ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣ ಅಭಿವೃದ್ಧಿ; ಅಪ್‌ಡೇಟ್
ಬೆಂಗಳೂರು, ಅಕ್ಟೋಬರ್ 12: ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ಪುರಾತನ ರೈಲು ನಿಲ್ದಾಣ ಕಂಟೋನ್ಮೆಂಟ್ ರೈಲು ನಿಲ್ದಾಣವಾಗಿದೆ. ಇದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ವಿಮಾನ ನಿಲ್ದಾಣದ ಮಾದರಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಕಾಮಗಾರಿಯ ಬಗ್ಗೆ ನೈಋತ್ಯ ರೈಲ್ವೆ ಅಪ್‌ಡೇಟ್ ನೀಡಿದೆ.
ಸುಮಾರು 480 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದು ಬ್ರಿಟಿಷರ ಕಾಲದ ನಿಲ್ದಾಣವಾಗಿದ್ದು, ಹೊಸ ಕಾಮಗಾರಿಗಳ ಬಳಿಕ ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಲಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಮೆಜೆಸ್ಟಿಕ್)ದ ಮೇಲಿನ ಪ್ರಯಾಣಿಕರ ಒತ್ತಡ ಕಡಿಮೆ ಮಾಡಲು ಬೆಂಗಳೂರು ನಗರದ ವಿವಿಧ ರೈಲು ನಿಲ್ದಾಣ ಅಭಿವೃದ್ಧಿ ಮಾಡಲಾಗುತ್ತಿದೆ. ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಈಗಾಗಲೇ ಅಭಿವೃದ್ಧಿಗೊಂಡು ಉದ್ಘಾಟನೆಯಾಗಿದೆ. ಯಶವಂತಪುರ ನಿಲ್ದಾಣದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.
ಕಂಟೋನ್ಮೆಂಟ್ ಅಪ್‌ಡೇಟ್; ಕಂಟೋನ್ಮೆಂಟ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 20, 2022ರಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಈಗ ಕಾಮಗಾರಿ ಪ್ರಗತಿಯಲ್ಲಿದ್ದು, ನೈಋತ್ಯ ರೈಲ್ವೆ ಈ ಕುರಿತ ಚಿತ್ರಗಳನ್ನು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದೆ.
ರೈಲು ನಿಲ್ದಾಣ ಅಭಿವೃದ್ಧಿ ಭಾಗವಾಗಿ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ 4 ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯ ಅಂತಿಮ ಹಂತದ ಚಿತ್ರಗಳನ್ನು ನೈಋತ್ಯ ರೈಲ್ವೆ ಟ್ವೀಟ್ ಮಾಡಿದೆ. ಈ ಪ್ಲಾಟ್‌ಫಾರ್ಮ್‌ಗಳು ಪೂರ್ಣಗೊಂಡ ಬಳಿಕ ರೈಲುಗಳ ಸಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಬೆಂಗಳೂರಿನ ಜನರಿಗೆ ಸಹ ಸಹಾಯಕವಾಗಲಿದೆ.
ಅಲ್ಲದೇ ಅಭಿವೃದ್ಧಿಯ ಭಾಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ರಸ್ತೆಯನ್ನು 13 ಮೀಟರ್ ಸ್ಥಳಾಂತರಿಸಿ 24 ಮೀಟರ್‌ಗೆ ವಿಸ್ತರಣೆ ಮಾಡಲಾಗುತ್ತಿದೆ. ಇದು ರೈಲು ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿದೆ.
ಕಂಟೋನ್ಮೆಂಟ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಗೆ ದೆಹಲಿಯ ಐಐಟಿ ತಾಂತ್ರಿಕ ನೆರವು ನೀಡುತ್ತಿದೆ. ಕಟ್ಟಡ ನಿರ್ಮಾಣ, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಕೇಬಲ್‌ಗಳ ಸ್ಥಳಾಂತರ, ಪ್ಲಾಟ್‌ಫಾರ್ಮ್ ಅಂತಿಮ ಹಂತದ ಕಾಮಗಾರಿಗಳು ಈಗ ನಡೆಯುತ್ತಿವೆ.
ಭಾರತೀಯ ರೈಲ್ವೆ ಮೂರು ವರ್ಷಗಳಲ್ಲಿ ಬೆಂಗಳೂರು ನಗರದ ಮೂರು ರೈಲು ನಿಲ್ದಾಣಗಳನ್ನು ಹೈಟೆಕ್ ಮಾಡುವ ಕಾಮಗಾರಿ ಕೈಗೊಂಡಿದೆ. ಈ ಪೈಕಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವಿಮಾನ ನಿಲ್ದಾಣ ಮಾದರಿಯಲ್ಲಿ ನಿರ್ಮಾಣ ಮಾಡಿ, ಉದ್ಘಾಟನೆ ಮಾಡಲಾಗಿದೆ.
ಕಂಟೋನ್ಮೆಂಟ್ ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣ ಅಭಿವೃದ್ಧಿಗೊಂಡ ಬಳಿಕ ಕೆಎಸ್ಆರ್ ನಿಲ್ದಾಣದಿಂದ ಸಾಗುವ ಹಲವು ರೈಲುಗಳನ್ನು ಈ ರೈಲು ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಆಗ ಕೆಎಸ್ಆರ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ.
ನೈಋತ್ಯ ರೈಲ್ವೆ ಈ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣದ ಪಾರಂಪರಿಕತೆಯನ್ನು ಹಾಗೆಯೇ ಉಳಿಸಿಕೊಂಡು, ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಲಭ್ಯಗಳನ್ನು ನೀಡುವಂತೆ ಹೊಸ ಹೊಸ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. 2025ಕ್ಕೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಎರಡು ಪ್ರವೇಶ ದ್ವಾರವನ್ನು ನಿರ್ಮಾಣ ಮಾಡಲಾಗುತ್ತದೆ. ವಸಂತನಗರ ಭಾಗಕ್ಕೆ ಮುಖ್ಯ ಪ್ರವೇಶ ದ್ವಾರ, ಮಿಲ್ಲರ್ಸ್ ರಸ್ತೆ ಕಡೆಗೆ ಎರಡನೇ ಪ್ರವೇಶ ದ್ವಾರ ನಿರ್ಮಾಣ ಮಾಡುವುದು ರೈಲು ನಿಲ್ದಾಣದ ಅಭಿವೃದ್ಧಿ ಯೋಜನೆಯ ಭಾಗವಾಗಿದೆ.
ರೈಲು ನಿಲ್ದಾಣದ ಕಟ್ಟದ ಒಳಗೆ ಸಹ ಹೈಟೆಕ್ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರಲಿದೆ. ಉಪಹಾರ ಮಂದಿರ, ವಾಣಿಜ್ಯ ಮಳಿಗೆಗಳು, ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗಾಗಿ ಎಸ್ಕಲೇಟರ್, ಹೈಟೆಕ್ ಶೌಚಾಲಯ, ವಿಶಾಲವಾದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದೆ.












Click it and Unblock the Notifications