ಸಂಚಾರ ಪೆಡಂಭೂತಕ್ಕೆ ಮತ್ತೆ ರಸ್ತೆ ಅಗಲೀಕರಣ ತಂತ್ರ

ರಸ್ತೆ ಸಂಚಾರ ಪೆಡಂಭೂತಕ್ಕೆ ರಸ್ತೆ ಅಗಲೀಕರಣದ ತಂತ್ರ:
ಈ ಹಿಂದೆ ಸಂಚಾರ ದಟ್ಟಣೆ ಹೆಚ್ಚಾಗಿರುವ 36 ರಸ್ತೆಗಳ ಅಗಲೀಕರಣಕ್ಕೆ ನಿರ್ಧರಿಸಲಾಗಿತ್ತು. ಆದರೆ ಅದು ಕೈಗೂಡಿರಲಿಲ್ಲ. ಈಗ ಆ ಬಗ್ಗೆ ಪುನರ್ ಚಿಂತನೆ ನಡೆಸಿ, ಕ್ರಮಕೈಗೊಳ್ಳುವ ಜರೂರತ್ತು ಬಹಳಷ್ಟಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. (ಬೆಂಗಳೂರು ರಸ್ತೆ ಸುಧಾರಣೆಗೆ ಸಚಿವ ರೆಡ್ಡಿ ಮಾಸ್ಟರ್ ಪ್ಲಾನ್)
ಮೂರು ಪಟ್ಟು ಹೆಚ್ಚು ಪರಿಹಾರ: ಗಮನಾರ್ಹವೆಂದರೆ 'ರಸ್ತೆ ಅಗಲೀಕರಣಕ್ಕಾಗಿ ಜಾಗ ಕಳೆದುಕೊಳ್ಳುವ ಮಾಲೀಕರಿಗೆ ಟಿಡಿಆರ್ ಪ್ರಮಾಣಪತ್ರ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು-Transfer of Development Rights -TDR) ಮೂಲಕ ಉತ್ತಮ ಪರಿಹಾರ ನೀಡಬೇಕು. ಹೊಸ ಪದ್ಧತಿಯನುಸಾರ ರಸ್ತೆ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಜಾಗಕ್ಕೆ ಹಿಂದಿನ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಲಾಗುವುದು' ಎಂದು ಸಚಿವರು ಹೇಳಿದ್ದಾರೆ.
ರಸ್ತೆ ಅಗಲೀಕರಣಕ್ಕಾಗಿ ಗುರುತಿಸಿರುವ ರಸ್ತೆಗಳಲ್ಲಿ ಅಗಲೀಕರಣವನ್ನು ಪರಿಗಣಿಸಿಯೇ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನುಮತಿ ನೀಡಲಾಗುತ್ತಿದೆ. ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರಗಳಲ್ಲಿ ಮಾಡಿದಂತೆ ಆಗಾಗ ರಸ್ತೆ ಅಗಲೀಕರಣ ಮಾಡುತ್ತಲೇ ಇರಬೇಕು. ಇಲ್ಲವಾದರೆ ಮುಂದೆ ರಸ್ತೆ ಸಂಚಾರ ಪೆಡಂಭೂತವಾಗಿ ಕಾಡಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.












Click it and Unblock the Notifications