Bengaluru Traffic: ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಬೆಂಗಳೂರು ಪೊಲೀಸ್
ಬೆಂಗಳೂರು, ಜನವರಿ 08: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆ ಮಾಡುವುದು ಪೊಲೀಸರಿಗೆ ಪ್ರಮುಖ ಸವಾಲು. ಇದಕ್ಕಾಗಿ ಹಲವಾರು ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಈಗ ನಗರದ ಬಹುತೇಕ ಸಿಗ್ನಲ್‌ಗಳನ್ನು ಎಐ ಮೂಲಕ ಕಾರ್ಯ ನಿರ್ವಹಣೆ ಮಾಡುವ ವಿಎಸಿ ಸಿಗ್ನಲ್ ಆಗಿ ಪರಿವರ್ತನೆ ಮಾಡಲಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಕಡಿಮೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಗರದ ಸಿಗ್ನಲ್‌ಗಳಲ್ಲಿ ಸಂಚಾರಿ ಪೊಲೀಸರು ಕಾಣಿಸುತ್ತಿಲ್ಲ. ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ಡ್ (ವಿಎಸಿ) ಮೂಲಕ ಸಿಗ್ನಲ್‌ಗಳ ಕಾರ್ಯ ನಿರ್ವಹಣೆ ಆಗುತ್ತಿದೆ. ಆದರೆ ಇದರಿಂದ ವಾಹನ ಸವಾರರಿಗೆ ಹೊಸ ಸಂಕಷ್ಟ ಎದುರಾಗಿದೆ. ಈ ಸಿಗ್ನಲ್ ವ್ಯವಸ್ಥೆಯಲ್ಲಿ ಯಾವಾಗ ಹಸಿರು ದೀಪ ಆನ್ ಆಗಲಿದೆ? ಎಂದು ಅಂದಾಜಿಸುವುದು ಕಷ್ಟ.

ಸಂಚಾರಿ ಪೊಲೀಸರ ಮಾಹಿತಿ ಪ್ರಕಾರ ವಿಎಸಿ ಸಿಗ್ನಲ್ ಎಐ ಮೂಲಕ ಕಾರ್ಯ ನಿರ್ವಹಣೆ ಮಾಡುತ್ತದೆ. ರಸ್ತೆಯಲ್ಲಿರುವ ವಾಹನ ದಟ್ಟಣೆ ಆಧರಿಸಿ ಹಸಿರು ದೀಪ ಆನ್ ಆಗುತ್ತದೆ. ಆದ್ದರಿಂದ ವಾಹನ ಸವಾರರು ಗಾಡಿ ಆಫ್ ಮಾಡಿಕೊಂಡು ಎಷ್ಟು ಹೊತ್ತಿ ಕಾಯಬೇಕು ಎಂಬ ಲೆಕ್ಕಾಚಾರ ಸಿಗುತ್ತಿಲ್ಲ. ಸಿಗ್ನಲ್ ನೋಡುತ್ತಾ ನಿಲ್ಲಬೇಕಾದ ಪರಿಸ್ಥಿತಿ ಇದೆ.
ಸಂಚಾರಿ ಪೊಲೀಸರಿಂದ ಗುಡ್ ನ್ಯೂಸ್: ಈಗ ನಗರದ ವಾಹನ ಸವಾರರಿಗೆ ಸಂಚಾರಿ ಪೊಲೀಸರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ವಿಎಸಿ ಸಿಗ್ನಲ್‌ಗಳಲ್ಲಿ 5 ಸೆಕೆಂಡ್ ಕೌಂಟ್‌ಡೌನ್ ನೀಡುವ ವ್ಯವಸ್ಥೆ ಪರಿಚಯಿಸಲಿದ್ದಾರೆ. ಇದನ್ನು ಅಳವಡಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಲಿದ್ದು, ವಾಹನ ಸವಾರರಿಗೆ ಯಾವಾಗ ಹಸಿರು ದೀಪ ಆನ್ ಆಗಲಿದೆ? ಎಂಬ ಮಾಹಿತಿ ಈ ಮೂಲಕ ಸಿಗಲಿದೆ.
ಈ ಹಿಂದೆ ಇದ್ದ ಸಂಪ್ರದಾಯಿಕ ಸಿಗ್ನಲ್ ವ್ಯವಸ್ಥೆಯಲ್ಲಿ ಸೆಕೆಂಡ್ ಕೌಂಟ್‌ಡೌನ್ ಕಾಣುವ ವ್ಯವಸ್ಥೆ ಇತ್ತು. ಆಗ ಸವಾರರು 120 ಸೆಕೆಂಡ್ ಇದೆ ಎಂದರೆ ಗಾಡಿ ಆಫ್ ಮಾಡಿಕೊಂಡು ಕಾಯುತ್ತಿದ್ದರು. ಆದರೆ ಈಗ ವಿಎಸಿ ವ್ಯವಸ್ಥೆಯಲ್ಲಿ ಎದುರಿನ ರಸ್ತೆ ವಾಹನ ದಟ್ಟಣೆ ಕಡಿಮೆ ಆದರೆ ಹಸಿರು ದೀಪ ತಕ್ಷಣ ಆನ್ ಆಗುತ್ತದೆ. ಆದ್ದರಿಂದ ಯಾವಾಗ ಸಿಗ್ನಲ್ ತೆರೆಯಲಿದೆ ಎಂದು ಅಂದಾಜಿಸುವುದೇ ಕಷ್ಟವಾಗಿದೆ.
ಸಿಗ್ನಲ್‌ಗಳಲ್ಲಿ ಸೆಕೆಂಡ್ ವ್ಯವಸ್ಥೆ ಇಲ್ಲದಿರುವ ಕುರಿತು ಈಗಾಗಲೇ ಸಂಚಾರಿ ಪೊಲೀಸರಿಗೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈಗ ಸೆಕೆಂಡ್ ವ್ಯವಸ್ಥೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ (ಸಂಚಾರಿ) ಎಂ. ಎನ್. ಅನುಚೇತ್ ಈ ಕುರಿತು ಮಾತನಾಡಿ, "ಸಿಗ್ನಲ್‌ಗಳಲ್ಲಿ ಸೆಕೆಂಡ್ ಕಾಣುವ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ವ್ಯವಸ್ಥೆ ವಾಹನ ಸವಾರರು ಹೊರಡಲು ತಯಾರಾಗುವಂತೆ ಸೂಚನೆ ನೀಡಲಿದೆ. ಇದು ಯಾವಾಗ ಸಿಗ್ನಲ್ ತೆರೆಯಲಿದೆ? ಎಂಬ ಗೊಂದಲವನ್ನು ಸಹ ಕಡಿಮೆ ಮಾಡಲಿದೆ" ಎಂದು ಹೇಳಿದ್ದಾರೆ.
ಒಂದು ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾದ ತಕ್ಷಣ ವಿಎಸಿ ವ್ಯವಸ್ಥೆಯಲ್ಲಿ ತಕ್ಷಣ ಹಸಿರು ದೀಪ ಆನ್ ಆಗುತ್ತದೆ. ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾದರೆ ತಕ್ಷಣದ ಕೆಂಪು ದೀಪ ಬರುತ್ತದೆ. ಆಗ ಸಿಗ್ನಲ್ ಕ್ರಾಸ್ ಮಾಡಿದರೆ ಅದನ್ನು ಸಂಚಾರ ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ದಂಡ ಹಾಕಬಾರದು ಎಂದು ವಾಹನ ಸವಾರರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಸಂಚಾರಿ ಪೊಲೀಸರ ಮಾಹಿತಿ ಪ್ರಕಾರ ಎಐ ಮೂಲಕ ಕಾರ್ಯ ನಿರ್ವಹಣೆ ಮಾಡುವ ವಿಎಸಿ ಸಿಗ್ನಲ್ ವ್ಯವಸ್ಥೆಯನ್ನು ನಗರದ 100 ಜಂಕ್ಷನ್‌ಗಳಲ್ಲಿ ಮಾಡಲಾಗಿದೆ. ಮಾರ್ಚ್ 2025ರ ಅಂತ್ಯಕ್ಕೆ ಇನ್ನೂ 65 ಜಂಕ್ಷನ್‌ನಲ್ಲಿ ಈ ಮಾದರಿ ಸಿಗ್ನಲ್ ಅಳವಡಿಕೆಯಾಗಲಿದೆ. ಎರಡನೇ ಹಂತದಲ್ಲಿ 300 ಸಿಗ್ನಲ್‌ಗಳನ್ನು ವಿಎಸಿ ಮಾದರಿಯಾಗಿ ಪರಿವರ್ತನೆ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಪ್ರತಿ ಸಿಗ್ನಲ್‌ಗೂ ಕಾಲಮಿತಿಯನ್ನು ಅಳವಡಿಕೆ ಮಾಡಿ ವಾಹನ ಸಂಚಾರ ನಿಯಂತ್ರಣ ಮಾಡುವ ಸಾಂಪ್ರದಾಯಿಕ ವ್ಯವಸ್ಥೆಯನ್ನು ಪೊಲೀಸರು ಬದಲಾವಣೆ ಮಾಡುತ್ತಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಆಯಾ ರಸ್ತೆಯ ವಾಹನ ದಟ್ಟಣೆಯನ್ನು ಗಮನಿಸಿ ಹಸಿರು ನಿಶಾನೆ ತೋರಿಸುವ ವ್ಯವಸ್ಥೆಯನ್ನು ವಿಎಸಿ ಹೊಂದಿದೆ.
ನಗರದ ಕೆಲವು ಸಿಗ್ನಲ್‌ಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಅಳವಡಿಕೆ ಮಾಡಿ, ಅಧ್ಯಯನ ನಡೆಸಲಾಗಿತ್ತು. ಇದು ಸಂಚಾರ ದಟ್ಣಣೆಯನ್ನು ಕಡಿಮೆ ಮಾಡಿದ ಕಾರಣಕ್ಕೆ ನಗರದ 100 ಜಂಕ್ಷನ್‌ಗಳಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಒಂದು ಜಂಕ್ಷನ್‌ನಿಂದ ಮತ್ತೊಂದು ಜಂಕ್ಷನ್‌ಗೆ ಕಡಿಮೆ ಸಮಯದಲ್ಲಿ ವಾಹನಗಳ ಸಂಚಾರಕ್ಕೆ ಈ ವಿಎಸಿ ವ್ಯವಸ್ಥೆ ಅನುಕೂಲ ಕಲ್ಪಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರತಿ ಸಿಗ್ನಲ್‌ನಲ್ಲಿ 10 ಸೆಕೆಂಡ್ ಸಮಯ ಉಳಿದರೆ ಇಂಧನ ಸಹ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ. ಪೊಲೀಸರು ನಗರದ 165 ಜಂಕ್ಷನ್‌ಗಳಲ್ಲಿ ಮೊದಲ ಹಂತದಲ್ಲಿ ವಿಎಸಿ ಸಿಗ್ನಲ್ ವ್ಯವಸ್ಥೆಯನ್ನು 53 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದರು.












Click it and Unblock the Notifications