ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 2.7 ಲಕ್ಷ ಸಾಲ ಪಡೆದ ಟೆಕ್ಕಿ: ನೆಟ್ಟಿಗರಿಂದ ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ
ಬೆಂಗಳೂರು, ಆಗಸ್ಟ್ 21: ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಉತ್ತಮ ನಾಗರಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬೆಂಗಳೂರಿನ ಜನರು ಆರೋಪಿಸಿದ್ದಾರೆ. ತಮ್ಮ ಮನವಿಗೆ ಸರ್ಕಾರ ನಿರಾಸಕ್ತಿ ತೋರಿಸುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ 'ನೋ ಡೆವಲಪ್ಮೆಂಟ್ ನೋಟ್ಯಾಕ್ಸ್' ಎಂಬ ಅಭಿಮಾನವನ್ನು ( ಆಸ್ತಿ ತೆರಿಗೆ ಪಾವತಿಯನ್ನು ಬಹಿಷ್ಕರಿಸುವ ಅಭಿಯಾನ ) 'ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು' ಭಾನುವಾರ ಆರಂಭಿಸಿದೆ.
ಕಳೆದ ವಾರ ಹಾಲನಾಯಕನಹಳ್ಳಿ, ಮುನೇಶ್ವರ ಲೇಔಟ್ ಮತ್ತು ಚೂಡಸಂದ್ರದಲ್ಲಿ 6 ಕಿ.ಮೀ ಉದ್ದದ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ಗ್ರೂಪ್ ಸದಸ್ಯರು ಸೇರಿ ಹಣ ನೀಡಿದ್ದಾರೆ.

ಗ್ರೂಪ್‌ನ ಸಂಸ್ಥಾಪಕ ಸದಸ್ಯ ಆರಿಫ್ ಮುದ್ಗಲ್ ಎಂಬ 32 ವರ್ಷದ ಟೆಕ್ಕಿ ಈ ಉದ್ದೇಶಕ್ಕಾಗಿ 2.7 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ.
ರಸ್ತೆ ಗುಂಡಿಗಳ ಕಾರಣ ಕೆಲವು ದಿನಗಳ ಹಿಂದೆ ಹೊಸಾ ರಸ್ತೆಯಲ್ಲಿ ಎರಡು ಅಪಘಾತಗಳಾಗಿರುವುದನ್ನು ಗಮನಿಸಿದ್ದೇನೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
'ನನ್ನ ಅಪಾರ್ಟ್‌ಮೆಂಟ್ ಬಳಿ ವಾಸಿಸುತ್ತಿರುವ ಮಹಿಳೆಯೊಬ್ಬರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಆಟೋ ಹೊಸಾ ರಸ್ತೆಯಲ್ಲಿನ ಗುಂಡಿಗೆ ಬಿದ್ದು ನಂತರ ಪಲ್ಟಿಯಾದಾಗ ಗಾಯಗೊಂಡಿದ್ದಾರೆ' ಎಂದು ಮುದ್ಗಲ್ ಹೇಳಿದ್ದಾರೆ.

'ಆಗಸ್ಟ್ 14 ರ ರಾತ್ರಿ ಅದೇ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ ಇ-ಕಾಮರ್ಸ್ ಸಂಸ್ಥೆಯ ಡೆಲಿವರಿ ಏಜೆಂಟ್ ಗಾಯಗೊಂಡಿದ್ದಾರೆ. ಅವರ ಓಡಿಸುತ್ತಿದ್ದ ಬೈಕ್ ಕಾರಿಗೆ ಡಿಕ್ಕಿ ಹೊಡೆದು ಕಾಲು ಮುರಿದುಕೊಂಡಿದ್ದಾರೆ. ಗಾಯಾಳು ಮಂಡ್ಯದವರು. ಅವರಿಗೆ ಒಂಬತ್ತು ಸದಸ್ಯರ ಕುಟುಂಬವಿದೆ. ಆ ಕುಟುಂಬದಲ್ಲಿ ಏಕೈಕ ಆದಾಯ ಹೊಂದಿದ ವ್ಯಕ್ತಿ ಇವರೊಬ್ಬರೇ ಎಂದು ನಂತರ ನನಗೆ ತಿಳಿಯಿತು. ಇದರಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೆ' ಎಂದು ಮುದ್ಗಿಲ್ ತಿಳಿಸಿದ್ದಾರೆ.
ಇತರ ಸಮಾನ ಮನಸ್ಕ ಜನರೊಂದಿಗೆ ಸೇರಿ ಐದು ವರ್ಷಗಳ ಹಿಂದೆ 'ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು' ಅನ್ನು ಸ್ಥಾಪಿಸಿರುವುದಾಗಿ ಮುದ್ಗಿಲ್ ಅವರು ಹೇಳಿಕೊಂಡಿದ್ದಾರೆ.
'ಗ್ರೂಪ್‌ನ ಇತರ ಸದಸ್ಯರು ಸಹ ಹಣವನ್ನು ನೀಡಿದ್ದಾರೆ. ನಾವು ಕೆಲವು ಗುಂಡಿಗಳನ್ನು ಸರಿಪಡಿಸಿದ್ದೇವೆ' ಎಂದು ಮುದ್ಗಲ್ ತಿಳಿಸಿದ್ದಾರೆ.

'ನಮ್ಮಲ್ಲಿ ಹಣವಿಲ್ಲ, ಹಾಗಾಗಿ ನಾನು ಸಾಲವನ್ನು ತೆಗೆದುಕೊಂಡೆದ್ದೇನೆ. ಈ ಭಾಗದ ಜನಪ್ರತಿನಿಧಿಗಳನ್ನು ಹಲವು ಬಾರಿ ಭೇಟಿ ಮಾಡಿ ಉತ್ತಮ ರಸ್ತೆ, ಚರಂಡಿ ಹಾಗೂ ಇತರೆ ನಾಗರಿಕ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದೇವೆ. ಆದರೆ, ಯಾರೂ ಸ್ಪಂದಿಸಿಲ್ಲ' ಎಂದು ಗ್ರೂಪ್‌ನ ಸದಸ್ಯ ಮಿಥಿಲೇಶ್ ಕುಮಾರ್ ಹೇಳಿದ್ದಾರೆ.
'ರಾಜಕಾರಣಿಗಳು ಈ ವಿಚಾರಗಳ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ಈ ಪ್ರದೇಶಗಳ ನಿವಾಸಿಗಳು ಇತರ ರಾಜ್ಯಗಳು ಅಥವಾ ಸ್ಥಳಗಳಿಂದ ಬಂದವರು ಎಂದು ಅವರು ಭಾವಿಸುತ್ತಾರೆ. ಹೀಗಾಗಿ ಭಾನುವಾರ ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ ಆರಂಭಿಸಿದ್ದೇವೆ' ಎಂದು ಕುಮಾರ್ ತಿಳಿಸಿದ್ದಾರೆ.
'NoDevelopmentNoTax' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ X (ಹಿಂದೆ ಟ್ವಿಟರ್) ನಲ್ಲಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮುದ್ಗಿಲ್ ಹೇಳಿದ್ದಾರೆ.












Click it and Unblock the Notifications