ಬೆಂಗಳೂರು: ಕಲ್ಲು ಕ್ವಾರಿಯಲ್ಲಿ ಬಂಡೆ ಉರುಳಿ 7 ಕಾರ್ಮಿಕರ ದಾರುಣ ಸಾವು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಬಲಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿ ಕಲ್ಲು ಕ್ವಾರಿ ಮಾಲೀಕರ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾದ ಭೀಕರ ಘಟನೆಯೊಂದು ವರದಿಯಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದಲ್ಲಿರುವ 'ಕಾವೇರಿ ಕ್ರಷರ್' ಕಲ್ಲು ಕ್ವಾರಿಯಲ್ಲಿ ಬೃಹತ್ ಬಂಡೆಯೊಂದು ಕುಸಿದು ಬಿದ್ದ ಪರಿಣಾಮ, ಕ್ವಾರಿಯ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ 7 ಮಂದಿ ವಲಸೆ ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹೊಟ್ಟೆಪಾಡಿಗಾಗಿ ದೂರದ ಊರಿನಿಂದ ಬಂದಿದ್ದ ಕಾರ್ಮಿಕರು ಕಣ್ಣೆದುರಲ್ಲೇ ಪ್ರಾಣ ಬಿಟ್ಟಿದ್ದು, ಇಡೀ ಪ್ರದೇಶದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಲ್ಲು ಕ್ವಾರಿಯ ಮೇಲ್ಭಾಗದಲ್ಲಿ ಟ್ರ್ಯಾಕ್ಟರ್ ಬಳಸಿ ಬೃಹತ್ ಗಾತ್ರದ ಬಂಡೆಯೊಂದನ್ನು ಸರಿಸುವ ಕೆಲಸ ನಡೆಯುತ್ತಿತ್ತು. ಈ ವೇಳೆ ಹತೋಟಿ ತಪ್ಪಿದ ಆ ಬೃಹತ್ ಬಂಡೆಯು ನೇರವಾಗಿ ಕ್ವಾರಿಯ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ಕಾರ್ಮಿಕರ ಮೇಲೆಯೇ ಉರುಳಿ ಬಿದ್ದಿದೆ. ಕಣ್ಮುಚ್ಚಿ ಬಿಡುವಷ್ಟರಲ್ಲಿ ಬಂಡೆಯ ಅಡಿಗೆ ಸಿಲುಕಿದ ಏಳು ಜನ ಕಾರ್ಮಿಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Tragic Boulder

ಮೃತಪಟ್ಟವರೆಲ್ಲರೂ ಬಿಹಾರ ಮತ್ತು ಅಸ್ಸಾಂ ಮೂಲದ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದ್ದು, ಇವರು ಹೊಟ್ಟೆ ಪಾಡಿಗಾಗಿ ದಿನಗೂಲಿ ಕೆಲಸಕ್ಕೆ ಬೆಂಗಳೂರಿಗೆ ಬಂದು ದುಡಿಯುತ್ತಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ತಾವರೆಕೆರೆ ಪೊಲೀಸ್ ಭೇಟಿ

ಕಣ್ಣೆದುರಲ್ಲೇ ಬಂಡೆ ಉರುಳಿ ಜೊತೆಯಲ್ಲಿ ಕೆಲಸ ಮಾಡುವವರು ಸಾವನ್ನಪ್ಪಿದ್ದನ್ನು ಕಂಡ ಇತರ ಕಾರ್ಮಿಕರ ಚೀರಾಟ, ರೋದನ ಮುಗಿಲು ಮುಟ್ಟಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಸ್ಥಳೀಯ ಸಾರ್ವಜನಿಕರು ಮತ್ತು ಉಳಿದ ಕಾರ್ಮಿಕರು ರಕ್ಷಣಾ ಕಾರ್ಯಾಚರಣೆಗಿಳಿದರು. ಬಂಡೆಯಡಿ ಸಿಲುಕಿದ್ದವರ ಪೈಕಿ ನಾಲ್ಕು ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಉಳಿದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಭರದಿಂದ ಸಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾರುತಿ ಹಾಗೂ ಅವರ ಸಿಬ್ಬಂದಿ ತಂಡವು ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ. ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರ (ಮೇಸ್ತ್ರಿ) ಹಾಗೂ ಕ್ರಷರ್ ಮಾಲೀಕರನ್ನು ವಿಚಾರಣೆಗಾಗಿ ಸ್ಥಳಕ್ಕೆ ಕರೆಸಲಾಗುತ್ತಿದ್ದು, ತನಿಖೆ ತೀವ್ರಗೊಂಡಿದೆ.

ಅಧಿಕಾರಿಗಳ ನಿರ್ಲಕ್ಷ್ಯ

ಈ ಕಲ್ಲು ಕ್ವಾರಿ ಪ್ರದೇಶದಲ್ಲಿ ಅವಘಡಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಇದೇ ಹುಲವೇನಹಳ್ಳಿ ಮತ್ತು ಮಾದಾಪಟ್ಟಣ ವ್ಯಾಪ್ತಿಯ ಕ್ವಾರಿ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಬಂಡೆಗಳನ್ನು ಸ್ಫೋಟಿಸುವಾಗ, ಕಲ್ಲು ಸಿಡಿದು ಚಿರತೆಯೊಂದು ಸಾವನ್ನಪ್ಪಿತ್ತು. ಆ ಸಂದರ್ಭದಲ್ಲೇ ಸ್ಥಳೀಯರು ಈ ಭಾಗದ ಕ್ವಾರಿಗಳಲ್ಲಿನ ಸುರಕ್ಷತಾ ಲೋಪಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂದು ಚಿರತೆ ಬಲಿಯಾದರೆ, ಇಂದು ಒಂಬತ್ತು ಮಂದಿ ಅಮಾಯಕ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಕ್ವಾರಿ ಪ್ರದೇಶದಲ್ಲಿ ಸುರಕ್ಷತಾ ನಿಯಮಗಳ ಸಂಪೂರ್ಣ ಉಲ್ಲಂಘನೆ

ಈ ದುರಂತವು ಕ್ವಾರಿ ಮಾಲೀಕರ ಬೇಜವಾಬ್ದಾರಿತನ ಹಾಗೂ ಸುರಕ್ಷತಾ ನಿಯಮಗಳ ಸಂಪೂರ್ಣ ಉಲ್ಲಂಘನೆಯನ್ನು ಎತ್ತಿತೋರಿಸುತ್ತಿದೆ. ಕ್ವಾರಿಯ ಮೇಲ್ಭಾಗದಲ್ಲಿ ಟ್ರ್ಯಾಕ್ಟರ್ ಬಳಸಿ ಬಂಡೆ ಜರುಗಿಸುವಂತಹ ಅಪಾಯಕಾರಿ ಕೆಲಸ ನಡೆಯುತ್ತಿರುವಾಗ, ಅದರ ಕೆಳಭಾಗದಲ್ಲಿ ಕಾರ್ಮಿಕರನ್ನು ಕೆಲಸ ಮಾಡಲು ಹೇಗೆ ಅನುಮತಿ ನೀಡಲಾಯಿತು? ಕಾರ್ಮಿಕರ ಜೀವ ರಕ್ಷಣೆಗೆ ಕನಿಷ್ಠ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಏಕೆ ಕೈಗೊಂಡಿರಲಿಲ್ಲ? ಎಂಬ ಗಂಭೀರ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಎದ್ದಿವೆ. ತಪ್ಪಿತಸ್ಥ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+