ಬೆಂಗಳೂರು; ಜೂಜು ಅಡ್ಡೆ ಮೇಲೆ ದಾಳಿ, ಇನ್ಸ್‌ಪೆಕ್ಟರ್ ಅಮಾನತು
ಬೆಂಗಳೂರು, ಅಕ್ಟೋಬರ್ 14 : ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಸುಮಾರು 80 ಜನರನ್ನು ಬಂಧಿಸಿ 95 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಠಾಣೆ ಇನ್ಸ್‌ಪೆಕ್ಟರ್ ಅಶ್ವತ್ಥನಾರಾಯಣಸ್ವಾಮಿ, ಮುಖ್ಯಪೇದೆ ಜಯಕಿರಣ್ ಅಮಾತನು ಮಾಡಲಾಗಿದೆ. ಜೂಜಾಟ ನಡೆಸಲು ಸಹಕಾರ ನೀಡಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ.
ಸಿಸಿಬಿ ಪೊಲೀಸರು ಜೂಜಾಟಕ್ಕೆ ಸ್ಥಳೀಯ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂಬ ಮಾಹಿತಿಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದರು. ಆಯುಕ್ತ ಕಮಲ್ ಪಂಥ್ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮಾರತ್‌ಹಳ್ಳಿಯ ಪ್ರಿನ್ಸ್‌ಸಿಟಿ ರಸ್ತೆಯ ಬೃಹತ್ ಕಟ್ಟಟದ 6ನೇ ಮಹಡಿಯಲ್ಲಿ ದೊಡ್ಡ ಮಟ್ಟದಲ್ಲಿ ಜೂಜಾಟ ನಡೆಯುತ್ತಿತ್ತು. ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಸುಮಾರು 80 ಜನರು ಅಲ್ಲಿ ಜೂಜಾಟವಾಡುತ್ತಿದ್ದರು. ಬೇರೆ ರಾಜ್ಯಗಳ ಜನರು ಸಹ ಅಲ್ಲಿದ್ದರು.
95 ಲಕ್ಷ ರೂ. ಹಣ, ದುಬಾರಿ ಬೆಲೆಯ ವಾಚು, 87 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಜೂಜು ಅಡ್ಡೆ ನಡೆಸಲು ಸ್ಥಳೀಯ ಪೊಲೀಸರ ಸಹಕಾರವೂ ಇದೆ ಎಂಬುದು ಸಿಸಿಬಿಯ ಶಂಕೆಯಾಗಿತ್ತು.
ಸಿಸಿಬಿ ನೀಡಿದ ಮಾಹಿತಿಯಂತೆ ಆಂತರಿಕ ತನಿಖೆ ನಡೆಸಿದ ಬಳಿಕ ಇನ್ಸ್‌ಪೆಕ್ಟರ್ ಮತ್ತು ಮುಖ್ಯ ಪೇದೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಜೂಜಾಟವಾಡಲು ಇಲ್ಲಿಗೆ ಜನರು ಬರುತ್ತಿದ್ದರು ಎಂಬ ಆರೋಪವೂ ಇದೆ.












Click it and Unblock the Notifications