ಪತ್ರಕರ್ತ ಶಂಕರ್ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣ
ಬೆಂಗಳೂರು ಸೆ. 30: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. 9 ತಿಂಗಳ ಮಗುವಿನ ಹತ್ಯೆ ಸಂಬಂಧ ತಾಯಿ ಸಿಂಧೂರಾಣಿ ವಿರುದ್ಧ ಬ್ಯಾಡರಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಇನ್ನು ನಾಲ್ವರ ಆತ್ಮಹತ್ಯೆಗೆ ಪ್ರಚೋದನೆ ಸಂಬಂಧ ಪತ್ರಕರ್ತ ಅಲ್ಲೆಗೆರೆ ಶಂಕರ್ ವಿರುದ್ಧ ಎಫ್ಐಆರ್ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಮೊರೆ ಹೋಗಿದ್ದಾರೆ.
ಪತ್ರಕರ್ತ ಅಲ್ಲೆಗೆರೆ ಶಂಕರ್ ಅವರ ಪತ್ನಿ, ಪುತ್ರ ಮಧುಸಾಗರ್ ಸೇರಿದಂತೆ ನಾಲ್ವರು ಒಂದೇ ದಿನ ಅಂಧ್ರಹಳ್ಳಿ ತಿಗಳರ ಪಾಳ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಶಂಕರ್ ಪುತ್ರಿ ಸಿಂಧೂರಾಣಿಯ ಒಂಭತ್ತು ತಿಂಗಳ ಮಗುವನ್ನು ಕುತ್ತಿಗೆ ಬಿಗಿದು ಸಾಯಿಸಿದ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಪೊಲೀಸರು ಇದೀಗ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೃತರ ಡೆತ್ ನೋಟ್ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
9 ತಿಂಗಳ ಮಗು ಸಾವಿನ ಸಂಬಂಧ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. 9 ತಿಂಗಳ ಮಗುವಿನ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವ ಸಂಗತಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬೆಳಕಿಗೆ ಬಂದಿತ್ತು. ವರದಿ ಹಿನ್ನೆಲೆಯಲ್ಲಿ ಮಗುವಿನ ತಾಯಿ ಸಿಂಧೂರಾಣಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮಗುವನ್ನು ಸಾಯಿಸುವ ವೇಳೆ ಸುಮ್ಮನಿದ್ದ ಸಹೋದರ, ತಾಯಿ ವಿರುದ್ಧವೂ ಕೇಸು ದಾಖಲಾಗುತ್ತದೆಯೇ ಎಂಬುದು ತನಿಖೆಯ ಬಳಿಕ ಗೊತ್ತಾಗಲಿದೆ.

ಮಗುವನ್ನು ಕೊಲೆ ಮಾಡಿ, ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಮೇಲೆ ಕೊಲೆ ಪ್ರಕರಣ ದಾಖಲಿಸಿ ಏನು ಪ್ರಯೋಜನ ಎಂಬ ಪ್ರಶ್ನೆ ಏಳುವುದು ಸಾಮಾನ್ಯ. ಆದರೆ, ಮಗುವನ್ನು ಕೊಲೆ ಮಾಡಿರುವ ಸಂಬಂಧ ಪೊಲೀಸರು ತನಿಖೆ ನಡೆಸಲೇಬೇಕು. ಕೊಲೆ ಮಾಡಿದ ಮಗುವಿನ ತಾಯಿಯ ವಿರುದ್ಧ ಅಬೆಟ್ಮೆಂಟ್ ದೋಷಾರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸುತ್ತಾರೆ. ಪೊಲೀಸರು ಸಲ್ಲಿಸುವ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ. ಆದರೆ, ಶಿಕ್ಷೆ ಪ್ರಕಟಿಸಿದರು ಅದನ್ನು ಅನುಭವಿಸಲು ಆರೋಪಿತ ವ್ಯಕ್ತಿ ಇರುವುದಿಲ್ಲ. ಹೀಗಾಗಿ ಕೇಸನ್ನು ನ್ಯಾಯಾಲಯ ರದ್ದು ಮಾಡಬಹುದು. ಮಗುವನ್ನು ಸಾಯಿಸಿದ ತಾಯಿ ಮೇಲೆ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಲೇಬೇಕು. ಇದನ್ನೇ ಕಾನೂನು ಪರಿಭಾಷೆಯಲ್ಲಿ ಅಬೆಟ್ಮೆಂಟ್ ದೋಷಾರೋಪಪಟ್ಟಿ ಎಂದು ಹೇಳಲಾಗುತ್ತದೆ.
ಶಂಕರ್ ಮೇಲೆ ಎಫ್ಐಆರ್: ಇನ್ನು ಪತ್ರಕರ್ತ ಶಂಕರ್ ಮೇಲೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲು ಚಿಂತನೆ ನಡೆಸಿದ್ದಾರೆ. ಪತ್ರಕರ್ತ ಶಂಕರ್ ಅವರಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರ ಪುತ್ರ ಮಧು ಸಾಗರ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದ. ಅಲ್ಲದೇ ಶಂಕರ್ ಅಕ್ರಮ ಸಂಬಂಧ ವಿಚಾರವಾಗಿ ಡೈರಿಯಲ್ಲಿ ಉಲ್ಲೇಖಿಸಿದ್ದ ಮಧು ಸಾಗರ್ ಇದಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ಸಹ ಲ್ಯಾಪ್‌ಟಾಪ್ ನಲ್ಲಿ ಸಂಗ್ರಹಿಸಿಟ್ಟಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಬೆಳವಣಿಗೆ ನಡುವೆ ಪತ್ರಕರ್ತ ಶಂಕರ್ ಅವರ ಮೊಬೈಲ್, ಲ್ಯಾಪ್‌ಟಾಪ್, ಮೃತ ಸಿಂಧೂರಾಣಿಯ ಪತಿ ಮತ್ತಿತರರ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೀಗ ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು, ಶಂಕರ್ ಮೇಲಿನ ಅರೋಪ, ಸಿಕ್ಕಿರುವ ಸಾಕ್ಷಾಧಾರಗಳ ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಎಫ್ಐಆರ್ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಮೊರೆ ಹೋಗಿದ್ದಾರೆ.

ಇಡೀ ಕುಟುಂಬದ್ದು ಕೆಟ್ಟ ತೀರ್ಮಾನ:
ಶಂಕರ್ ಐಶರಾಮಿ ಮನೆ ನಿರ್ಮಿಸಿಕೊಟ್ಟಿದ್ದ. ಬೇಕಾದಷ್ಟು ಆಸ್ತಿ ಸಂಪಾದನೆ ಮಾಡಿದ್ದ. ತನ್ನ ಮಗನಿಗಾಗಿ ಬಾರ್ ತೆರೆಯಲು ಮುಂದಾಗಿದ್ದ. ಮನೆಯಲ್ಲಿ ನೆಮ್ಮದಿ ಇರಲಿಲ್ಲ. ಕುಟುಂಬದಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು. ಎಲ್ಲವನ್ನು ಸರಿಪಡಿಸಿಕೊಂಡು ನೆಮ್ಮದಿ ಜೀವನ ಮಾಡುವ ಅವಕಾಶ ಇತ್ತು. ಬಹುದೊಡ್ಡ ಕೆಟ್ಟ ತೀರ್ಮಾನ ತೆಗೆದುಕೊಂಡು ಇಡೀ ಕುಟುಂಬವೇ ದುರಂತ ಅಂತ್ಯ ಕಂಡಿದೆ. ಯಾರೂ ಈ ರೀತಿಯ ತೀರ್ಮಾನ ತೆಗೆದುಕೊಳ್ಳಬಾರದು. ಏನೇ ಸಮಸ್ಯೆಗಳ ಇದ್ದರು ಬಗೆ ಹರಿಸಿಕೊಳ್ಳಬೇಕಿತ್ತು ಎನ್ನುತ್ತಾರೆ ಶಂಕರ್ ಕುಟುಂಬವನ್ನು ಸಮೀಪದಿಂದ ಬಲ್ಲ ವ್ಯಕ್ತಿ.












Click it and Unblock the Notifications