ವಿಧಿಯಾಟ: ನೆಲಮಂಗಲ ಅಪಘಾತದಲ್ಲಿ ಉದ್ಯಮಿಯ ಇಡೀ ಕುಟುಂಬ ನಿಧನ, ವಾರದಲ್ಲೇ ತಂದೆಯೂ ಇನ್ನಿಲ್ಲ
ಬೆಂಗಳೂರಿನ ನೆಲಮಂಗಲ ಬಳಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಉದ್ಯಮಿಯ ಇಡೀ ಕುಟುಂಬ ಅಸುನೀಗಿತ್ತು. ದುಬಾರಿ ಕಾರಿನಲ್ಲಿ ಬರುತ್ತಿದ್ದರೂ ಟ್ರಕ್ ಕಂಟೇನರ್ ಉರುಳಿದ ರಭಸಕ್ಕೆ ಇಡೀ ಕುಟುಂಬವೇ ಅಪ್ಪಚ್ಚಿಯಾಗಿ ಎಲ್ಲರೂ ಬೆಚ್ಚಿಬಿದಿದ್ದರು. ಇದೀಗ ಇವರ ಕುಟುಂಬದಲ್ಲಿ ಮತ್ತೊಮ್ಮೆ ಶೋಕ ಆವರಿಸಿದೆ. ಮಗನ ಕುಟುಂಬ ಮೃತಪಟ್ಟು ಒಂದು ವಾರದ ಅಂತರದಲ್ಲೇ ಅವರ ತಂದೆ ಕೂಡ ನಿಧನರಾಗಿದ್ದಾರೆ.
ಕಳೆದ ವಾರ ಸಂಭವಿಸಿದ ಅಪಘಾತದಲ್ಲಿ ಉದ್ಯಮಿ ಚಂದ್ರಮ್ ಅವರ ಕುಟುಂಬ ಸ್ಥಳದಲ್ಲೇ ಜೀವಬಿಟ್ಟಿತ್ತು. ಇದರಿಂದ ಅವರ ಕುಟುಂಬಕ್ಕೆ ದೊಡ್ಡ ಆಘಾತವೇ ಆಗಿತ್ತು. ಇದೀಗ ಅವರ ತಂದೆ ಈರಗೊಂಡ ಅವರು ಕೂಡ ನಿಧನರಾಗಿದ್ದಾರೆ. ಚಂದ್ರಮ್ ಅವರ ತಂದೆ ಈರಗೊಂಡ ಏಗಪ್ಪಗೊಳ (80) ಅವರು ಕೂಡ ನಿನ್ನೆ ಸಂಜೆ ಮಹಾರಾಷ್ಟ್ರದ ಸಾಂಗ್ಲಿಯ ಮೊರಬಗಿ ಗ್ರಾಮದಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಮಗನ ಸಾವಿನ ಶೋಕ ಮನೆಮಾಡಿರುವ ಹೊತ್ತಲ್ಲೇ ಈ ಕುಟುಂಬಕ್ಕೆ ಮತ್ತೆ ಸಾವಿನ ಹೊಡೆತ ನೀಡಿದೆ. ನೆಲಮಂಗಲದಲ್ಲಿ ನಡೆದಿದ್ದ ಕಾರು ಅಪಘಾತದಲ್ಲಿ ಪುತ್ರ ಚಂದ್ರಮ್, ಸೊಸೆ, ಮೊಮ್ಮಕ್ಕಳು ಭೀಕರವಾಗಿ ಸಾವನ್ನಪ್ಪಿದ್ದರು. ಇದೇ ನೋವಿನಲ್ಲಿದ್ದ ಈರಗೊಂಡ ಏಗಪ್ಪಗೊಳ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಅಂದು ಕಾರಿನಲ್ಲಿ ಹುಟ್ಟೂರಿನ ಕಡೆಗೆ ಉದ್ಯಮಿ ಹೊರಟಿದ್ದರು. ಇಬ್ಬರು ಮಹಿಳೆಯರು, ಎರಡು ಹೆಣ್ಣು ಮಕ್ಕಳು, ಹಾಗೂ ಇಬ್ಬರು ಪುರುಷರು ಸೇರಿ ಒಂದೇ ಕುಟುಂಬದ ಆರು ಮಂದಿ ಅಪಘಾತದಲ್ಲಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದರು. ನೆಲಮಂಗಲ ಸಮೀಪದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದಾರುಣ ಘಟನೆ ನಡೆದಿತ್ತು.
ಅಪಘಾತದಲ್ಲಿ ದೊಡ್ಡ ಕಂಟೇನರ್‌ವೊಂದು ನಿಯಂತ್ರಣ ತಪ್ಪಿ ಈ ಕಾರಿನ ಮೇಲೆ ತಕ್ಷಣ ಉರುಳಿತ್ತು. ಈ ವೇಳೆ ಕಾರಿನಲ್ಲಿ ಆರು ಮಂದಿ ಕಂಟೇನರ್ ಉರುಳಿದ್ದರಿಂದ ಕಾರು ಅಪ್ಪಚ್ಚಿಯಾಗಿದ್ದು, ಒಳಗಿದ್ದವರು ಕೂಡ ಸಾವನ್ನಪ್ಪಿದ್ದರು. ಮೃತರು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಮೂಲದವರಾದ ಚಂದ್ರಮ್ ಕುಟುಂಬದವರು ಎಂದು ತಿಳಿದುಬಂದಿತ್ತು.

ಚಂದ್ರಮ್ ಅವರು ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆಯಲ್ಲಿ ವಾಸವಿದ್ದು, ಐಎಎಸ್ಟಿ ಎನ್ನುವ ಸಾಫ್ಟ್‌ವೇರ್ ಕಂಪನಿ ಮಾಲೀಕರು ಎನ್ನಲಾಗಿದೆ. ತಂದೆಗೆ ಅನಾರೋಗ್ಯ ಸಮಸ್ಯೆ ಎದುರಾಗಿದ್ದರಿಂದ ಅವರು ವಾರಾಂತ್ಯದಲ್ಲಿ ತನ್ನ ಇಡೀ ಕುಟುಂಬದೊಂದಿಗೆ ಹುಟ್ಟೂರಿನ ಕಡೆಗೆ ಹೊರಟಿದ್ದರು. ಈ ಕಾರು ಸಹ ಇತ್ತೀಚೆಗೆ ಖರೀದಿಸಿದ್ದರು. ಮಾರ್ಗಮಧ್ಯೆಯೇ ಅವರು ಅಪಘಾತದಲ್ಲಿ ಮಸಣ ಸೇರಿದ್ದರು.
ಉದ್ಯಮಿ ಚಂದ್ರಮ್ ಏಗಪ್ಪಗೋಳ್, ಧೋರಾಬಾಯಿ, ಪುತ್ರ ಗ್ಯಾನ್, ಪುತ್ರಿಯರಾದ ದೀಕ್ಷಾ, ಆರ್ಯ ಹಾಗೂ ಚಂದ್ರಮ್ ಅವರ ಸಹೋದರನ ಪತ್ನಿ ವಿಜಯಲಕ್ಷ್ಮೀ ಎಂಬುವವರು ಕಾರಿನಲ್ಲಿದ್ದರು. ವಿಧಿಯಾಟಕ್ಕೆ ಇಡೀ ಕುಟುಂಬವೇ ಮೃತಪಟ್ಟಿತ್ತು.
ಇನ್ನು ಕಂಟೇನರ್ ಹೆಚ್ಚು ಭಾರ ಇದ್ದಿದ್ದರಿಂದ ಕಾರಿನಿಂದ ಮೇಲಕ್ಕೆತ್ತಲು ಸಾಧ್ಯವಾಗಲಿಲ್ಲ. ಪೊಲೀಸರು ಸ್ಥಳಕ್ಕಾಗಮಿಸಿ ಹರಸಾಹಸಪಟ್ಟರೂ ಕಾರನ್ನು ಹೊರತೆಗೆಯಲು ಆಗಿರಲಿಲ್ಲ. ಕೊನೆಗೆ ಮೂರು ಕ್ರೇನ್‌ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಕಂಟೇನರ್ ಅನ್ನು ಪಕ್ಕಕ್ಕೆ ಸರಿಸಲಾಗಿತ್ತು.












Click it and Unblock the Notifications