Breaking; ಕರ್ನಾಟಕದಲ್ಲಿ 3ನೇ ಓಮಿಕ್ರಾನ್ ಪ್ರಕರಣ ಪತ್ತೆ
ಬೆಂಗಳೂರು, ಡಿಸೆಂಬರ್ 12; ಕರ್ನಾಟಕದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್‌ನ 3ನೇ ಪ್ರಕರಣ ದಾಖಲಾಗಿದೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಮರಳಿದ್ದ 34 ವರ್ಷದ ಪುರುಷನಿಗೆ ಓಮಿಕ್ರಾನ್ ಸೋಂಕು ತಗುಲಿದೆ. ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಶನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಭಾರತದಲ್ಲಿ ಒಟ್ಟು 35 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ.
Third case of #Omicron has been detected in Karnataka. A 34-year-old male returning from South Africa has tested positive. He is isolated and being treated in a govt hospital. 5 primary and 15 secondary contacts have been traced and samples sent for testing. @BSBommai #COVID19
— Dr Sudhakar K (@mla_sudhakar) December 12, 2021
ಸೋಂಕು ಪತ್ತೆಯಾದ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 5, ದ್ವಿತೀಯ ಹಂತದ ಸಂಪರ್ಕದಲ್ಲಿದ್ದ 15 ಜನರನ್ನು ಪತ್ತೆ ಹಚ್ಚಲಾಗಿದೆ. ಅವರ ಸ್ವ್ಯಾಬ್‌ಗಳನ್ನು ಸಂಗ್ರಹ ಮಾಡಿ, ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಡಿಸೆಂಬರ್ 2ರಂದು ಬೆಂಗಳೂರಿನಲ್ಲಿ 2 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದವು. ದೇಶದಲ್ಲಿಯೇ ಮೊದಲ ಓಮಿಕ್ರಾನ್ ಪ್ರಕರಣ ದಾಖಲಾಗಿದ್ದು, ಕರ್ನಾಟಕದಲ್ಲಿ. ಈಗ ರಾಜ್ಯದಲ್ಲಿ 3ನೇ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ.
ಬೆಂಗಳೂರು ಮೂಲದ 34 ವರ್ಷದ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ ಡಿಸೆಂಬರ್ 1ರಂದು ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಏರ್‌ಪೋರ್ಟ್‌ನಲ್ಲಿ ಕೋವಿಡ್ ಪರೀಕ್ಷೆ ಮಾಡಿದಾಗ ವರದಿ ನೆಗೆಟಿವ್ ಬಂದಿತ್ತು.
ಬಳಿಕ ಬಿಬಿಎಂಪಿ ಸೂಚನೆಯಂತೆ ವ್ಯಕ್ತಿ ಹೋಮ್ ಐಸೋಲೇಷನ್‌ನಲ್ಲಿದ್ದರು. ಡಿಸೆಂಬರ್ 2ರಂದು ಓಮಿಕ್ರಾನ್ ಲಕ್ಷಣಗಳು ಕಾಣಿಸಿದವು. ಡಿಸೆಂಬರ್ 2ರಂದು ಮತ್ತೆ ಕೋವಿಡ್ ಪರೀಕ್ಷೆ ಮಾಡಿದಾಗ ವರದಿ ಪಾಸಿಟಿವ್ ಬಂದಿತ್ತು. ತಕ್ಷಣ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್‌ನಲ್ಲಿ ಇರಲು ವ್ಯವಸ್ಥೆ ಮಾಡಲಾಯಿತು.
ಡಿಸೆಂಬರ್ 3ರಂದು ಸ್ವ್ಯಾಬ್ ಸಂಗ್ರಹ ಮಾಡಿ ಜಿನೋಮಿಕ್ ಸಿಕ್ವೆನ್ಸಿಂಗ್‌ಗೆ ಕಳುಹಿಸಲಾಯಿತು. ಭಾನುವಾರ ವರದಿ ಬಂದಿದ್ದು, ಓಮಿಕ್ರಾನ್ ಖಚಿತವಾಗಿದೆ. ಭಾರತದಲ್ಲಿ ಇಂದು ಆಂಧ್ರ ಪ್ರದೇಶ, ಪಂಜಾಬ್, ಕರ್ನಾಟಕ ಸೇರಿ ಒಟ್ಟು 3 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ಇದುವರೆಗೂ ಮಹಾರಾಷ್ಟ್ರದಲ್ಲಿ 17, ರಾಜಸ್ಥಾನ 9, ಗುಜರಾತ್ 3, ದೆಹಲಿ 2, ಚಂಢೀಗಡ್ 1 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ಭಾರತ ಸರ್ಕಾರ 2022 ಜನವರಿ 31ರ ತನಕ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿದೆ.












Click it and Unblock the Notifications