ಬೆಂಗಳೂರು: ಟಿನ್ ಫ್ಯಾಕ್ಟರಿ ಜಂಕ್ಷನ್ ಕಡೆ ಹೋಗುವವರ ಗಮನಕ್ಕೆ: ಇಲ್ಲಿದೆ ಉಪಯುಕ್ತ ಮಾಹಿತಿ
ಬೆಂಗಳೂರು, ಡಿಸೆಂಬರ್ 05: ಬೆಂಗಳೂರು ಸಂಚಾರಿ ಪೊಲೀಸರ ಸಣ್ಣ ಬದಲಾವಣೆಯೊಂದು ನಗರದ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ ಬಳಿಯಿರುವ ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿಯ ವಾಹನ ದಟ್ಟಣೆಯನ್ನು ಕಡಿಮೆ ಮಾಡಿದೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಈ ರಸ್ತೆಯಲ್ಲಿ ಸುರಕ್ಷಿತವಾಗಿ ಪ್ರಯಾಣಿಸಬಹುದಾಗಿದೆ.
ಕೆಆರ್ ಪುರ ತೂಗು ಸೇತುವೆಯ ಮುಖಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಸಂಚಾರಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಬಸ್ ನಿಲುಗಡೆಯನ್ನು ಸ್ಕೈವಾಕ್‌ನ ಕೆಳಗೆ 100 ಮೀಟರ್ ಹಿಂದಕ್ಕೆ ಸ್ಥಳಾಂತರಿಸಿದ್ದಾರೆ. ಈ ಹಿಂದೆ ತೂಗು ಸೇತುವೆಯ ಮೇಲೆ ಹೋಗುವ ಎಲ್ಲಾ ಬಸ್‌ಗಳನ್ನು ಸೇತುವೆಯ ಪ್ರಾರಂಭದಲ್ಲಿಯೇ ನಿಲ್ಲಿಸಲಾಗುತ್ತಿತ್ತು. ಇದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು.

ಸದ್ಯ ಬ್ಯಾರಿಕೇಡ್ ಅಳವಡಿಸಿರುವ ಸಂಚಾರಿ ಪೊಲೀಸರು ಎಲ್ಲಾ ರೀತಿಯ ಬಸ್‌ಗಳು ಮತ್ತು ವಾಹನಗಳ ನಿಲುಗಡೆಯನ್ನು ಈ ಸ್ಥಳದಲ್ಲಿ ನಿಷೇಧಿಸಲಾಗಿದೆ ಎಂದು ಬ್ಯಾನರ್ ಅಳವಡಿಸಿದ್ದಾರೆ.
ಈ ಹಿಂದೆ ಬಸ್‌ಗಳ ನಿಲುಗಡೆಯಿಂದ ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿಯ ಪ್ರದೇಶದಲ್ಲಿ ಸಂಚಾರ ದಟ್ಟಣೆ ಏರ್ಪಡುತ್ತಿತ್ತು. ಕೆಲವೊಮ್ಮೆ ಕಸ್ತೂರಿ ನಗರ ಡೌನ್ ರಾಂಪ್‌ವರೆಗೂ ಟ್ರಾಫಿಕ್ ಉಂಟಾಗುತ್ತಿತ್ತು. ಆದರೆ ಈ ಬದಲಾವಣೆಯು ಈಗ ಸಾವಿರಾರು ಪಾದಚಾರಿಗಳು ಮತ್ತು ಬಸ್ ಮತ್ತು ಮೆಟ್ರೋ ಪ್ರಯಾಣಿಕರಿಗೆ ನೆರವಾಗಿದೆ. ಈಗ ಹೊಸಕೋಟೆ, ಮದನಪಲ್ಲಿ ಮತ್ತು ಇತರ ಸ್ಥಳಗಳಿಗೆ ಹೋಗುವವರು ನೇರವಾಗಿ ಸ್ಕೈವಾಕರ್ ಕೆಳಗಡೆಯಲ್ಲಿ ಬಸ್ ಹತ್ತಬಹುದಾಗಿದೆ.
ಮಹದೇವಪುರ, ವೈಟ್‌ಫೀಲ್ಡ್ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ಹೋಗುವ ಬಸ್‌ಗಳು ಮೆಟ್ರೋ ನಿಲ್ದಾಣದ ಎಕ್ಸಿಟ್ 'ಎ' ಹೊರಗೆ ಸಾಲುಗಟ್ಟಿ ನಿಲ್ಲುತ್ತಿದ್ದು, ಮೆಟ್ರೋ ನಿಲ್ದಾಣದಿಂದ ನಿರ್ಗಮಿಸುವಾಗ ಪ್ರಯಾಣಿಕರು ನೇರವಾಗಿ ಬಸ್‌ಗಳನ್ನು ಹತ್ತಲು ಸುಲಭವಾಗುತ್ತಿದೆ.
ಸಂಚಾರಿ ಪೊಲೀಸರಿಂದ ಆದ ಈ ಹೊಸ ಬದಲಾವಣೆ ತಿಳಿಯದೇ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದು, ಹಳೆಯ ಬಸ್ ನಿಲ್ದಾಣದತ್ತ ತೆರಳಲು ಹಾಗೂ ಅಲ್ಲೇ ರಸ್ತೆ ದಾಟಲು ಪ್ರಯತ್ನಿಸಿದರು. ಈ ವೇಳೆ ಅಲ್ಲೇ ಇದ್ದ ಸಂಚಾರಿ ಪೊಲೀಸರು ಅವರಿಗೆ ಮಾಹಿತಿ ನೀಡಿದ್ದು, ಈ ಬದಲಾವಣೆ ಸುರಕ್ಷಿತವಾಗಿದೆ ಮತ್ತು ಪ್ರಯಾಣಿಕರಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು.
ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಈ ಬಗ್ಗೆ ಮಾಹಿತಿ ನೀಡಿದ್ದು, 'ಬುಧವಾರದಿಂದ ನಾವು ಬಸ್‌ಗಳನ್ನು ಪ್ರತ್ಯೇಕಿಸಲು ಪ್ರಾರಂಭಿಸುತ್ತೇವೆ. ಮಹದೇವಪುರ ಮತ್ತು ವೈಟ್‌ಫೀಲ್ಡ್ ಕಡೆಗೆ ಹೋಗುವವರಿಗೆ ಮೆಟ್ರೋ ಪಿಲ್ಲರ್‌ನ ಎಡಕ್ಕೆ ಹೋಗಲು ನಿರ್ದೇಶಿಸಲಾಗಿದೆ. ಹಾಗೂ ತೂಗು ಸೇತುವೆಯ ಮೇಲೆ ಹೋಗುವ ಇತರ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ನೇರವಾಗಿ ಹೋಗುತ್ತವೆ. ಇದರಿಂದ ಟ್ರಾಫಿಕ್ ದಟ್ಟಣೆ ತೀವ್ರವಾಗಿ ಇಳಿಮುಖವಾಗಲಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications