Karnataka Cabinet: ನಾನು ದೆಹಲಿಗೆ ಹೋಗ್ತೇನೆ ಎಂದ ಸಚಿವ ಸ್ಥಾನ ವಂಚಿತ ಟಿಬಿ ಜಯಚಂದ್ರ
ಬೆಂಗಳೂರು, ಮೇ 27: ಕಾಂಗ್ರೆಸ್ ಸಚಿವ ಸಂಪುಟ ರಚನೆಯಾಗಿದ್ದು, ಶನಿವಾರ 24 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಬಾರಿ ಹಲವು ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿದ್ದು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕಾಂಗ್ರೆಸ್‌ನ ಹಿರಿಯ ಶಾಸಕ, ಮಾಜಿ ಸಚಿವ ಟಿ.ಬಿ. ಜಯಚಂದ್ರ ಸಚಿವ ಸ್ಥಾನದಿಂದ ವಂಚಿತರಾಗಿದ್ದು, ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಏನ್ ಮಾಡಕಾಗುತ್ತೆ, "ವಿಧಿಯಾಟ. ರಾಜಕೀಯ ಅಂದ್ರೆ ಇಷ್ಟೆ ಮೋಸ ಇದ್ದೇ ಇರುತ್ತೆ. ನಾನು ಯಾವತ್ತೂ ಇದನ್ನು ಬಯಸಿದವನಲ್ಲ, ಈ ರೀತಿ ಆಗುತ್ತೆ ಅಂತಾ ನಿರೀಕ್ಷೆ ಕೂಡ ಮಾಡಿದವನಲ್ಲ. ನೂರಕ್ಕೆ ನೂರರಷ್ಟು ನನಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಬಯಸಿದ್ದೆ, ಅದರಲ್ಲಿ ಯಾವ ಅನುಮಾನವೂ ನನಗೆ ಇರಲಿಲ್ಲ, ಆದರೆ ಸಚಿವ ಸ್ಥಾನ ಕೈತಪ್ಪಿರುವುದು ಆಘಾತ ತಂದಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಾರಿಂದ ಹೀಗಾಯ್ತು, ಯಾಕೆ ಹಿಂಗಾಯ್ತು ಎನ್ನುವುದನ್ನು ಯೋಚನೆ ಮಾಡಬೇಕಿದೆ. ನನಗೆ ಟಿಕೆಟ್ ಕೊಡುವ ಸಂದರ್ಭದಲ್ಲಿ ಯಾವ ಅಪಸ್ವರ ಕೂಡ ಕೇಳಿಬಂದಿರಲಿಲ್ಲ. ಅವರಿಗೆ ಕೂಡ ನಾನು ಗೆಲ್ಲುತ್ತೇನೆ ಎನ್ನುವ ಮಾಹಿತಿ ಇತ್ತು. ಆ ಬಗ್ಗೆ ಗೊಂದಲ ಇರಲಿಲ್ಲ ಎಂದು ಹೇಳಿದರು.
ದೆಹಲಿಗೆ ಹೋಗುತ್ತೇನೆ ಎಂದ ಜಯಚಂದ್ರ
ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನನ್ನ ಕ್ಷೇತ್ರದ ಮತದಾರರು, ನನ್ನ ಹಿತೈಷಿಗಳು ನಿರಾಶರಾಗಿದ್ದಾರೆ. ನಾನು ದೆಹಲಿಗೆ ಹೋಗಿ ವರಿಷ್ಠರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.
ಸಚಿವ ಸ್ಥಾನದಿಂದ ಕೈಬಿಟ್ಟ ನಂತರ ನನ್ನ ಜೊತೆ ಸಿದ್ದರಾಮಯ್ಯ ಅವರಾಗಲಿ ಅಥವಾ ಡಿಕೆ ಶಿವಕುಮಾರ್ ಆಗಲಿ ಮಾತನಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು. ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಕಾರಣ ಯಾರೂ ಕೊಟ್ಟಿಲ್ಲ ಎಂದು ಅವರು ಹೇಳಿದರು.
ಒಕ್ಕಲಿಗರಲ್ಲಿ ಕುಂಚಿಟಿಗ ಸಮುದಾಯದಿಂದ ಆಯ್ಕೆಯಾಗಿರುವ ಒಬ್ಬನೇ ಶಾಸಕ ನಾನು, ಹಾಗಾಗಿ ನನಗೆ ಸಚಿವ ಸ್ಥಾನ ನೀಡಲು ಯಾವ ಅಡ್ಡಿ ಇರಲಿಲ್ಲ, ಆದರೆ ಯಾವ ಕಾರಣಕ್ಕೆ ನಿರಾಕರಿಸಿದ್ದಾರೆ ನನಗೆ ಗೊತ್ತಿಲ್ಲ. ಕುಂಚಿಟಿಗ ಸಮುದಾಯ ಇರುವ ಕಡೆ ಕಾಂಗ್ರೆಸ್‌ಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಸಮುದಾಯದವರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಬಯಸುವುದು ಸಹಜ ಎಂದರು.
ಎರಡೂವರೆ ವರ್ಷಗಳ ನಂತರ ಸಿಎಂ ಬದಲಾಗ್ತಾರ, ಸಚಿವರು ಬದಲಾವಣೆ ಆಗ್ತಾರ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು. ಅಧಿಕಾರ ಹಂಚಿಕೆ ಬಗ್ಗೆ ವರಿಷ್ಠರ ನಡುವೆ ಚರ್ಚೆಯಾಗಿರಬಹುದೇನೋ, ಆದರೆ ಈ ಬಗ್ಗೆ ಶಾಸಕರಿಗೆ ಯಾವ ಮಾಹಿತಿಯೂ ಇಲ್ಲ ಎಂದು ಹೇಳಿದರು. ಯಾವುದು ನಿಜ, ಯಾವುದು ಸುಳ್ಳು ನಮಗೂ ಗೊತ್ತಿಲ್ಲ ಎಂದು ಹೇಳಿದರು.











Click it and Unblock the Notifications