ಇಂದಿನಿಂದ 3 ದಿನ 'ವೀರಲೋಕ ಪುಸ್ತಕ ಸಂತೆ': ಸಾಹಿತ್ಯಾಸಕ್ತರು ಸೇರಿ ಒಂದು ಲಕ್ಷ ಜನರ ನಿರೀಕ್ಷೆ..
ಬೆಂಗಳೂರು, ನವೆಂಬರ್ 15: ನವೆಂಬರ್ ತಿಂಗಳು ಬಂತೆಂದರೆ ಸಾಕು ವಿವಿಧ ಸಂಸ್ಥೆಗಳು ಸಾಹಿತ್ಯಾಸಕ್ತರಿಗೆ ಪುಸ್ತಕಗಳ ಮಾರಾಟ ಆಯೋಜನೆ, ರಿಯಾಯಿತಿಯಂತಹ ಕೊಡುಗೆ ಮೂಲಕ ಓದುಗರನ್ನು ಸೆಳೆಯುತ್ತಿವೆ. ಇದೀಗ ವೀರಲೋಕ ಸಂಸ್ಥೆಯು ಇಂದಿನಿಂದ ಮೂರು ದಿನ ನಗರದಲ್ಲಿ ಪುಸ್ತಕ ಸಂತೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಪುಸ್ತಕ ಮತ್ತು ಸಾಹಿತ್ಯ ಪ್ರೇಮಿಗಳಿಗೆ ಖರೀದಿಗೆ ಒಳ್ಳೆಯ ಅವಕಾಶ ಎನ್ನಲಾಗಿದೆ.
ಇದು ವೀರಲೋಕದ ಎರಡನೇ ಪುಸ್ತಕ ಸಂತೆ ಆಗಿದೆ. ಈ ಕಾರ್ಯಕ್ರಮವು ಇಂದು ನವೆಂಬರ್ 15ರಿಂದ 16 ಮತ್ತು 17ರವರೆಗೆ ಮೂರು ದಿನ ನಡೆಯಲಿದೆ. ಜಯನಗರದ ಶಾಲಿನಿ ಮೈದಾನದಲ್ಲಿ ಹಮ್ಮಿಕೊಂಡಿರುವ ಈ ಹೊತ್ತಿಗೆಗಳ ಸಂತೆಯನ್ನು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಂಕೇಗೌಡ ಅವರು ಪುಸ್ತಕ ಪರಿಚಾರಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುಸ್ತಕ ಮಳಿಗೆಗೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಆಹಾರ ಮೇಳಕ್ಕೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಕ್ಕಳ ಮೇಳಕ್ಕೆ ವಿಶ್ವವಿದ್ಯಾಲಯ ಕುಲಪತಿ ಡಾ. ಜಯಕರ ಎಸ್.ಎಂ.ಚಾಲನೆ ನೀಡಲಿದ್ದಾರೆ.
ಸಂತೆಯಲ್ಲಿ ಪ್ರಕಾಶಕರು, ಲೇಖಕರು, ಓದುಗರು
ರಾಜ್ಯದ ಮಟ್ಟದಲ್ಲಿ ಹೆಚ್ಚು ಪ್ರಕಾಶಕರು ಈ ಪುಸ್ತಕ ಸಂತೆಗೆ ಆಗಮಿಸಲಿದ್ದಾರೆ. ವಿವಿಧ ಲೇಕಕರು ಸಂತೆಯಲ್ಲಿರಲಿದ್ದಾರೆ. ಸಾಹಿತ್ಯಾಸಕ್ತರು ಇಲ್ಲಿಗೆ ಬಂದರೆ, ಲೇಖಕರು, ಪ್ರಕಾಶಕರು ಸೇರಿ ಈ ಮೂವರ ಮಧ್ಯೆ ಮುಖಾ ಮುಖಿ ಸಂವಾದ ನಡೆಸಬಹುದಾಗಿದೆ. ಅವರೆಲ್ಲರು ಮೂರು ದಿನ ಇಲ್ಲಿ ಸೇರುವ ಮೂಲಕ ಈ ವೀರಲೋಕ ಸಂತೆ, ಹಬ್ಬವಾಗಿ ಬದಲಾಗುವ ನಿರೀಕ್ಷೆ ಇದೆ. ಅಪಾರ ಪ್ರಮಾಣದಲ್ಲಿ ಜನರು ಬರುವ ಸಾಧ್ಯತೆ ಇದೆ. ಸುಮಾರು ಒಂದು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ.
ಸಂತೆಯಲ್ಲಿ 20 ಪುಸ್ತಕ ಬಿಡುಗಡೆ
ಮುಖ್ಯವಾಗಿ ಈ ಸಂತೆಯಲ್ಲಿ ವೀರಲೋಕ ಪ್ರಕಟಣೆಯ ವಿವಿಧ ಪ್ರಕಾರಗಳ 20 ಪುಸ್ತಕಗಳು ಈ ವೇಳೆ ಬಿಡುಗಡೆಗೊಳ್ಳಲಿವೆ.ಅದಷ್ಟ ಅಲ್ಲದೇ ಜಾನಪದ ಸಂಜೆ, ಭಾವಗೀತೆ ಸಂಜೆ, ಚಲನಚಿತ್ರಗೀತೆ ಸಂಜೆ ಎಂಬ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ವೀರಲೋಕ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಸಂಜೆ 5.30ಕ್ಕೆ ಒಟ್ಟು 6 ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ್, ನಟಿ ಭಾವನಾ, ರಂಗನಾಥ್ ಭಾರಧ್ವಾಜ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನವೆಂಬರ್ 16ರಂದು 'ಕತೆ ಕಟ್ಟೋಣ ಬನ್ನಿ' ಕಾರ್ಯಾಗಾರ ನಡೆಯಲಿದೆ. ನಂತರ ಸಂಜೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇದೇ ರೀತಿಯ ಕಾರ್ಯಕ್ರಮಗಳು ನವೆಂಬರ್ 17ರಂದು ನಡೆಯಲಿದ್ದು, ಅಂದು ಸಹ ಪುಸ್ತಕ ಬಿಡುಗಡೆ ಆಗಲಿವೆ. ವಿವಿಧ ಗಣ್ಯರು, ಸಾಹಿತ್ಯಗಳು, ಲೇಖಕರು ಪ್ರಕಾಶಕರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications