ಡಿ. ಜೆ. ಹಳ್ಳಿ ಪೊಲೀಸ್ ಠಾಣೆ ಉದ್ವಿಗ್ನ, ವಾಹನಗಳು ಜಖಂ
ಬೆಂಗಳೂರು, ಆಗಸ್ಟ್ 11 : ಬೆಂಗಳೂರಿನ ಡಿ. ಜೆ. ಹಳ್ಳಿ ಪೊಲೀಸ್ ಠಾಣೆಯ ಮುಂದೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಜನರು ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದಾರೆ.
ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ಕಲ್ಲು ತೂರಾಟ ನಡೆದಿತ್ತು. ಶಾಸಕರ ಮನೆಯ ಮುಂದಿದ್ದ ಜನರು ಠಾಣೆ ಎದುರು ಜಮಾಯಿಸಿದ್ದು, ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ನೂರಾರು ಜನರ ಠಾಣೆ ಮುಂದೆ ಜಮಾವಣೆಗೊಂಡಿದ್ದು ಕೈಯಲ್ಲಿ ಕೋಲು, ರಾಡ್ ಹಿಡಿದುಕೊಂಡಿದ್ದಾರೆ. ಠಾಣೆಯ ಮುಂದಿದ್ದ ಡಿಸಿಪಿ ಶರಣಪ್ಪ ಅವರ ಕಾರು, ಗಸ್ತುವಾಹನವನ್ನು ಜಖಂಗೊಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಒಂದು ಸಮುದಾಯದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಡಿ. ಜೆ. ಹಳ್ಳಿ ಪೊಲೀಸರು ಸ್ಥಳಕ್ಕೆ ಬಂದಿದ್ದರು.
ಉದ್ರಿಕ್ತ ಜನರು ಡಿ. ಜೆ. ಹಳ್ಳಿ ಪೊಲೀಸ್ ಠಾಣೆಯ ಮುಂದೆ ಬಂದು ಗಲಾಟೆ ಆರಂಭಿಸಿದರು. ಪೊಲೀಸ್ ವಾಹನಗಳನ್ನು ಜಖಂಗೊಳಿಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸ್ಥಳಕ್ಕೆ ಬಂದಿದ್ದಾರೆ. ಎಲ್ಲಾ ವಿಭಾಗದ ಡಿಸಿಪಿಗಳಿಗೆ ಸ್ಥಳಕ್ಕೆ ಬರುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications