ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆತುರಕ್ಕೆ ಬಿದ್ದ ಮಾಧ್ಯಮ, ಪ್ರಚಾರಕ್ಕಿಳಿದ ಆಡಳಿತ ಮಂಡಳಿ: ಐಎಎಸ್ ಕಂಡಕ್ಟರ್ ಅಸಲಿ ಕತೆ!

|
Google Oneindia Kannada News

Recommended Video

ಆತುರಕ್ಕಿಳಿದ ಮಾಧ್ಯಮದಿಂದಾದ ಎಡವಟ್ಟು !! | BMTC | Madhu | Oneindia Kannada

ಬೆಂಗಳೂರು ಫೆಬ್ರವರಿ 4: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ನಿರ್ವಾಹಕರಾಗಿರುವ ಮಂಡ್ಯ ಮೂಲದ ಮಧು ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂಬ ಸುದ್ದಿ ಕಳೆದ ವಾರ ಹೊರಬಿದ್ದಾಗ ಸಹಜವಾಗಿಯೇ ಪ್ರೇರಕ ಶಕ್ತಿಯೊಂದು ಸಂಚಯವಾಗಿತ್ತು.

ಇದರ ಬೆನ್ನಲ್ಲೇ ಹೊರಬಿದ್ದ ಸುದ್ದಿಗಳು ಮಧು ಅಂತಹ ಯಾವ ಪರೀಕ್ಷೆಯನ್ನು ಪಾಸ್ ಮಾಡಿಲ್ಲ ಎಂದವು.

ಕಂಡಕ್ಟರ್ ಐಎಎಸ್ ಪಾಸ್; ಸುಳ್ಳು ಸುದ್ದಿ ಸ್ಫೂರ್ತಿ ತುಂಬಿದ ಕಥೆಕಂಡಕ್ಟರ್ ಐಎಎಸ್ ಪಾಸ್; ಸುಳ್ಳು ಸುದ್ದಿ ಸ್ಫೂರ್ತಿ ತುಂಬಿದ ಕಥೆ

ಈ ಮೂಲಕ ಮಾಧ್ಯಮಗಳ ಪಾಲಿಗೆ, ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಜನರಿಗೆ ಪ್ರೇರಣೆಯ ಸಂಕೇತವಾಗಿ ಬದಲಾಗಿದ್ದ ಮಧು, ಒಂದೇ ಏಟಿಗೆ 'ತಪ್ಪಿತಸ್ಥನ' ರೀತಿಯಲ್ಲಿ ಬಿಂಬಿತವಾದರು. ಮಾಧ್ಯಮಗಳು ತಾವು ಮೊದಲು ಎಸಗಿದ ಅಪಚಾರವನ್ನು ಸರಿ ಪಡಿಸಿಕೊಂಡು, 'ಸತ್ಯ ಸಂಗತಿ' ಹೆಸರಿನಲ್ಲಿ ಮತ್ತದೇ ಅರ್ಧ ಸತ್ಯಕ್ಕೆ ಮೊರೆ ಹೋದವು. ಸದ್ಯ ಪ್ರಕರಣದಲ್ಲಿ ಒಂದಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಕೊಳ್ಳಲು ಕಾರಣವಾದವು.

ಏರೋನಾಟಿಕಲ್ ಎಂಜಿನಿಯರಿಂಗ್ ನಲ್ಲಿ ತರಕಾರಿ ವ್ಯಾಪಾರಿ ಮಗಳು ಟಾಪರ್ಏರೋನಾಟಿಕಲ್ ಎಂಜಿನಿಯರಿಂಗ್ ನಲ್ಲಿ ತರಕಾರಿ ವ್ಯಾಪಾರಿ ಮಗಳು ಟಾಪರ್

ಇಡೀ ಪ್ರಕರಣದಲ್ಲಿ ನಿಜಕ್ಕೂ ಏನು ನಡೆಯಿತು? ಎಲ್ಲಿ ಮಧು ತಾನು ಐಎಎಸ್ ಪಾಸ್ ಮಾಡಿದ್ದಾಗಿ ಹೇಳಿಕೊಂಡಿದ್ದರು? ಯಾಕೆ ನಿರ್ವಾಹಕರೊಬ್ಬರ ಸುತ್ತ ತಪ್ಪು ಮಾಹಿತಿ ಹರಡಿತು? ಅಷ್ಟಕ್ಕೂ ಇಡೀ ಪ್ರಕರಣದಲ್ಲಿ ಪ್ರಮಾದ ಎಸಗಿದವರು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ 'ಒನ್ ಇಂಡಿಯಾ ಕನ್ನಡ' ಇಲ್ಲಿ ಉತ್ತರ ನೀಡುತ್ತಿದೆ. ಬಿಎಂಟಿಸಿಯ ನಿರ್ವಾಹಕ ಮಧು ಹಾಗೂ ಅವರ ಸ್ನೇಹಿತರು ನೀಡಿದ ಮಾಹಿತಿಯನ್ನು ಈ ಮೂಲಕ ನಿಮ್ಮ ಮುಂದಿಡುತ್ತಿದ್ದೇವೆ.

ಅಧ್ಯಯನ ಆಸಕ್ತಿ, ಸಾಧನೆ ಕನಸು

ಅಧ್ಯಯನ ಆಸಕ್ತಿ, ಸಾಧನೆ ಕನಸು

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನಿಣ್ಣೂರು ಮೂಲದ ಮಧು ಮೂಲತಃ ಕೃಷಿ ಕುಟುಂಬದಿಂದ ಬಂದವರು. ಇಬ್ಬರು ಗಂಡು ಮಕ್ಕಳ ಪೈಕಿ ಕೊನೆಯವರು. ಓದಿದ್ದು ಪಿಯುಸಿಯಾದರು ಮುಂದೆ ದೂರ ಶಿಕ್ಷಣದ ಮೂಲಕವೇ ಸ್ನಾತ್ತಕೋತ್ತರ ಪದವಿಯನ್ನು ಪಡೆದುಕೊಂಡವರು. ಬಿಎಂಟಿಸಿಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಲೇ 2014ರಲ್ಲಿ ಮೊದಲ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡರು. ಕೆಪಿಎಸ್‌ಸಿ ಪರೀಕ್ಷೆಯನ್ನು ಬರೆದರಾದರೂ ಆ ವರ್ಷ ಫಲ ನೀಡಲಿಲ್ಲ.

"ಮೊದಲ ಬಾರಿಗೆ ಕೆಎಎಸ್‌ ಬರೆದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಆಸಕ್ತಿ ಬೆಳೆಯಿತು. ಮುಂದೆ ಐಎಎಸ್ ಪರೀಕ್ಷೆ ತೆಗೆದುಕೊಳ್ಳುವ ಮನಸ್ಸು ಮಾಡಿದೆ. ಆ ಕಾರಣಕ್ಕೆ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳತೊಡಗಿದೆ. 2017ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದೆ. ಆದರೆ ಅದೃಷ್ಟ ಕೈಕೊಟ್ಟಿತು. 2018ರಲ್ಲಿ ಮತ್ತೆ ಪರೀಕ್ಷೆ ಬರೆದೆ. ಆ ಸಮಯದಲ್ಲಿ ಪ್ರಿಲಿಮ್ಸ್‌ ಪಾಸ್ ಮಾಡಿದೆ. ಮುಖ್ಯ ಪರೀಕ್ಷೆ ಕೈಕೊಟ್ಟಿತು. 2019ರಲ್ಲಿ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಂಡೆ. ಈ ಸಮಯದಲ್ಲೂ ಪ್ರಿಲಿಮ್ಸ್ ಪಾಸ್ ಮಾಡಿಕೊಂಡೆ,'' ಎಂದು ವಿವರಿಸುತ್ತಾರೆ ಮಧು.

ಒಂದು ಅಂಕಿ ಮಿಸ್ ಆಗಿ ಯಡವಟ್ಟು

ಒಂದು ಅಂಕಿ ಮಿಸ್ ಆಗಿ ಯಡವಟ್ಟು

ಯಾವಾಗ ಪ್ರಿಲಿಮ್ಸ್ ಪಾಸ್‌ ಆಗಿ ಮೇನ್ಸ್‌ ಕೂಡ ಬರೆದರೋ, ಮಧುಗೆ ಈ ಬಾರಿಯಾದರೂ ತಾನು ಐಎಎಸ್ ಆಗುವ ಕನಸು ಗಟ್ಟಿಯಾಗಿತ್ತು. ಅದಕ್ಕಿಂತ ಹೆಚ್ಚಾಗಿ ಅವರಲ್ಲೊಂದು ಆತ್ಮ ವಿಶ್ವಾಸ ಬೆಳೆದಿತ್ತು ಎಂಬುದನ್ನು ಅವರು ಸ್ನೇಹಿತರು ಗುರುತಿಸುತ್ತಾರೆ.

"ಮೇನ್ಸ್ ಫಲಿತಾಂಶ ಬಿಡುಗಡೆಯಾದಾಗ ನನ್ನ ರೋಲ್ ನಂಬರ್‌ ಕೂಡ ಸೆಲೆಕ್ಟ್ ಆಗಿದೆ ಎಂದು ನಾನು ತಪ್ಪಾಗಿ ಭಾವಿಸಿದೆ. ಇದಕ್ಕೆ ಕಾರಣ ನಾನು ಫಲಿತಾಂಶ ನೋಡುವಾಗ ಒಂದು ಅಂಕಿ ಮಿಸ್ ಮಾಡಿಕೊಂಡಿದ್ದು. ಮಧು ಕುಮಾರಿ ಎಂಬ ಹೆಸರಿನವರು ಆಯ್ಕೆಯಾಗಿದ್ದರು. ಅವರ ರೋಲ್ ನಂಬರ್ ಕೂಡ ನನ್ನ ನಂಬರ್ (0841646) ಸೀರಿಸ್‌ನಲ್ಲೇ ಬಂದಿದ್ದು ಯಡವಟ್ಟಿಗೆ ಕಾರಣವಾಯಿತು. ಪರೀಕ್ಷೆ ಪಾಸ್ ಮಾಡಿದೆ ಎಂದುಕೊಂಡು ಸಂಭ್ರಮದಲ್ಲಿ ಸಂಸ್ಥೆ (ಬಿಎಂಟಿಸಿ)ಯ ಎಂಡಿಗೆ ಉಳಿದ ಅಧಿಕಾರಿಗಳಿಗೆ ಮೇಲ್ ಕಳುಹಿಸಿದೆ. ನನ್ನ ಕಡೆಯಿಂದ ನಡೆದಿದ್ದು ಅಷ್ಟೆ,'' ಎನ್ನುತ್ತಾರೆ ಮಧು.

ಆತುರಕ್ಕೆ ಬಿದ್ದ ಆಡಳಿತ ಮಂಡಳಿ

ಆತುರಕ್ಕೆ ಬಿದ್ದ ಆಡಳಿತ ಮಂಡಳಿ

ಮಧು ಕಳುಹಿಸಿದ ಇ-ಮೇಲ್‌ಗೆ ತಕ್ಷಣದ ಪ್ರತಿಕ್ರಿಯೆ ನೀಡಿತು ಆಡಳಿತ ಮಂಡಳಿ. ಸಹಜವಾಗಿಯೇ ಇದೊಂದು 'ಒಳ್ಳೆಯ ಸುದ್ದಿ' ಎಂಬುದನ್ನು ಬಿಎಂಟಿಸಿಯ ಸಾರ್ವಜನಿಕ ಸಂಪರ್ಕ ಇಲಾಖೆ ಕೂಡ ಗ್ರಹಿಸಿತು. ಅಲ್ಲಿಂದ ಆರಂಭವಾಗಿದ್ದು ಮಾಧ್ಯಮಗಳ ಭಾಷೆಯಲ್ಲಿ ಕಡೆಯುವ 'ಪಿಆರ್‌' ಸರ್ಕಸ್‌.

ಮೊದಲು ಇಂಗ್ಲಿಷ್ ದೈನಿಕಕ್ಕೆ ಈ ಮಾಹಿತಿ ಲೀಕ್ ಆಯಿತು. 'ಮುಂದಿನ ನಿಲ್ದಾಣ ಐಎಎಸ್' ಎಂದು ಅದು ಮಧು ಸಾಧನೆಯನ್ನು ಗುರುತಿಸಿತು. ಅದನ್ನು ಉಳಿದ ಮಾಧ್ಯಮಗಳು ಹಿಂಬಾಲಿಸಿ ಖೆಡ್ಡಾಕ್ಕೆ ಬಿದ್ದವು. ಇದ್ದಕ್ಕಿದ್ದ ಹಾಗೆ ಮಧು ಸುದ್ದಿಕೇಂದ್ರದಲ್ಲಿ ಕರ್ನಾಟಕವನ್ನೂ ಮೀರಿ ದೊಡ್ಡ ಸದ್ದು ಮಾಡತೊಡಗಿದರು.

"ಯಾರಿಂದ ಮಾಧ್ಯಮಗಳಿಗೆ ಇದು ತಲುಪಿತು ಎಂಬುದು ನನಗೆ ಗೊತ್ತಿಲ್ಲ. ನನ್ನ ಬಳಿ ಯಾರೂ ಮಾತನಾಡಲಿಲ್ಲ. ಯಾರೋ ಡ್ರೈವರ್ ಹೇಳಿದ್ದಾರೆ ಎಂದು ನಮೋದಿಸಿ ನಾನು ದಿನಾ 5 ಗಂಟೆ ಓದುತ್ತಿದ್ದೆ ಅಂತೆಲ್ಲಾ ಬರೆದರು. ನನ್ನ ಕುಟುಂಬದಲ್ಲಿ ನಾನೇ ಮೊದಲು ಶಾಲೆ ನೋಡಿದ್ದು ಎಂದರು. ನನ್ನ ತಂದೆ ಆ ಕಾಲಕ್ಕೆ ಪಿಯುಸಿ ಪಾಸ್ ಮಾಡಿ ಒಳ್ಳೆಯ ಕೆಲಸದಲ್ಲಿದ್ದರು. ನನ್ನ ಅಣ್ಣ ಕೂಡ ಪದವಿ ಮಾಡಿದ್ದಾನೆ. ಅಷ್ಟೆ ಯಾಕೆ ನನ್ನ ಫೋಟೋ ಒಂದನ್ನು ಬಸ್‌ ಒಳಗೆ ನಿಂತಂತೆ ಫೊಟೋ ಶಾಪ್‌ ಹಾಕಿದರು. ಇದನ್ನು ನನ್ನಂತ ಸಾಮಾನ್ಯ ಮನುಷ್ಯ ತಡೆಯುವುದು ಹೇಗೆ ಸಾಧ್ಯ?'' ಎನ್ನುತ್ತಾರೆ ಮಧು.

ಕ್ಷಮೆ ಕೋರಿದ್ದು ಇನ್ನೊಂದು ಸುಳ್ಳು

ಕ್ಷಮೆ ಕೋರಿದ್ದು ಇನ್ನೊಂದು ಸುಳ್ಳು

ಯಾವಾಗ ಮಧು ಐಎಎಸ್‌ ಪರೀಕ್ಷೆಯನ್ನು ಪಾಸ್‌ ಮಾಡಿಲ್ಲ ಎಂಬುದು ಗೊತ್ತಾಯಿತೋ ಬಿಎಂಟಿಸಿ ಆಡಳಿತ ಮಂಡಳಿ ಕಡೆಯಿಂದ ಮತ್ತೊಂದು ಸುತ್ತಿನ ಪಿಆರ್‌ ಸರ್ಕಸ್‌ ಆರಂಭವಾಯಿತು. 'ಎಂಡಿಯವರು ವಾರಕ್ಕೆ ಎರಡು ದಿನ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು' ಎಂದು ಹೇಳಿದವರೇ, 'ಮಧು ತಪ್ಪಾಯಿತು ಎಂದು ಕ್ಷಮೆ ಕೋರಿದ್ದಾನೆ' ಎಂದು ಸುದ್ದಿ ಬರೆಸಿದರು. ಮೊದಲೇ ಮಧು ವಿಚಾರದಲ್ಲಿ ಖೆಡ್ಡಾಕ್ಕೆ ಬಿದ್ದ ಮಾಧ್ಯಮಗಳು, ಎಸಗಿದ ಪ್ರಮಾದಕ್ಕೆ ಪ್ರಾಯಶ್ಚಿತ ಎನ್ನುವಂತೆ ಹೊಸ ಸುಳ್ಳನ್ನೂ ಪುನರಾವರ್ತನೆ ಮಾಡಿದವು.

ಈ ಸಮಯದಲ್ಲಿ ಮಧು ಪರಿಸ್ಥಿತಿ ಏನಾಗಿರಬಹುದು? ಊಹಿಸಿ ನೋಡಿ. ಒಂದು ಕಣ್ಣ ತಪ್ಪಿನಿಂದಾದ ಆದ ಪ್ರಮಾದವನ್ನು ಸರಿಪಡಿಸಿಕೊಳ್ಳಲು ಆಗದಷ್ಟು ದೊಡ್ಡ ಮಟ್ಟಕ್ಕೆ ಹಿಂಜಿದವರು ಕೊನೆಗೆ ಮುಖ ಉಳಿಸಿಕೊಳ್ಳಲು ನಿರ್ವಾಹಕನನ್ನೇ ತಪ್ಪಿತಸ್ಥನ ಸ್ಥಾನದಲ್ಲಿ ತಂದು ನಿಲ್ಲಿಸಿದ್ದು ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿತು. ಅಷ್ಟೊತ್ತಿಗಾಗಲೇ ಐಎಎಸ್ ಮಾಡುವ ಕನಸು ಇಟ್ಟುಕೊಂಡು ಪರಿಶ್ರಮ ಹಾಕುತ್ತಿದ್ದ ಸಾಮಾನ್ಯ ವ್ಯಕ್ತಿಯ ಬದುಕು ಸಹಜತೆಯನ್ನು ಕಳೆದುಕೊಂಡಾಗಿತ್ತು.

ಕನಸು ಅಚಲ, ರಜೆಗೆ ನಿರ್ಧಾರ

ಕನಸು ಅಚಲ, ರಜೆಗೆ ನಿರ್ಧಾರ

ಇಷ್ಟೆಲ್ಲಾ ಮಾಧ್ಯಮಗಳ ಭರಾಟೆಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದ ಮಧು ಮೂರು ದಿನಗಳ ನಂತರ ಸಹಜ ಬದುಕಿಗೆ ಮರಳುವ ಪ್ರಯತ್ನದಲ್ಲಿದ್ದಾರೆ.

"ನನ್ನಿಂದ ಏನು ತಪ್ಪಾಯಿತು ಎಂಬುದನ್ನು ಈಗಲೂ ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ನೀವು ಮಾಧ್ಯಮದವರಾಗಿದ್ದರೆ ದಯವಿಟ್ಟು ಎಲ್ಲವನ್ನೂ ಇಲ್ಲಿಗೇ ಬಿಟ್ಟು ಬಿಡಿ. ನಾನು ರಜೆ ತೆಗೆದುಕೊಂಡಾದರೂ ಐಎಎಸ್ ಪರೀಕ್ಷೆಯನ್ನು ಮತ್ತೆ ತೆಗೆದುಕೊಂಡು ಸಾಧನೆ ಮಾಡಿ ತೋರಿಸುತ್ತೇನೆ. ನನ್ನ ಸುತ್ತ ಮುತ್ತ ಇರುವ ಜನರಿಗೆ, ಸಂಬಂಧಿಕರಿಗೆ ನಾನೇ ಪ್ರಮಾದ ಎಸಗಿದ್ದೀನಿ ಅನ್ನಿಸಿದೆ. ಎಲ್ಲರಿಗೂ ಏನು ನಡೆಯಿತು ಎಂದು ಹೇಳಿಕೊಂಡು ಬರಲು ನನ್ನಿಂದ ಸಾಧ್ಯವಿಲ್ಲ,'' ಎಂದು 'ಒನ್ ಇಂಡಿಯಾ ಕನ್ನಡ'ದ ಜತೆ ಮಧು ಅಸಹಾಯಕತೆ ತೋಡಿಕೊಂಡರು.

ಇವತ್ತು ಜಾಲತಾಣಗಳು ಪ್ರಬಲವಾಗಿರುವ ದಿನಗಳಲ್ಲಿ, ಮಾಧ್ಯಮಗಳ ಭರಾಟೆಯಲ್ಲಿ ರವಾನೆಯಾದ ತಪ್ಪು ಮಾಹಿತಿಯನ್ನು ಸರಿ ಪಡಿಸುವುದು ಮಧು ಬಿಡಿ ಯಾರ ಕೈಲೂ ಸಾಧ್ಯವೂ ಇಲ್ಲ. ಮಧು ಅಂದುಕೊಂಡಂತೆ ಎಲ್ಲವನ್ನೂ ಹಿಂದೆ ಬಿಟ್ಟು ಕಂಡ ಕನಸನ್ನು ನನಸು ಮಾಡಿಕೊಳ್ಳುವುದಷ್ಟೆ ಭವಿಷ್ಯದ ಹಾದಿ. ಅದೇ ಸಮಯದಲ್ಲಿ ಮಧು ಎತ್ತುವ ಈ ಪ್ರಶ್ನೆಗಳನ್ನು ಮನನ ಮಾಡಿಕೊಳ್ಳಬೇಕಿದೆ.

"ಇಂತಹ ವಿಚಾರಗಳು ಬಂದಾಗ ಮಾಧ್ಯಮಗಳ ಒಮ್ಮೆ ಯೋಚಿಸಬೇಕು ಅಲ್ವಾ? ಕನಿಷ್ಟ ನನ್ನ ಬಳಿಯಾದರೂ ಒಮ್ಮೆ ಮಾತನಾಡಿಕೊಂಡು ಸುದ್ದಿ ಬರೆಯಬೇಕು ಅಲ್ವಾ? ಅದು ಬಿಟ್ಟು ಎಲ್ಲಾ ನಡೆದ ಮೇಲೆ ನನ್ನನ್ನೇ ವಿಲನ್ ರೀತಿಯಲ್ಲಿ ಬಿಂಬಿಸಿದರೆ ನಾನು ಏನು ತಾನೆ ಮಾಡಲು ಸಾಧ್ಯ?,'' ಎಂಬ ಪ್ರಶ್ನೆಗಳನ್ನು ಮುಂದಿಡುತ್ತಾರೆ ಮಧು. ಇದಕ್ಕೆ ಉತ್ತರ ನೀಡಬೇಕಾದವರು ತಪ್ಪನ್ನು ಎತ್ತಾಕಿ ತಲೆ ತೊಳೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

English summary
One false news spreads and later taken dowm, here we have BMTC conductors first person account who said to be cracked IAS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X