Namma Metro Blue Line: ಇತರ ಮಾರ್ಗಕ್ಕಿಂತಲೂ 'ನೀಲಿ' ಮಾರ್ಗದಲ್ಲಿ ವೇಗವಾಗಿ ಓಡಲಿವೆ ಮೆಟ್ರೋ, ಅಪ್ಡೇಟ್
ಬೆಂಗಳೂರು, ಏಪ್ರಿಲ್ 23: ಎರಡು ಹಂತಗಳಲ್ಲಿ ಭರದಿಂದ ಸಾಗುತ್ತಿರುವ ಬೆಂಗಳೂರು 'ನಮ್ಮ ಮೆಟ್ರೋ' ನೀಲಿ ರೈಲು ಮಾರ್ಗವು ಅತ್ಯಧಿಕ ವೇಗ ರೈಲು ಸಂಚಾರಕ್ಕೆ ಸಾಕ್ಷಿಯಾಗಲಿದೆ. 2026ರಲ್ಲಿ ಈ ಮಾರ್ಗದಲ್ಲಿ ಇತರ ಮಾರ್ಗಗಳ ರೈಲಿಗಿಂತ ಹೆಚ್ಚಿನ ವೇಗದಲ್ಲಿ ರೈಲು ಪ್ರಯಾಣಿಸಲಿವೆ.
ಮೂಲಗಳ ಪ್ರಕಾರ, ಬೆಂಗಳೂರು ನಗರದಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ನೀಲಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗವು ಪೂರ್ಣಗೊಂಡ ನಂತರ ಇತರ ಮೆಟ್ರೊ ಮಾರ್ಗಗಳಲ್ಲಿ ಓಡಾಡುವ ರೈಲುಗಳ ವೇಗ ಪ್ರತಿ ಗಂಟೆಗೆ 34 ಕಿಮೀ ಗಿಂತಲೂ ಹೆಚ್ಚು ವೇಗದಲ್ಲಿ ರೈಲು ಓಡಲಿವೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

ನೀಲಿ ಮಾರ್ಗದಲ್ಲಿ ರೈಲಿನ ವೇಗ ಎಷ್ಟು?
2026ರಲ್ಲಿ ಆರಂಭವಾಗುವ ನೀಲಿ ಮಾರ್ಗದಲ್ಲಿ ಸರಾಸರಿ ಮೆಟ್ರೋ ರೈಲಿನ ಗರಿಷ್ಠ ವೇಗ ಗಂಟೆಗೆ 50 ಕಿಲೋ ಮೀಟರ್ ಇರಲಿದೆ. ಇದರಿಂದ ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರಿಗೆ ಸಮಯದ ಉಳಿತಾಯವಾಗಲಿದೆ.
ನಗರದ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆಆರ್ ಪುರಂ ಮಾರ್ಗವಾಗಿ ಬೆಂಗಳೂರು ವಿಮಾನ ನಿಲ್ದಾಣವರೆಗೆ 58 ಕಿಲೋ ಮೀಟರ್ ದೂರದ ನೀಲಿ ಮಾರ್ಗ ಇದಾಗಿದೆ. ಇದನ್ನು ಎರಡು ಹಂತಗಳಲ್ಲಿ ವಿಭಾಗಿ ಕಾಮಗಾರಿ ನಡೆಸಲಾಗುತ್ತಿದೆ. ಒಟ್ಟು 22ಮಟ್ರೋ ನಿಲ್ದಾಣಗಳು ಬರಲಿವೆ. ಪಿಲ್ಲರ್, ಸ್ಕೈಡೆಕ್ ನಿರ್ಮಾಣ ಕೆಲಸ ಅಂತಿಮ ಹಂತದಲ್ಲಿವೆ.

ಸಂಚಾರ ದಟ್ಟಣೆ ಇಳಿಕೆ
ಈ ನೀಲಿ ಮಾರ್ಗವು ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಹಳದಿ ಮಾರ್ಗ ಮತ್ತು ನಾಗವಾರದಲ್ಲಿ ಗುಲಾಬಿ ಮಾರ್ಗವನ್ನು ಇದು ಸಂಧಿಸುತ್ತದೆ. ಭರದಿಂದ ಸಾಗಿರುವ ಈ ಮಾರ್ಗದಲ್ಲಿ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರಿಂಗ್ ರಸ್ತೆ, ಹೆಬ್ಬಾಳ ಜಂಕ್ಷನ್ ಸೇರಿದಂತೆ ವಿವಿಧೆಡೆ ಉಂಟಾಗುವ ಸಂಚಾರ ದಟ್ಟಣೆ ಕಡಿಮೆ ಆಗಲಿದೆ.
ಸಿಲ್ಕ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್ ಪುರಂ ವರೆಗೆ ಮೊದಲ ಹಂತದ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ 2021ರಲ್ಲಿ ಆರಂಭಗೊಂಡಿತ್ತು. ನಂತರ ಕೆ.ಆರ್ ಪುರಂ ನಿಂದ ಕೆಂಪೇಗೌಡ ವಿಮಾನ ನಿಲ್ದಾಣ (KIA) ವರೆಗೆ ಎರಡನೇ ಹಂತದಲ್ಲಿ 2022ರಲ್ಲಿ ಆರಂಭವಾಗಿದೆ. ಇತರ ಮಾರ್ಗಗಗಳಿಗಿಂತಲೂ ಇಲ್ಲಿ ವೇಗವಾಗಿ ಕೆಲಸ ನಡೆಯುತ್ತಿದೆ ಎನ್ನಲಾಗಿದೆ.
ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ
ಮುಂದಿನ ಒಂದೆರಡು ತಿಂಗಳಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಳದಿ ಮಾರ್ಗವನ್ನು (Metro Yellow Line) ಉದ್ಘಾಟಿಸಲು ಸಜ್ಜಾಗಿದೆ. ಈಗಾಗಲೇ ಚೀನಾದಿಂದ ಬಂದ ರೈಲುಗಳ ಪರೀಕ್ಷಾರ್ಥ ಸಂಚಾರ ನಡೆದಿದೆ. ಕೆಲವು ಪರೀಕ್ಷೆಗಳು, ಸಿಗ್ನಲ್ ಪರಿಶೀಲನೆ ಜೊತೆಗೆ ಅನುಮತಿ ಪಡೆದ ನಂತರ ಜುಲೈ ನಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗುವ ನಿರೀಕ್ಷೆಗಳು ಇವೆ.












Click it and Unblock the Notifications