Greater Bangaluru Election: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆಗೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ
ಬೆಂಗಳೂರು, ಸೆಪ್ಟೆಂಬರ್ 03: ಬೆಂಗಳೂರಿನಲ್ಲಿ ನಾಗರಿಕ ಸ್ನೇಹಿ ಸೇವೆ, ಉತ್ತಮ ಆಡಳಿತ, ಪರಿಣಾಮಕಾರಿಯಾಗಿ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜಾರಿಗೆ ತಂದು ಐದು ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಅಲ್ಲದೇ ಗ್ರೇಟರ್ ಬೆಂಗಳೂರು ಚುನಾವಣೆ ಕುರಿತು ಬಿಗ್ ಅಪ್‌ಡೇಟ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾವು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ನಮಗೆ ಕಾಲಮಿತಿ ಇದೆ. ನ್ಯಾಯಾಲಯ ಕೂಡ ಅದನ್ನು ಒಪ್ಪಿದೆ. 1-11-2025 ವಾರ್ಡ್ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. 30-11-2025ರಂದು ವಾರ್ಡ್ ಗಳ ಮೀಸಲಾತಿ ಅಧಿಸೂಚನೆ ಹೊರಡಿಸಲಾಗುವುದು. ಇದಾದ ಬಳಿಕ ಚುನಾವಣೆ ನಡೆಸಲಿದೆ. ಅವರು ಒಂದು ವಾರ, ಹದಿನೈದು ದಿನಗಳಲ್ಲಿ ಮಾಡಬಹುದು ಎಂದು ತಿಳಿಸಿದ್ದಾರೆ.

ಈಗಾಗಲೇ ಚುನಾವಣೆ ನಡೆಸಲು ಪೂರ್ವಸಿದ್ಧತೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಅವರೂ ಕೂಡ ಅತಿ ಶೀಘ್ರದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಲಿದ್ದಾರೆ. ಸ್ವಾಯತ್ತ ಸಂಸ್ಥೆಯಾಗಿ ಚುನಾವಣಾ ಆಯೋಗ ಚುನಾವಣೆ ಮಾಡಲಿದೆ ಎಂದು ತಿಳಿಸಿದರು. ಪಾಲಿಕೆಗಳ ಮೇಲೆ ಜಿಬಿಎ ಇರುವುದರಿಂದ 74ನೇ ತಿದ್ದುಪಡಿಗೆ ತೊಂದರೆಯಾಗುವುದಿಲ್ಲವೇ, ನಾಳೆ ಯಾರೂ ನ್ಯಾಯಾಲಯದ ಮೊರೆ ಹೋಗುವುದಿಲ್ಲವೇ ಎಂದು ಕೇಳಿದಾಗ, "ಎಲ್ಲಾ ನ್ಯಾಯಾಲಯಗಳಲ್ಲಿ ಅರ್ಜಿ ಹಾಕಿ, ಅವೆಲ್ಲವೂ ತಿರಸ್ಕಾರವಾಗಿವೆ. ಸುಪ್ರೀಂ ಕೋರ್ಟ್ ನಮ್ಮ ಅಫಿಡವಿಟ್ ಒಪ್ಪಿದೆ. ವಾರ್ಡ್ ಪುನರ್ ವಿಂಗಡಣೆ ಬಳಿಕ ಬನ್ನಿ ಎಂದು ನವೆಂಬರ್ 3ರಂದು ವಿಚಾರಣೆಗೆ ಬರುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ ಎಂದು ತಿಳಿಸಿದರು.
ಈಗ ಜಾರಿಗೆ ಬಂದಿರುವ ಪಾಲಿಕೆಗಳ ಪೈಕಿ ಬೆಂಗಳೂರು ಪೂರ್ವ ಆರ್ಥಿಕವಾಗಿ ಬಲಿಷ್ಟವಾಗಿದ್ದು, ಪೂರ್ವ ಪಾಲಿಕೆ ಆರ್ಥಿಕವಾಗಿ ದುರ್ಬಲವಾಗಿದೆ. ಇದನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ಅಲ್ಲಿನ ಆದಾಯವನ್ನು ಇಲ್ಲಿಗೆ ತರಲು ಸಾಧ್ಯವಿಲ್ಲ. ಪೂರ್ವ ಪಾಲಿಕೆ ಆದಾಯ ಪೂರ್ವ ಪಾಲಿಕೆಗೆ ಸೀಮಿತವಾಗಲಿದೆ, ಪಶ್ಚಿಮ ಪಾಲಿಕೆ ಆದಾಯ ಕಡಿಮೆ ಇದ್ದಾಗ ಸರ್ಕಾರ ಅವರಿಗೆ ನೆರವು ನೀಡಬೇಕು. ನಾವು ಪೂರ್ವದ ಹಣವನ್ನು ಪಶ್ಚಿಮದ ಪಾಲಿಕೆಗೆ ನೀಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾಗಿರಲಿದೆ ಎಂದು ಹೇಳಿದರು.
ಜಿಬಿಎ ಆದ್ಯತೆ ಆಡಳಿತಾತ್ಮಕವಾಗಿ ಹಳಿಗೆ ತರುವುದೋ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದೇ ಅಥವಾ ಪ್ರದೇಶಗಳ ವಿಸ್ತರಣೆಯೋ ಎಂಬ ಪ್ರಶ್ನೆಗೆ ಉತ್ತರಿಸಿ, ಉತ್ತಮ ಆಡಳಿತ, ಸೇವೆ ನೀಡಬೇಕು, ಸಂವಿಧಾನ ರಕ್ಷಣೆ ನೀಡಬೇಕು. ಈ ಹಿಂದೆ ನಗರದ ಸಣ್ಣಪುಟ್ಟ ವಿಚಾರಕ್ಕೂ ಬೆಂಗಳೂರು ಆಯುಕ್ತರಿಗೆ ಕರೆ ಮಾಡಬೇಕಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಜಿಬಿಎ ಅಧಿಕಾರಿಗಳು ನಗರದ ದೊಡ್ಡ ಯೋಜನೆಗಳ ಜವಾಬ್ದಾರಿ ಮಾತ್ರ ನಿಭಾಯಿಸುತ್ತಾರೆ. ಟನಲ್ ರಸ್ತೆ ಸೇರಿದಂತೆ ಬೇರೆ ಬೇರೆ ಪಾಲಿಕೆಗಳ ಮೂಲಕ ಹಾದುಹೋಗುವ ದೊಡ್ಡ ದೊಡ್ಡ ಯೋಜನೆ ನೋಡಿಕೊಳ್ಳುತ್ತಾರೆ. ಉಳಿದಂತೆ ಇತರೆ ವಿಚಾರಗಳಿಗೆ ಆಯಾ ಪಾಲಿಕೆಗೆ ನಿಯೋಜನೆಯಾಗಿರುವ ಆಯುಕ್ತರು ಹೊಣೆಗಾರಿಕೆ ಹೊಂದಿರುತ್ತಾರೆ.
ಅಧಿಕಾರವನ್ನು ವಿಕೇಂದ್ರೀಕರಣ ಮಾಡಲಾಗಿದೆ. ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಎಲ್ಲೆಲ್ಲಿ ಕಚೇರಿ ಇರಬೇಕು ಎಂದು ಸೂಚಿಸಿದ್ದೇವೆ. ವಲಯವಾರು ಕಚೇರಿಗಳಲ್ಲಿ ಈ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ. ನವೆಂಬರ್ 1ರಂದು ಹೊಸ ಕಚೇರಿ ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ. ಇದಕ್ಕಾಗಿ ಜಾಗ ಗುರುತಿಸಲಾಗಿದೆ. ಈ ಐದೂ ಪಾಲಿಕೆ ಕಚೇರಿಗಳು ಒಂದೇ ರೀತಿ ನಿರ್ಮಾಣವಾಗಬೇಕು. ಇದಕ್ಕಾಗಿ ಅತ್ಯುತ್ತಮ ವಾಸ್ತುಶಿಲ್ಪವನ್ನ ಸಿದ್ಧತೆ ಮಾಡಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಬಹುದು. ಅತ್ಯುತ್ತಮ ವಿನ್ಯಾಸಕ್ಕೆ 5 ಲಕ್ಷ ಬಹುಮಾನ ನೀಡಲು ಸೂಚಿಸಿದ್ದೇನೆ. ಇನ್ನು ಜಿಬಿಎ ಲೋಗೋಗಳಿಗೂ ಸಲಹೆ ನೀಡಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.












Click it and Unblock the Notifications