Bengaluru rains: ಗುಡುಗು ಮಿಂಚು ಸಹಿತ ಆರ್ಭಟಿಸಿದ ಮಳೆಗೆ ಸಿಲಿಕಾನ್ ಸಿಟಿ ಅಸ್ತವ್ಯಸ್ತ, ಇವತ್ತಿನ ಹವಾಮಾನ ಹೇಗಿದೆ?
ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನ ಹವಾಮಾನದಲ್ಲಿ ದಿಢೀರ್ ಬದಲಾಗಿದೆ. ಕಳೆದ ಕೆಲವು ದಿನಗಳಿಂದ ಕಣ್ಮರೆಯಾಗಿದ್ದ ಮುಂಗಾರು ಮಳೆ, ಇಂದು ಬೆಳ್ಳಂಬೆಳಗ್ಗೆಯೇ ತನ್ನ ಆರ್ಭಟ ಶುರುಮಾಡಿದೆ. ನಿನ್ನೆ ಸಂಜೆ ಮಳೆ ಸುರಿದು, ರಾತ್ರಿ ಸಮಯಕ್ಕಾಗಲೇ ಶುಭ್ರವಾಗಿದ್ದ ಆಕಾಶದಲ್ಲಿ ಇದ್ದಕ್ಕಿದ್ದಂತೆ ಮೋಡ ಕವಿದು, ಮುಂಜಾನೆ 3:30ರ ಸುಮಾರಿನಿಂದಲೇ ಗುಡುಗು ಸಹಿತ ಭಾರಿ ಮಳೆ ಶುರುವಾಗಿದೆ.
ದಿನನಿತ್ಯದ ಕೆಲಸಗಳಿಗೆ, ಶಾಲಾ-ಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ತೆರಳಲು ಸಜ್ಜಾಗುತ್ತಿದ್ದ ಬೆಂಗಳೂರಿನ ಜನತೆಗೆ ಈ ಮಳೆ ತೀವ್ರ ತೊಂದರೆ ಉಂಟುಮಾಡಿದೆ. ರಸ್ತೆಗಳಲ್ಲಿ ಮಳೆ ನೀರು ತುಂಬಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಿಂದಲೇ ದಿನದ ಆರಂಭ ಆಗಿರುವುದರಿಂದ ನಗರದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರು ಮುಂಜಾನೆ ಹವಾಮಾನ: ಎಲ್ಲೆಲ್ಲಿ ಹೇಗಿದೆ ಮಳೆಯ ಅಬ್ಬರ?
ಬೆಳಗಿನ ಜಾವದಿಂದಲೇ ಶುರುವಾದ ಮಳೆಯ ಅಬ್ಬರ ಇನ್ನೂ ಸಂಪೂರ್ಣವಾಗಿ ತಗ್ಗಿಲ್ಲ. ನಗರದ ಪ್ರಮುಖ ವಾಣಿಜ್ಯ ಹಾಗೂ ಜನವಸತಿ ಭಾಗಗಳಾದ ಕೋರಮಂಗಲ, ಯಶವಂತಪುರ, ಮೆಜೆಸ್ಟಿಕ್, ಮಲ್ಲೇಶ್ವರಂ, ಕಾರ್ಪೋರೇಷನ್, ಕೆ.ಆರ್. ಮಾರ್ಕೆಟ್, ಲಾಲ್ ಬಾಗ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ.
ಮುಂಜಾನೆ ಭಾರಿ ಪ್ರಮಾಣದಲ್ಲಿ ಸುರಿದು ತುಸು ಬಿಡುವು ನೀಡಿದ್ದ ವರುಣ, ಇದೀಗ ಮತ್ತೆ ಸಣ್ಣ ಮಳೆ ಸುರಿಸುತ್ತಿದ್ದಾನೆ. ದಿಢೀರ್ ಮಳೆಯಿಂದಾಗಿ ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರಿನ ಮಳೆ ಎಂದಾಕ್ಷಣ ನೆನಪಿಗೆ ಬರುವುದು ಜಲಾವೃತಗೊಂಡ ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು. ಅದರಂತೆ, ಇಂದು ಸುರಿದ ಮಳೆಗೆ ಮಲ್ಲೇಶ್ವರಂನ ಮಂತ್ರಿ ಮಾಲ್ ಮುಂದಿನ ರಸ್ತೆ ಸಂಪೂರ್ಣವಾಗಿ ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಮಲ್ಲೇಶ್ವರಂನಲ್ಲಿ ಮರ ಬಿದ್ದು ಜಖಂಗೊಂಡ ಕಾರುಗಳು
ಇಂದು ಬೆಳಗ್ಗೆ ಸುರಿದ ಬಿರುಗಾಳಿ ಹಾಗೂ ಭಾರಿ ಮಳೆಗೆ ಮಲ್ಲೇಶ್ವರಂನ ಸ್ಮಾರ್ಟ್ ಬಜಾರ್ ಮುಂಭಾಗದಲ್ಲಿ ಬೃಹತ್ ಮರವೊಂದು ಬಿದ್ದಿದೆ. ದುರದೃಷ್ಟವಶಾತ್, ಮರದ ಕೆಳಗೆ ನಿಲ್ಲಿಸಲಾಗಿದ್ದ ಎರಡು ಕಾರುಗಳ ಮೇಲೆ ಈ ಬೃಹತ್ ಮರ ಬಿದ್ದ ಪರಿಣಾಮ ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಮುಂಜಾನೆಯ ಸಮಯವಾದ್ದರಿಂದ ಕಾರಿನಲ್ಲಿ ಯಾರೂ ಇರಲಿಲ್ಲ, ಹೀಗಾಗಿ ದೊಡ್ಡ ಪ್ರಾಣಾಪಾಯವೊಂದು ತಪ್ಪಿದೆ ಎಂಬುದು ಸಮಾಧಾನಕರ ಸಂಗತಿ.
ಇಂದು ಹೇಗಿರಲಿದೆ ಹವಾಮಾನ
ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನವಿಡೀ ಮೋಡಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳಗಿನ ಜಾವದಿಂದಲೇ ಆರಂಭವಾಗಿರುವ ಜಿಟಿಜಿಟಿ ಮಳೆ ಹಾಗೂ ತಂಪಾದ ತಂಗಾಳಿಯು ನಗರದ ತಾಪಮಾನವನ್ನು ಗಣನೀಯವಾಗಿ ಕುಸಿಯುವಂತೆ ಮಾಡಿದ್ದು, ಜನರಿಗೆ ಮುಂಜಾನೆಯಿಂದಲೇ ಚಳಿಯ ಅನುಭವವಾಗುತ್ತಿದೆ.
ಗಾಳಿಯಲ್ಲಿ ತೇವಾಂಶದ ಪ್ರಮಾಣ ಶೇಕಡಾ 85ಕ್ಕೂ ಅಧಿಕವಾಗಿದ್ದು, ಗರಿಷ್ಠ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗುವ ನಿರೀಕ್ಷೆಯಿದೆ.
ಮಧ್ಯಾಹ್ನದ ವೇಳೆಗೆ ಮಳೆಯ ತೀವ್ರತೆ ಕೊಂಚ ತಗ್ಗಿದರೂ, ಸಂಜೆಯ ಹೊತ್ತಿಗೆ ಮತ್ತೆ ಗುಡುಗು-ಮಿಂಚು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಕರ್ನಾಟಕ ಮುಂಗಾರು ಮಳೆ ಮುನ್ಸೂಚನೆ
ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಇತರೆ ಭಾಗಗಳಲ್ಲಿಯೂ ಹವಾಮಾನ ಬದಲಾವಣೆಯಾಗಿದೆ. ದುರ್ಬಲವಾಗಿದ್ದ ಮುಂಗಾರು ಮಳೆ ಇದೀಗ ಮತ್ತೆ ಚುರುಕುಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಕೊಂಚ ನಿರಾಳತೆ ತಂದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕರ್ನಾಟಕ ಸೇರಿದಂತೆ ದೇಶದ ಸುಮಾರು 7 ರಾಜ್ಯಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು, ಪಾದಚಾರಿಗಳು ಹಾಗೂ ವಾಹನ ಸವಾರರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.


Click it and Unblock the Notifications
