ಬೆಂಗಳೂರಿಗೆ 3 ದಿನ ಧಾರಾಕಾರ ಮಳೆ: IMDಯಿಂದ ಹಳದಿ ಎಚ್ಚರಿಕೆ
ಬೆಂಗಳೂರು, ಅಕ್ಟೋಬರ್ 11: ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ಭಾರಿ ವರ್ಷಧಾರೆಗೆ ಸಾಕ್ಷಿಯಾಗಲಿದೆ. ಸೋಮವಾರ ಸುರಿದ ಸಾಧಾರಣ ಮಳೆ ಮುಂದುವರಿಯಲಿದ್ದು, ಗುರುವಾರಕ್ಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಮಂಗಳವಾರ ಹಾಗೂ ಬುಧವಾರ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಸಾಧಾರಣವಾಗಿ ಮಳೆ ಆಗಲಿದೆ. ಗುರುವಾರದ ವೇಳೆಗೆ ಈ ಮಳೆ ಅಬ್ಬರದ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆ ಇದೆ. ಅಂದು ಅತ್ಯಧಿಕ ಮಳೆ ಬರುವ ನಿರೀಕ್ಷೆ ಇರುವ ಕಾರಣಕ್ಕೆ ಬೆಂಗಳೂರು ನಗರ ಜಿಲ್ಲೆಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ನಗರದಲ್ಲಿ ಕಳೆದ ಒಂದು ವಾರದಿಂದ ವರುಣನ ಅಬ್ಬರ ಹಂತ ಹಂತವಾಗಿ ಏರಿಕೆ ಆಗುತ್ತಿದೆ. ಪ್ರತಿ ದಿನ ಬೆಳಗ್ಗೆಯಿಂದ ಮೋಡ ಕವಿದ ಹಾಗೂ ತಂಪು ವಾತಾವರಣ ಕಂಡ ಬರುತ್ತಿದೆ. ಮಧ್ಯಾಹ್ನದ ನಂತರ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಇದೇ ರೀತಿ ಸೋಮವಾರ ಬೆಂಗಳೂರಿನ ಬಹುತೇಕ ಎಲ್ಲ ಕಡೆಗಳಲ್ಲಿ ಸಾಧಾರಣದಿಂದ ಧಾರಾಕಾರವಾಗಿ ಮಳೆ ದಾಖಲಾಗಿದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಎಂಡಿಸಿ) ವರದಿ ತಿಳಿಸಿದೆ.

ಯಲಹಂಕದಲ್ಲಿ 71.5ಮಿ.ಮೀ.ಮಳೆ
ಸೋಮವಾರ ಯಲಹಂಕದಲ್ಲಿ ಅಧಿಕ 71.5 ಮಿಲಿ ಮೀಟರ್ ಮಳೆ ಬಿದ್ದಿದೆ. ಅಟ್ಟೂರಲ್ಲಿ 68ಮಿ.ಮೀ, ಚೌಡೇಶ್ವರಿ ವಾರ್ಡ್ 57.5ಮಿ.ಮೀ, ಯಲಹಂಕ 55ಮಿ.ಮೀ, ವಿದ್ಯಾರಣ್ಯಪುರ 49ಮಿ.ಮೀ, ಜಕ್ಕೂರು 40ಮಿ.ಮೀ, ಕೊಡಿಗೇಹಳ್ಳಿ 38ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 37ಮಿ.ಮೀ, ದೊಡ್ಡಾನೆಕ್ಕುಂದಿ ಮತ್ತು ಸಂಪಂಗಿರಾಮನಗರ ತಲಾ 30ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣ ಮತ್ತು ಕೆಆರ್ ಪುರಂ ತಲಾ 28.5ಮಿ.ಮೀ. ಮಳೆ ಆಗಿದೆ. ಇದಲ್ಲದೇ ಬೆಂಗಳೂರು ಪೂರ್ವ, ಬಿಟಿಎಂ ಬಡಾವಣೆ, ದೊರೆಸಾನಿ ಪಾಳ್ಯ, ವಿಜಯನಗರ, ಮೆಜೆಸ್ಟಿಕ್, ಆರ್.ಆರ್.ನಗರ, ಹೆಬ್ಬಾಳ ಸುತ್ತಮುತ್ತಲಿನ ಪ್ರದೇಶದಲ್ಲಿ ಹಗುರು ಮಳೆ ಬಿದ್ದಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿ ತಿಳಿಸಿದೆ.

ಪ್ರತಿದಿನ ಮಧ್ಯಾಹ್ನದ ನಂತರ ಸುರಿಯುತ್ತಿರುವ ಮಳೆಯಿಂದ ಸಾರ್ವಜನಿಕರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಕೆ.ಆರ್.ವೃತ್ತ, ಟೌನ್ ಹಾಲ್, ಸುಜಾತ, ರಾಜಾಜಿನಗರ, 80ಅಡಿ ರಸ್ತೆ, ಚಾಲುಕ್ಯ ವೃತ್ತ, ಶಿವಾನಂದ ವೃತ್ತ, ರಸ್ತೆ ಅಂಡರ್‌ಪಾಸ್‌ಗಳಲ್ಲಿ ಕೊಳಚೆ ನೀರಿನ ಜತೆ ಮಳೆ ನೀರು ಉಕ್ಕಿ ಹರಿದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.












Click it and Unblock the Notifications