ಮಕರ ಸಂಕ್ರಾಂತಿ ದಿನ ಗವಿ ಗಂಗಾಧರೇಶ್ವರನ ಸ್ಪರ್ಶಿಸದ ಸೂರ್ಯನ ಕಿರಣ
ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದ ದಿನ ಬೆಂಗಳೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ್ ದೇಗುಲದಲ್ಲಿ ನಡೆಯುವ ಪ್ರಕೃತಿ ವಿಸ್ಮಯವನ್ನು ನೋಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಮಕರ ಸಂಕ್ರಾಂತಿ ದಿನ ಸಂಜೆ ವೇಳೆ ಗವಿ ಗಂಗಾಧರೇಶ್ವರನನ್ನು ಸೂರ್ಯನ ಕಿರಣಗಳು ಸ್ಪರ್ಶಿಸುತ್ತವೆ. ಈ ಕೌತುಕವನ್ನು ಕಣ್ತುಂಬಿಕೊಳ್ಳಲು ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರುತ್ತಾರೆ. ಈ ಬಾರಿ ಸಂಕ್ರಾಂತಿ ಹಬ್ಬದ ದಿನ ಸಾವಿರಾರು ಭಕ್ತರು ಈ ವಿಸ್ಮಯ ನೋಡಲು ಸೇರಿದ್ದರು, ಆದರೆ ಅವರಿಗೆ ನಿರಾಸೆಯಾಗಿದೆ.
ಇಂದು ಸೂರ್ಯನ ಕಿರಣಗಳು ಗವಿ ಗಂಗಾಧರೇಶ್ವರನ ಮೂರ್ತಿಯನ್ನು ಸ್ಪರ್ಶಿಸದೇ ಇರುವುದು ಭಕ್ತರ ನಿರಾಸೆಗೆ ಕಾರಣವಾಗಿದೆ. ದೇವಸ್ಥಾನದ ಬಲಭಾಗದಲ್ಲಿರುವ ಕಮಾನಿನ ಕಿಟಕಿ ಮೂಲಕ ಗರ್ಭಗುಡಿಯನ್ನು ಪ್ರವೇಶಿಸುವ ಸೂರ್ಯನ ಕಿರಣ ಗಂಗಾಧರೇಶ್ವರನನ್ನು ಸ್ಪರ್ಶಿಸಬೇಕಿದ್ದು, ಆದರೆ ಮಂಗಳವಾರ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದ ಕಾರಣ ಗಂಗಾಧರೇಶ್ವರ ಮೇಲೆ ಸೂರ್ಯನ ಕಿರಣಗಳು ಬೀಳದೆ ಭಕ್ತರು ನಿರಾಸೆಗೊಂಡರು. ಇದು ಸೇರಿ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಇಂತಹ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಮಕರ ಸಂಕ್ರಮಣ ಎಂದರೆ ಸೂರ್ಯ ತನ ಪಥವನ್ನು ಬದಲಾಯಿಸುವ ದಿನ ಎನ್ನುವುದು ಧಾರ್ಮಿಕ ನಂಬಿಕೆಯಾಗಿದೆ. ಉತ್ತರಾಯಣ ಪುಣ್ಯಕಾಲ ಎಂದು ಕೂಡ ಕರೆಯುತ್ತಾರೆ. ಇದು ರೈತರ ಹಬ್ಬವೂ ಹೌದು, ಬೆಳೆದ ಬೆಳೆಯನ್ನು ರಾಶಿ ಹಾಕಿ ಪೂಜಿಸಿ ಮನೆ ತುಂಬಿಸಿಕೊಳ್ಳುವ ಸಂಪ್ರದಾಯ ಕೂಡ ಇದೆ. ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಂಚಲನ ಮಾಡುವ ವೇಳೆ ಗವಿ ಗಂಗಾಧರೇಶ್ವರನಿಗೆ ನಮಿಸಿ ಹೋಗುತ್ತಾನೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಮಂಗಳವಾರ ಬೆಳಗ್ಗೆ 5 ಗಂಟೆಯಿಂದಲೇ ಮಹಾಮಂಗಳಾರತಿ ಮಾಡಲಾಗಿತ್ತು, ಸೂರ್ಯನ ಕಿರಣ ಸ್ಪರ್ಶಿಸುವ ದೃಶ್ಯ ಕಣ್ತುಂಬಿಕೊಳ್ಳಲು ಗಂಟೆ ಗಟ್ಟಲೆ ಕಾದಿದ್ದ ಭಕ್ತರಿಗೆ ಕೊನೆಗೂ ನಿರಾಸೆಯಾಯಿತಿ.












Click it and Unblock the Notifications