತನಿಖೆ ವೇಳೆ ಗೊತ್ತಾಗಿದೆ. ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆಗೆಂದು ಮಾದಕ ವಸ್ತು ತರಿಸಿ ಬಾಗಮನೆ ಟೆಕ್ ಪಾರ್ಕ್ ಸಮೀಪದ ಕೃಷ್ಣಪ್ಪ ಗಾರ್ಡನ್ ಬಳಿ ಮಾರಾಟ ಮಾಡಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications