ಡಿನೋಟಿಫಿಕೇಷನ್: ಆಗಸ್ಟ್ 27ಕ್ಕೆ ಎಚ್ಡಿಕೆ ಭವಿಷ್ಯ ನಿರ್ಧಾರ
ಬೆಂಗಳೂರು, ಜು.27: ದಶಕ ಕಳೆದರೂ, ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದರೂ ಹಳೆಯ ಡಿನೋಟಿಫಿಕೇಶನ್ ಪ್ರಕರಣ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಬೆನ್ನು ಬಿಡುತ್ತಿಲ್ಲ. ಕಾರಣ ಇಷ್ಟೆ, 2007ರಲ್ಲಿ ಬೆಂಗಳೂರಿನ ಥಣಿಸಂದ್ರದಲ್ಲಿ 3.8 ಎಕರೆ ಭೂಮಿಯನ್ನು ಡಿನೊಟಿಫೈ ಮಾಡಿದ ಪ್ರಕರಣದ ಆದೇಶ ಆಗಸ್ಟ್ 27ಕ್ಕೆ ಹೊರಬೀಳಲಿದೆ.
ಈ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಕುಮಾರಸ್ವಾಮಿ ಜತೆಗೆ ಮಾಜಿ ಸಚಿವ ಸಿ. ಚೆನ್ನಿಗಪ್ಪ, ಭೂ ಮಾಲೀಕರಾದ ಎ.ವಿ. ರವಿಪ್ರಕಾಶ್ ಹಾಗೂ ಎ.ವಿ. ಶ್ರೀರಾಮ್ ವಿರುದ್ಧ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಲೋಕಾಯುಕ್ತ ಪೊಲೀಸರು ಆಧಾರರಹಿತವಾಗಿ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಕುಮಾರಸ್ವಾಮಿ ಮತ್ತು ಇತರ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದಾರೆ.

ಆರೋಪಗಳು ಇರುವ ಕಾರಣದಿಂದಲೇ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಲಾಗಿದೆ. ವಿಚಾರಣೆ ನಡೆಸುವಂತೆ ಸರ್ಕಾರಿ ಅಭಿಯೋಜಕರು ಕೋರಿದ್ದಾರೆ. ವಾದ-ಪ್ರತಿವಾದ ಆಲಿಸಿರುವ ವಿಶೇಷ ನ್ಯಾಯಾಲಯವಿಚಾರಣೆ ಪೂರ್ಣಗೊಳಿಸಿದೆ.
ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಉತ್ತರ ತಾಲೂಕು ಥಣಿಸಂದ್ರ ಗ್ರಾಮದ ಸರ್ವೆ ನಂ.87/4ಬಿ ನಲ್ಲಿರುವ 3 ಎಕರೆ 8 ಗುಂಟೆ ಜಮೀನನ್ನು 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಿ ಎಂ.ಎಸ್. ಮಹಾದೇವಸ್ವಾಮಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.











Click it and Unblock the Notifications