ಕೊಟ್ಟಿಗೆಯಲ್ಲಿ ಸುರೇಶ್ ಕುಮಾರ್ ರಾತ್ರಿವಾಸ್ತವ್ಯದ ರಹಸ್ಯ
ನಂಜನಗೂಡು, ಏಪ್ರಿಲ್ 04 : ನಂಜನಗೂಡಿನಲ್ಲಿ ಧಗೆ ಉಪಚುನಾವಣಾ ಕಾವಿನ ಜೊತೆ ಭರ್ತಿ ಪೈಪೋಟಿ ನಡೆಸಿದೆ. ಸೋಮವಾರ 37 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದರೆ, ಮತದಾನದ ಮುನ್ನಾದಿನವಾದ ಏಪ್ರಿಲ್ 8ರಂದು 39 ಡಿಗ್ರಿ ತಲುಪಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ.
ಇಂಥ ಧಗೆಯಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಬಿಳಿ ಖಾದಿ ಧರಿಸಿಕೊಂಡು ಬೆವರಿಳಿಸಿಕೊಳ್ಳುತ್ತ ಪ್ರಚಾರ ನಡೆಸುತ್ತಿದ್ದಾರೆ. ದಿನದ ಕೊನೆಗೆ ಹೋಟೆಲಿನ ಎಸಿ ರೂಮಿನಲ್ಲಿ ಬೆವರು ತುಂಬಿದ ಬಟ್ಟೆಯನ್ನು ಬಿಚ್ಚಾಕಿ ದಣಿವಾರಿಸಿಕೊಳ್ಳುತ್ತಾರೆ. [ಬಿಎಸ್ ವೈ ಕೇಸ್ ಬಲಗೊಳಿಸಲು ಸಿಎಂ ಸರ್ಕಸ್ : ಸುರೇಶ್ ವ್ಯಂಗ್ಯ]
ಆದರೆ, ಇವರೊಬ್ಬರಿದ್ದಾರೆ ನೋಡಿ ಸುರೇಶ್ ಕುಮಾರ್. ಸರಳತೆಯ ಸಾಕಾರಮೂರ್ತಿಯಂತಿರುವ ಸುರೇಶ್ ಅವರು ಇಡೀ ದಿನ ಮನೆಮನೆ ಕದ ತಟ್ಟಿ ವಿ ಶ್ರೀನಿವಾಸ್ ಪ್ರಸಾದ್ ಅವರಿಗೆ 'ಮತ'ದ ಪ್ರಸಾದ ನೀಡಿ ಎಂದು ಕೇಳಿಕೊಳ್ಳುತ್ತ, ದಿನದ ಕೊನೆಯಲ್ಲಿ ದಣಿವಾರಿಸಿಕೊಳ್ಳುತ್ತಿರುವುದು ಪಂಚತಾರಾ ಹೋಟೆಲಿನಲ್ಲಿ ಅಲ್ಲ, ದನದ ಕೊಟ್ಟಿಗೆಯಲ್ಲಿ! [ಸ್ಟೀಲ್ ಬ್ರಿಡ್ಜ್ ಸಭೆಯಲ್ಲಿ ನಡೆದಿದ್ದೇನು?ಓವರ್ ಟು ಸುರೇಶ್ ಕುಮಾರ್]
ಇದು ನಿಜಸ್ಯನಿಜ. ರೋಮ್ ನಲ್ಲಿದ್ದಾಗ ರೋಮನ್ ನಂತೆ ಇರು ಎಂಬುದು ಜನಜನಿತ ಮಾತು. ಹಾಗೆಯೆ ಹಳ್ಳಿಯಲ್ಲಿದ್ದಾಗ ಹಳ್ಳಿಯವರಂತೆ ಇರು ಎಂಬುದು ಸುರೇಶ್ ಅವರು ಅಕ್ಷರಶಃ ಪಾಲಿಸುತ್ತಿದ್ದಾರೆ. ಇದನ್ನು ಬೇಕಾದರೆ ಸುರೇಶ್ ಅವರಲ್ಲಿನ ಸರಳತೆ ಅನ್ನಬಹುದು, ತಂತ್ರಗಾರಿಕೆ ಅನ್ನಬಹುದು ಅಥವಾ ಗಿಮಿಕ್ ಅಂತ ಕೂಡ ಅನ್ನಬಹುದು. [ಬಡ ವಿದ್ಯಾರ್ಥಿಯ ಓದಿಗೆ ಸಹಾಯ ಹಸ್ತ ಚಾಚಿದ ಸುರೇಶ್ ಕುಮಾರ್]

ಕಪಿಲೇಶ್ ಎಂಬುವವರ ತೋಟದಲ್ಲಿ ರಾತ್ರಿವಾಸ್ತವ್ಯ
ಕಳೆದ ಐದು ದಿನಗಳಿಂದ ನಂಜನಗೂಡಿನಲ್ಲಿ ಪ್ರಚಾರದಲ್ಲಿ ತೊಡಗಿರುವ ಅವರು, ಕಪಿಲೇಶ್ ಎಂಬುವವರ ತೋಟದಲ್ಲಿ ರಾತ್ರಿವಾಸ್ತವ್ಯ ಹೂಡಿದ್ದಾರೆ. ಈ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಅವರೇ ಹಂಚಿಕೊಂಡಿದ್ದರು. ಇದು ಮೆಚ್ಚುಗೆಗೂ ಪಾತ್ರವಾಗಿತ್ತು. ನಾನೇನೋ ದೊಡ್ಡದು ಸಾಧಿಸಿದ್ದೇನೆ ಎಂದು ತಿಳಿಯಬೇಡಿ ಎಂದು ಅವರೇ ವಿನಮ್ರವಾಗಿ ಕೇಳಿಕೊಂಡಿದ್ದಾರೆ ಕೂಡ.[ಸ್ಟೀಲ್ ಫ್ಲೈ ಓವರ್ ಸಭೆ, ಸರ್ಕಾರದಿಂದ ಡ್ರಾಮಾ : ಸುರೇಶ್ ಕುಮಾರ್]

ಗಿಮಿಕ್ ಮಾಡುತ್ತಿದ್ದೇನೆಂದು ದಯವಿಟ್ಟು ಭಾವಿಸಬೇಡಿ
ನಾನು ಏನೋ ದೊಡ್ಡದ್ದನ್ನು ಮಾಡುತ್ತಿದ್ದೇನೆಂದು ದಯವಿಟ್ಟು ಯಾರೂ ಭಾವಿಸಬೇಡಿ. ಅದೇ ರೀತಿ ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡಿರುವವರನ್ನು ಹೀಗೆಳಿದಿದ್ದೇನೆಂದು ಯಾರೂ ತಿಳಿಯಬೇಡಿ. ಇದು ನನ್ನ 'ಸರಳತೆ' ಎಂದು ಭಾವಿಸದೆ, ನಾನೇ ಆರಿಸಿಕೊಂಡ ಸಹಜವಾದ ಸುಂದರ ಪರಿಸರದಲ್ಲಿನ ವಾಸ್ತವ್ಯ ಎಂದು ತಿಳಿಯಬೇಕೆಂದು ಮತ್ತೊಮ್ಮೆ ಕೋರುತ್ತೇನೆ.[ನಂಜನಗೂಡು ಉಪಚುನಾವಣೆ ಪ್ರಚಾರಕ್ಕೆ ಬಿಜೆಪಿ ಹಿಂದಿ ಬಳಕೆಗೆ ಆಕ್ರೋಶ]

ಇಂಥ ಧೈರ್ಯ ಮಾಡಿದ್ದಕ್ಕೆ ಅವರನ್ನು ಮೆಚ್ಚಲೇಬೇಕು
ಕಪಿಲೇಶ್ ಅವರ ಗದ್ದೆಯಲ್ಲಿರುವ ದೊಡ್ಡದಾದ ಕೊಟ್ಟಿಗೆಯಲ್ಲಿ ದೊಡ್ಡದಾದ ಹಾಸಿಗೆಯನ್ನು ಹಾಸಿಕೊಂಡು, ವೃತ್ತಪತ್ರಿಕೆಗಳನ್ನು ಓದಿಕೊಂಡು, ಹಳ್ಳಿಗರೊಂದಿಗೆ ಪಟ್ಟಾಂಗ ಹೊಡೆದುಕೊಂಡು, ಕೊಟ್ಟಿಯ ವಾಸನೆಯನ್ನು ಅಘ್ರಾಣಿಸುತ್ತ, ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತ ಸುರೇಶ್ ಕುಮಾರ್ ಅವರು ರಾತ್ರಿಗಳನ್ನು ಕಳೆದಿದ್ದಾರೆ. ಇಂಥ ಧೈರ್ಯ ಮಾಡಿದ್ದಕ್ಕೆ ಅವರನ್ನು ಮೆಚ್ಚಲೇಬೇಕು.[ಸಿದ್ದರಾಮಯ್ಯ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ: ಕೃಷ್ಣ ಟೀಕೆ]

ಸುರೇಶ್ ಅವರ ಸಾಹಸ ಇದು ಮೊದಲೇನಲ್ಲ
ಇದೇನು ನನಗೆ ಹೊಸದಲ್ಲ, ಹಿಂದೆ 2013ರಲ್ಲಿ ತಿರುಪತಿಗೆ ಬೆಂಗಳೂರಿನಿಂದ ನಡೆದಾಗ, 2014ರಲ್ಲಿ ಧರ್ಮಸ್ಥಳಕ್ಕೆ ಬೆಂಗಳೂರಿನಿಂದ ನಡೆದಾಗ, 2015ರಲ್ಲಿ ಶಬರಿಮಲೆಗೆ ಬೆಂಗಳೂರಿಗೆ ನಡೆದಾಗ (ಹದಿನೈದು ದಿನ) ಇದೇ ರೀತಿ ಇಂಥದೇ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದೆ. ಸ್ಥಳ ಪರಿಸ್ಥಿತಿ ಯಾವುದೇ ಇರಲಿ ಹೊಂದಿಕೊಳ್ಳುವುದು ನಮ್ಮ ಧರ್ಮ ಎನ್ನುತ್ತಾರೆ ಸುರೇಶ್ ಅವರು.

ಏಪ್ರಿಲ್ 13ರಂದು ಅಭ್ಯರ್ಥಿಗಳ ಹಣೆಬರಹ ತಿಳಿಯಲಿದೆ
ಬೆಂಗಳೂರಿನ ರಾರಾಜಿನಗರ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಎಸ್ ಸುರೇಶ್ ಕುಮಾರ್ ಅವರು, ಕಾಂಗ್ರೆಸ್ಸಿನಿಂದ ಬಿಜೆಪಿ ಹಾರಿ ಉಪಚುನಾವಣೆಗೆ ಕಾರಣಕರ್ತರಾಗಿರುವ ವಿ ಶ್ರೀನಿವಾಸ ಪ್ರಸಾದ್ ಅವರ ಪರವಾಗಿ ಮತಬೇಟೆಗಿಳಿದಿದ್ದಾರೆ. ಮತದಾರರನ್ನು ಸ್ವತಃ ಭೇಟಿ ಮಾಡುತ್ತಿರುವ ಅವರು, ಬಿಜೆಪಿ ಗೆದ್ದೇ ಗೆಲ್ಲುತ್ತದೆಂಬ ವಿಶ್ವಾಸದಲ್ಲಿದ್ದಾರೆ. ಫಲಿತಾಂಶ ಏನು ಬರಲಿದೆ ಎಂಬುದು ಏಪ್ರಿಲ್ 13ರಂದು ತಿಳಿದುಬರಲಿದೆ.












Click it and Unblock the Notifications