ಬೆಂಗಳೂರಲ್ಲಿ ಅಪ್ರಾಪ್ತ ಬಾಲಕಿಯರು ನಾಪತ್ತೆ
ಬೆಂಗಳೂರು, ಫೆಬ್ರವರಿ 14: ಬೆಂಗಳೂರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಕಾಣೆಯಾಗಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಬಾಲಕಿಯರನ್ನು ಅಪಹರಣ ಮಾಡಲಾಗಿದೆಯೇ ಅಥವಾ ಅವರೇ ಸ್ವಇಚ್ಛೆಯಿಂದ ತೆರಳಿದ್ದಾರೆಯೇ ಎಂಬುದು ತಿಳಿದುಬರಬೇಕಿದೆ.
15 ವರ್ಷದ ಇಬ್ಬರು ಬಾಲಕಿಯರು ಬೆಂಗಳೂರಿನಿಂದ ನಾಪತ್ತೆ ಆಗಿದ್ದಾರೆ. ಇವರು ನಗರದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದರು. ಫೆ.11 ರಂದು ಬಾಲಕಿಯರು ಶಾಲೆಗೆ ತೆರಳಿದ್ದರು. ಆದರೆ, ಸಂಜೆ ಇವರು ಮನೆಗೆ ವಾಪಸ್ ಬಂದಿರಲಿಲ್ಲ. ಈ ವೇಳೆ ಆತಂಕಗೊಂಡ ಪೋಷಕರು ಬಾಲಕಿಯರಿಗಾಗಿ ಎಲ್ಲಕಡೆ ಹುಡುಕಾಟ ನಡೆಸಿದ್ದಾರೆ.

ಕಾಣೆಯಾದ ಇಬ್ಬರು ಬಾಲಕಿ ಪೈಕಿ ಒಬ್ಬಳಿಗೆ ಸಂಜಯ್ ಎಂಬ ಹುಡುಗನೊಂದಿಗೆ ಸ್ನೇಹವಿತ್ತು ಎನ್ನುವ ಮಾಹಿತಿ ಲಭ್ಯವಾಗಿದ್ದು, ಇಬ್ಬರೂ ಈತನ ಜೊತೆ ಹೋಗಿರುವ ಶಂಕೆ ಇದೆ. ಈ ಹಿನ್ನಲೆಯಲ್ಲಿ ಪೊಲೀಸರು ಸಂಜಯ್ಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಸದ್ಯ ಪೋಷಕರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಸಂಜಯ್ ವಿಚಾರವನ್ನು ಪಾಲಕರು ಉಲ್ಲೇಖ ಮಾಡಿದ್ದಾರೆ. ಸದ್ಯ ಪೊಲೀಸರು ಬಾಲಕಿಯರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ನಗರದಲ್ಲಿ ಅಪ್ರಾಪ್ತ ಬಾಲಕಿಯರು ನಾಪತ್ತೆ ಆಗುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಆಗಾಗ ಸೂಚಿಸುತ್ತಲೇ ಇರುತ್ತಾರೆ. ಆದರೂ ಪ್ರಕರಣಗಳು ಕಡಿಮೆಯಾಗುತ್ತಿಲ್ಲ.











Click it and Unblock the Notifications