ಶೌಚಾಲಯಗಳ ನಿರ್ವಹಣೆ; ಮಾಹಿತಿ ನೀಡದ ಸರ್ಕಾರಕ್ಕೆ 5 ಲಕ್ಷ ದಂಡ
ಬೆಂಗಳೂರು, ಅಕ್ಟೋಬರ್ 05; ಬೆಂಗಳೂರು ಮಹಾನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಹಾಗೂ ನಿರ್ವಹಣೆ ವಿಚಾರದಲ್ಲಿ ಸಮರ್ಪಕ ಮಾಹಿತಿ ನೀಡದ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ. ಅಷ್ಟೇ ಅಲ್ಲದೆ, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ದಂಡದ ಭಾಷೆಯೇ ಸರ್ಕಾರಕ್ಕೆ ಅರ್ಥವಾಗೋದು, ಇಲ್ಲವಾದರೆ ಅರ್ಥವಾಗುವುದಿಲ್ಲ ಎಂದು ಚಾಟಿ ಬೀಸಿದೆ.
ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಲೆಟ್‌ಜ್‌ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದಿಕ್ಷೀತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಕೋರ್ಟ್ ಹೇಳಿದ್ದೇನು?; ಕೆಲ ಕಾಲ ವಾದ ಅಲಿಸಿದ ಬಳಿಕ ನ್ಯಾಯಪೀಠ, ತಮ್ಮ ಬಳಿ ಮಾಹಿತಿ ಇಲ್ಲ ಎಂದು ಸರ್ಕಾರಿ ಪರ ವಕೀಲರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಸರ್ಕಾರದ ಈ ಧೋರಣೆ ಸಹಿಸಲಾಗದು ಎಂದು ಹೇಳಿತು.
ಸರ್ಕಾರ ತನ್ನ ತಪ್ಪಿಗಾಗಿ 5 ಲಕ್ಷ ರೂ. ಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳ ಖಾತೆಗೆ ಎರಡು ವಾರಗಳಲ್ಲಿ ಜಮೆ ಮಾಡಬೇಕು. ಅಲ್ಲದೇ ಮುಂದಿನ ವಿಚಾರಣೆಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿತು.
ದಂಡದ ಮೊತ್ತ ಕಡಿಮೆ ಮಾಡುವಂತೆ ಸರ್ಕಾರಿ ವಕೀಲರು ಮನವಿ ಮಾಡಿಕೊಂಡರು. ಅದಕ್ಕೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಸರ್ಕಾರದ ಈ ನಡೆಗೆ ನನ್ನ ಪ್ರಕಾರ 25 ಲಕ್ಷ ರೂ. ದಂಡ ವಿಧಿಸಬೇಕು. ಆದರೆ, ಮುಖ್ಯ ನ್ಯಾಯಮೂರ್ತಿಗಳು ಕರುಣೆ ತೋರಿ 5 ಲಕ್ಷ ರೂ. ದಂಡ ವಿಧಿಸಿದ್ದಾರೆ. ನಮಗೆ ಹೇಳಲು ಬೇಸರವಾಗುತ್ತದೆ. ಆದರೆ, ಸರ್ಕಾರ ಮತ್ತು ಅಧಿಕಾರಿಗಳಿಗೆ ಇಂತಹದ್ದೇ ಭಾಷೆ ಅರ್ಥವಾಗುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್, ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಹಾಗೂ ನಿರ್ವಹಣೆ ಕುರಿತ ಪ್ರಕರಣ ಮೂರು ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ, ಸರ್ಕಾರ ಇದರ ಬಗ್ಗೆ ಗಾಢ ಮೌನವಹಿಸಿದ್ದು, ಒಂದೇ ಒಂದು ಹೇಳಿಕೆ, ವರದಿ, ಪ್ರಮಾಣಪತ್ರ, ಆಕ್ಷೇಪಣೆ ಯಾವುದೂ ಸಲ್ಲಿಸಿಲ್ಲ ಎಂದರು.
ಅಲ್ಲದೆ, 2023ರ ಆಗಸ್ಟ್ 8ರಂದು ರಾಜ್ಯ ಸರ್ಕಾರಕ್ಕೆ ಮೂರು ವಾರಗಳಲ್ಲಿ ವಿವರವಾದ ವರದಿ ಸಲ್ಲಿಸಲು ನಿರ್ದೇಶನ ನೀಡಿತ್ತು. ಆದರೆ, ಈವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಗಮನ ಸೆಳೆದರು. ಆಗ ಸರ್ಕಾರಿ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಂದ ತಮಗೆ ಯಾವುದೇ ನಿರ್ದೇಶನ, ಮಾಹಿತಿ ಬಂದಿಲ್ಲ ಎಂದು ವಕೀಲರು ತಿಳಿಸಿದರು.











Click it and Unblock the Notifications