"ಮುಂಬೈ, ಕೋಲ್ಕತ್ತಾ & ದೆಹಲಿಗಿಂತ ಬೆಂಗಳೂರು ಟ್ರಾಫಿಕ್, ಸಂಚಾರ ಸುವ್ಯವಸ್ಥೆ ಉತ್ತಮ!"
ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಜಾಮ್ ವಿಪರೀತವಾಗುತ್ತಿದೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಈ ರೀತಿ ಇರುವಾಗಲೇ ಮುಂಬೈ, ಕೋಲ್ಕತ್ತಾ ಹಾಗೂ ದೆಹಲಿ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಸಂಚಾರ ಸುವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ ಎಂದು ಸರ್ಕಾರ ಹೇಳಿದೆ.
ಹೌದು, ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿರುವಾಗಲೇ ಗೃಹ ಸಚಿವ ಜಿ. ಪರಮೇಶ್ವರ್ ಅವರು ದೇಶದ ಪ್ರಮುಖ ನಗರಗಳಿಗೆ ಹೋಲಿಕೆ ಮಾಡಿದರೆ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಸಂಚಾರ ಪೊಲೀಸ್ ಹಾಗೂ ಹೋಂಡಾ ಇಂಡಿಯಾ ಫೌಂಡೇಶನ್ ರವರ ಸಹಯೋಗದಲ್ಲಿ 50 ಸಂಚಾರ ಗಸ್ತು ವಾಹನಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು. ದೊಡ್ಡ ಕಂಪನಿಗಳು, ಕೈಗಾರಿಕೆಗಳು ಸಾರ್ವಜನಿಕರಿಗೆ ಉಪಯೋಗ ಅಗುವ ಕೆಲಸ ಮಾಡಬೇಕು. ತಮ್ಮ ಲಾಭದಲ್ಲಿ ಶೇ. 2ರಷ್ಟು ಖರ್ಚು ಮಾಡಬೇಕು ಎಂಬ ನಿಯಮ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಕಂಪನಿಗಳು ಕೆಲಸ ಮಾಡುತ್ತಿವೆ. ಹೋಂಡಾ ಸಂಸ್ಥೆಯವರು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ 1.30 ಕೋಟಿ ರೂ. ವೆಚ್ಚದಲ್ಲಿ 50 ಗಸ್ತು ವಾಹನಗಳನ್ನು ನೀಡುವ ಮೂಲಕ ತಮ್ಮ ಬದ್ಧತೆಯನ್ನು ತೋರಿದ್ದಾರೆ. ಈ ದ್ವಿಚಕ್ರ ವಾಹನಗಳು ಟ್ರಾಫಿಕ್ ನಿಯಂತ್ರಿಸಲು ಪೊಲೀಸರಿಗೆ ಉಪಯೋಗ ಆಗುತ್ತವೆ ಎಂದು ಹೇಳಿದ್ದಾರೆ.
ಸರ್ಕಾರವು ಗಮನದಲ್ಲಿಟ್ಟುಕೊಂಡು ಪ್ರತಿವರ್ಷ ನೂರಾರು ವಾಹನಗಳನ್ನು ಖರೀದಿಸಿ, ನೀಡಲಾಗುತ್ತದೆ. ಈ ವರ್ಷ 500 ವಾಹನಗಳನ್ನು ಖರೀದಿಸಲಾಗಿದೆ. ಈ ಹಿಂದೆ ಪೊಲೀಸ್ ಅಧಿಕಾರಿಗಳ ನಿಯೋಗವನ್ನು ಲಂಡನ್‌ಗೆ ಕರೆದೊಯ್ಯಲಾಗಿತ್ತು. ಲಂಡನ್ ಮೆಟ್ರೋ ಪೊಲೀಸರು ಕಮಾಂಡ್ ಸೆಂಟರ್‌ನ ಕಾರ್ಯವೈಖರಿಯನ್ನು ಪರಿಚಯಿಸಿದ್ದರು. ಅಪಘಾತ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಿದ್ದರು.
ಅದೇ ರೀತಿಯ ಕಮಾಂಡ್ ಸೆಂಟರ್ ಯಾಕೆ ನಾವು ಮಾಡಬಾರದು ಎಂಬ ನಿಟ್ಟಿನಲ್ಲಿ, 26 ಕೋಟಿ ರೂ. ಖರ್ಚು ಮಾಡಿ ಬೆಂಗಳೂರು ನಗರದಲ್ಲಿ ಕಮಾಂಡ್ ಸೆಂಟರ್ ನಿರ್ಮಿಸಲಾಗಿದೆ. ಸಾರ್ವಜನಿಕರ ಯಾವುದೇ ರೀತಿಯ ತುರ್ತು ಕರೆಗಳಿಗೆ ಪೊಲೀಸರು 9 ನಿಮಿಷದಲ್ಲಿ ಸ್ಪಂದಿಸುತ್ತಾರೆ ಎಂದಿದ್ದಾರೆ.
ಬೆಂಗಳೂರು ನಗರ ಸಂಚಾರ ಪೊಲೀಸರು 'ಬಿಟಿಪಿ ಅಸ್ತ್ರಂ ಇ-ಆ್ಯಕ್ಸಿಡೆಂಟ್' ಹೊಸ ಆವಿಷ್ಕಾರವನ್ನು ಪರಿಚಯಿಸಿದ್ದಾರೆ. ಅಪಘಾತದ ಸಂದರ್ಭದಲ್ಲಿ ಯಾರು ಸ್ಪಂದಿಸುವುದಿಲ್ಲ. ಅಲ್ಲದೇ, ವಿಮೆ ಪಡೆದುಕೊಳ್ಳಲು ಕಷ್ಟವಾಗುತ್ತಿದೆ. ಇದರ ಒತ್ತಡವನ್ನು ಕಡಿಮೆ ಮಾಡಲು ಬಿಟಿಪಿ ಅಸ್ತ್ರಂ ಆ್ಯಪ್‌ನಲ್ಲಿ ಇ-ಆ್ಯಕ್ಸಿಡೆಂಟ್ ಮೂಲಕ ರಿಪೋರ್ಟ್ ಮಾಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ಸ್ ಹಿಡಿಯುವ ಕೆಲಸವನ್ನು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಒಂದೇ ಪ್ರಕರಣದಲ್ಲಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಿದ್ದಾರೆ. ನಮ್ಮ ಪೊಲೀಸರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಡ್ರಗ್ಸ್ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಮಳೆಯಿಂದಾಗಿ ರಸ್ತೆ ಗುಂಡಿಗಳು ಬಿದ್ದಿವೆ. ಇದನ್ನು ಮುಚ್ಚುವ ಕೆಲಸವನ್ನು ಮಾಡಾಲಗುತ್ತಿದೆ. ರಾಜಕೀಯ ಕಾರಣಕ್ಕಾಗಿ ದೂಷಿಸುವುದು ಸರಿಯಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications