• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ

By ಪ್ರಸಾದ ನಾಯಿಕ
|

ಬೆಂಗಳೂರು, ನ. 19 : ನವೆಂಬರ್ 19 ಇಪ್ಪತ್ತೆಂಟು ವರ್ಷ ವಯಸ್ಸಿನ, ಉತ್ಸಾಹದ ಚಿಲುಮೆಯಂತಿರುವ ಈ ಸುಂದರ ಯುವತಿಯ ನಾಲ್ಕನೇ ಹುಟ್ಟುಹಬ್ಬ! ಇಪ್ಪತ್ತೆಂಟರ ಯುವತಿ ನಾಲ್ಕನೇ ಹುಟ್ಟುಹಬ್ಬ ಹೇಗೆ ಆಚರಿಸಿಕೊಳ್ಳುತ್ತಾಳೆ ಎಂದು ನಿಮಗೆ ಅಚ್ಚರಿಯಾಗಬಹುದು. ಹೌದು, ಬದುಕು ಕೊನೆಯಾಗುವ ಹಂತದಲ್ಲಿ ಮರುಹುಟ್ಟು ಪಡೆದ ನಂತರ ಆಚರಿಸುತ್ತಿರುವ ನಾಲ್ಕನೇ ಹುಟ್ಟುಹಬ್ಬವಿದು.

ನೂರಾರು ಬಡ ರೋಗಿಗಳ ಔಷಧಿಗಾಗಿ ಮತ್ತು ತನ್ನ ಬಳಿ ಬರುವ ರೋಗಿಗಳಿಗೆ ಉಚಿತವಾಗಿ ಮಾರ್ಗದರ್ಶನ ನೀಡುತ್ತಿರುವ ಆ 'ಹೃದಯವಂತ' ಯುವತಿ ರೀನಾ ರಾಜು. ಆದರೆ ವಿಚಿತ್ರವೆಂದರೆ, ರೀನಾ ರಾಜು ಫೌಂಡೇಷನ್ ಎಂಬ ಸಂಸ್ಥೆ ಹುಟ್ಟುಹಾಕಿ ಬಡವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ಆಕೆಯ ಎದೆಗೂಡಿನಲ್ಲಿ ಮಿಡಿಯುತ್ತಿರುವ ಪುಟ್ಟ ಹೃದಯ ಆಕೆಯದಲ್ಲ.

ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಹೃದಯ ಕಸಿಯ ಮೂಲಕ ದಾನಿಯೊಬ್ಬರ ಹೃದಯ ಮತ್ತು ಮರುಹುಟ್ಟು ಪಡೆದ ಬೆಂಗಳೂರಿನ ಯುವತಿ ರೀನಾ ರಾಜು ಇಂದು ಹಲವಾರು ಹೃದಯಬೇನೆ ಮತ್ತು ಮೂತ್ರಪಿಂಡ ಕಸಿಗೆ ಒಳಗಾದವರ ಬಾಳಿನ ಬೆಳಕಾಗಿ ನಿಂತಿದ್ದಾರೆ. ತಮ್ಮ ಸಂಸ್ಥೆಯ ಮುಖಾಂತರ ಅರ್ಹ ಬಡ ರೋಗಿಗಳಿಗೆ ಪ್ರತಿ ತಿಂಗಳು ಉಚಿತವಾಗಿ ಔಷಧಿಗಳನ್ನು ವಿತರಿಸುತ್ತ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ.

ಈ ಸಾರ್ಥಕ ಜೀವನಗಾಥೆಯನ್ನು ಮಾಧ್ಯಮದ ಮುಖಾಂತರ ನಾಡಿನ ಜನರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ನ.19, ಮಂಗಳವಾರ ಅವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ತಮ್ಮ ಉದಾತ್ತ ಕೆಲಸದಲ್ಲಿ ಹೆಗಲಿಗೆ ಹೆಗಲಾಗಿ ನಿಂತಿರುವ ಪುಟ್ಟ ತಂಡವನ್ನು ಮತ್ತು ಸಂಸ್ಥೆಯಿಂದ ಸಹಾಯಪಡೆದು ಉತ್ತಮ ಜೀವನ ನಡೆಸುತ್ತಿರುವ ಇಬ್ಬರು ಫಲಾನುಭವಿಗಳನ್ನು (ಸಕಲೇಶಪುರದ ಜಯರಾಮ ಮತ್ತು ಕುಣಿಗಲ್ ನ ಮಾಯಣ್ಣ) ಜೊತೆಗೆ ಕರೆತಂದಿದ್ದರು.

ರೀನಾ ರಾಜು ಹಿಂದಿನ ಕಥೆ

ರೀನಾ ರಾಜು ಹಿಂದಿನ ಕಥೆ

2006ರವರೆಗೆ ಎಲ್ಲರಂತೆ ಸಹಜವಾಗಿ ಜೀವನಸಾಗಿಸುತ್ತಿದ್ದ ರೀನಾ ರಾಜುವಿಗೆ ಇದ್ದಕ್ಕಿದ್ದಂತೆ ಹೃದಯ ಕೈಕೊಟ್ಟಿತ್ತು. ಹಾಕಿ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ, ಉತ್ತಮ ಕ್ರೀಡಾಪಟು ಎಂದು ಹೆಸರು ಪಡೆದಿದ್ದ ರೀನಾ ರಾಜು ಕನಸು ಮತ್ತು ಬದುಕು ಕುಸಿದುಬಿದ್ದಿತ್ತು. ಎಷ್ಟೇ ಚಿಕಿತ್ಸೆಗಳನ್ನು ಮಾಡಿಸಿದರೂ ಯಾವುದೇ ಫಲ ನೀಡಿರಲಿಲ್ಲ. ಹಾಗೂಹೀಗೂ 2009ರವರೆಗೆ ಜೀವನದ ಬಂಡಿಯನ್ನು ಎಳೆದಿದ್ದರು.

ದೇವರಂತೆ ಬಂದ ಡಾಕ್ಟರ್ ಚೆರಿಯನ್

ದೇವರಂತೆ ಬಂದ ಡಾಕ್ಟರ್ ಚೆರಿಯನ್

ಆಗ ಚೆನ್ನೈನ ವೈದ್ಯ ಡಾ. ಕೆ.ಎಂ. ಚೆರಿಯನ್ ಅವರು, ರೀನಾ ರಾಜುಗೆ ಹೃದಯ ಮರುಜೋಡಣೆ (ಟ್ರಾನ್ಸ್ ಪ್ಲಾಂಟೇಷನ್) ಮಾಡದೆ ವಿಧಿಯಿಲ್ಲ ಎಂದು ಉಪದೇಶ ನೀಡಿದರು. ಕೊನೆಗೆ 2009ರ ನವೆಂಬರ್ 19ರಂದು ಸುಮಾರು ಐದಾರು ತಾಸುಗಳ ಸತತ ಶಸ್ತ್ರಚಿಕಿತ್ಸೆ ನಡೆಸಿ ರೀನಾ ಅವರಿಗೆ 'ಅಪರಿಚಿತ' ವ್ಯಕ್ತಿಯ ಹೃದಯವನ್ನು ಜೋಡಿಸಲಾಯಿತು. ಹದಿನೈದೇ ದಿನದಲ್ಲಿ ಅವರು ಮತ್ತೆ ಬೆಂಗಳೂರಿನಲ್ಲಿದ್ದರು.

ಈಸಬೇಕು, ಇದ್ದು ಜೈಸಬೇಕು ಎಂಬ ಛಲ

ಈಸಬೇಕು, ಇದ್ದು ಜೈಸಬೇಕು ಎಂಬ ಛಲ

ಮುಂದಿನ ದಿನಗಳು ಸುಲಭದ್ದಾಗಿರಲಿಲ್ಲ. ಅನ್ಯರಿಂದ ದಾನ ಪಡೆದ ಹೃದಯ ಸರಿಯಾಗಿ ಕಾರ್ಯ ನಿರ್ವಹಿಸಬೇಕಾಗಿತ್ತು. ಆ ಹೃದಯ ಸುಸೂತ್ರವಾಗಿ ಕಾರ್ಯನಿರ್ವಹಿಸುವಂತೆ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕಿತ್ತು. ವಿಪರೀತ ದುಬಾರಿಯಾದರೂ ಸರಿಯಾದ ಸಮಯಕ್ಕೆ ಮಾತ್ರೆಗಳನ್ನು ತಪ್ಪದೆ ತೆಗೆದುಕೊಳ್ಳಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಆಕೆಯಲ್ಲಿ ತಾನು ಈಸಬೇಕು, ಇದ್ದು ಜೈಸಬೇಕು ಎಂಬ ಛಲ ಮೊಳಕೆಯೊಡೆದಿತ್ತು.

ಆರೋಗ್ಯ ಏರುಪೇರಾಗುವ ಅಪಾಯ

ಆರೋಗ್ಯ ಏರುಪೇರಾಗುವ ಅಪಾಯ

ಔಷಧಿ ಏರುಪೇರಾದರೆ ಆರೋಗ್ಯ ಹದಗೆಡುವ, ಅದರಿಂದಾಗಿ ಇತರ ಅಂಗಾಗಗಳು ಕೆಲಸ ನಿಲ್ಲಿಸುವ, ಅಲ್ಲಿಇಲ್ಲಿ ಹೋದಾದ ಅದುಇದು ತಿಂದು ಆರೋಗ್ಯ ಕೆಡಿಸಿಕೊಳ್ಳುವ, ಇತರರಿಂದ ಸೋಂಕು ತಗುಲುವ ಅಪಾಯವಿತ್ತು. ಅದೆಲ್ಲವನ್ನು ಮೆಟ್ಟಿನಿಂತು, ಹೃದಯವನ್ನು ಮಾತ್ರವಲ್ಲ ತಮ್ಮ ಜೀವನವನ್ನೂ ಸರಿದಾರಿಗೆ ತರುವಲ್ಲಿ ರೀನಾ ಯಶಸ್ವಿಯಾದ ಕಥೆ ಒಂದು ಸಿನೆಮಾಗಾಗುವಷ್ಟು ಸ್ಪೂರ್ತಿಯುತವಾಗಿದೆ.

ಹೃದಯದ ಮಾತನ್ನು ಆಲಿಸಿದ ರೀನಾ

ಹೃದಯದ ಮಾತನ್ನು ಆಲಿಸಿದ ರೀನಾ

ಆರು ತಿಂಗಳ ಆ ಚಿಕಿತ್ಸಾ ಸಮಯ ರೀನಾ ಅವರ ಯೋಚನಾ ಲಹರಿಯನ್ನೂ ಬದಲಿಸಿತ್ತು. ತಾವೇ ಸ್ವತಃ ರೋಗಿಯಾಗಿದ್ದರೂ, ತಾವು ಮಾತ್ರವೇಕೆ ಇಂಥ ರೋಗದಿಂದ ಬಳಲುತ್ತಿರುವ ಬಡವರಿಗೆ ಊರುಗೋಲಾಗಿ ನಿಲ್ಲಬೇಕೆಂಬ ಸಂದೇಶವನ್ನು ಹೃದಯ ಅವರಿಗೆ ರವಾನಿಸಿತ್ತು. ತಮ್ಮ ಹೃದಯದ ಮಾತನ್ನು ಆಲಿಸಿದ ರೀನಾ ರಾಜು 2011ರಲ್ಲಿ ರೀನಾ ರಾಜು ಫೌಂಡೇಷನ್ ಹುಟ್ಟುಹಾಕಿದರು.

ರೋಗಿಗಳಿಗೆ ಉಚಿತ ಮಾರ್ಗದರ್ಶನ

ರೋಗಿಗಳಿಗೆ ಉಚಿತ ಮಾರ್ಗದರ್ಶನ

ಸಂಸ್ಥೆಯ ಮುಖಾಂತರ ಅವರು ಇಲ್ಲಿಯವರೆಗೆ 7 ಲಕ್ಷ ರು.ಗೂ ಹೆಚ್ಚು ಹಣವನ್ನು ಕೂಡಿಸಿದ್ದಾರೆ. 75ಕ್ಕೂ ಹೆಚ್ಚು ರೋಗಿಗಳು ಮತ್ತು ಅವರ ಕುಟುಂಬದವರಿಗೆ ಟ್ರಾನ್ಸ್‌ಪ್ಲಾಂಟೇಷನ್ ಬಗ್ಗೆ ಉಚಿತ ಮಾರ್ಗದರ್ಶನ ನೀಡಿದ್ದಾರೆ. ಅವರಲ್ಲಿ ಜೀವನದ ಬಗ್ಗೆ ಹುಮ್ಮಸ್ಸು ತುಂಬಿದ್ದಾರೆ. ಹೃದಯ, ಮೂತ್ರಪಿಂಡ ಮರುಜೋಡಣೆ ಬಗ್ಗೆ ಸೂಕ್ತವಾದ ಮಾಹಿತಿ ನೀಡುತ್ತಿದ್ದಾರೆ. ಇಲ್ಲಿಯವರೆಗೆ 4 ಹೃದಯ ಮತ್ತು 2 ಮೂತ್ರಪಿಂಡ ಮರುಜೋಡಣೆ ಮಾಡಿಸಿಕೊಂಡವರಿಗೆ ಉಚಿತ ಔಷಧಿಗಳನ್ನು ಒದಗಿಸುತ್ತಿದ್ದಾರೆ.

ಹೃದಯ, ಮೂತ್ರಪಿಂಡ, ಯಕೃತ್ತು ಕಸಿ ಜಾಗೃತಿ

ಹೃದಯ, ಮೂತ್ರಪಿಂಡ, ಯಕೃತ್ತು ಕಸಿ ಜಾಗೃತಿ

ಇವುಗಳ ಕಸಿ ಅಥವಾ ಮರುಜೋಡಣೆ ಬಡವರಿಗೆ ದಕ್ಕುವ ಬಾಬತ್ತಲ್ಲ. ಮೂತ್ರಪಿಂಡಕ್ಕೆ ಏನಿಲ್ಲವೆಂದರೂ 5 ಲಕ್ಷದಿಂದ 15 ಲಕ್ಷ ರು.ವರೆಗೆ ಬೇಕಾಗುತ್ತದೆ, ಯಕೃತ್ತು ಜೋಡಣೆಗೆ 15ರಿಂದ 35 ಲಕ್ಷ ರು.ವರೆಗೆ, ಮತ್ತು ಹೃದಯ ಕಸಿಗೆ 10ರಿಂದ 30 ಲಕ್ಷ ರು.ವರೆಗೆ ತಗಲುತ್ತದೆ. ಈ ವಿಷಯ ಕೇಳಿಯೇ ಬಡಜನರು ಹಿಂದೆ ಸರಿಯುತ್ತಾರೆ. ಜೀವನ ಮುಗಿದರೂ ತೊಂದರೆಯಿಲ್ಲ ಎಂದು ಚಿಕಿತ್ಸೆಯಿಂದ ಹಿಂಜರಿಯುತ್ತಾರೆ ಎಂಬುದು ರೀನಾ ಅವರ ಕಳಕಳಿ.

ಅಂಗಾಂಗ ಕಸಿಗೆ ಕಾಯುತ್ತಿರುವ ರೋಗಿಗಳು

ಅಂಗಾಂಗ ಕಸಿಗೆ ಕಾಯುತ್ತಿರುವ ರೋಗಿಗಳು

ಈ ಕಾರಣದಿಂದಾಗಿ ಚೆನ್ನೈ ಮತ್ತು ದೆಹಲಿಯಲ್ಲಿ ಈ ಅಮೂಲ್ಯ ಅಂಗಾಂಗಗಳು ಮರುಜೋಡಣೆಯಾಗದೆ ವ್ಯರ್ಥವಾಗುತ್ತಿವೆ. ಒಂದು ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿಯೇ 21 ರೋಗಿಗಳು ಹೃದಯ, 10 ರೋಗಿಗಳು ಪುಪ್ಪುಸ ಮತ್ತು 7 ರೋಗಿಗಳು ಹೃದಯ ಮತ್ತು ಪುಪ್ಪುಸ ಎರಡರ ಅಂಗಾಗ ಕಸಿಗಾಗಿ ಕಾಯುತ್ತಿದ್ದಾರೆ. ಆದರೆ, ಹಣದ ಮತ್ತು ಅರಿವಿನ ಕೊರತೆಯಿಂದಾಗಿ ಮರುಜೋಡಣೆಯಾದೆ ಬಳಲುತ್ತಿದ್ದಾರೆ.

ದುಬಾರಿ ಮಾತ್ರೆ, ರೋಗಿಗಳ ನಿರ್ಲಕ್ಷ್ಯ

ದುಬಾರಿ ಮಾತ್ರೆ, ರೋಗಿಗಳ ನಿರ್ಲಕ್ಷ್ಯ

ಇದರ ಹೊರತಾಗಿ, ಅಂಗಾಂಗ ಕಸಿ ಮಾಡಿಸಿಕೊಂಡರೂ ಮುಂದಿನ ಜೀವನಶೈಲಿ ಹೇಗೆ ಬದಲಿಸಿಕೊಳ್ಳಬೇಕು ಎಂಬುದನ್ನು ತಿಳಿಯದೆ ಸಾವಿಗೀಡಾಗುತ್ತಿದ್ದಾರೆ. ಈ ರೋಗಿಗಳಿಗೆ ಬೇರೆಬೇರೆ ರೋಗಗಳಿಗೆ ಅನುಗುಣವಾಗಿ ಪ್ರತಿ ತಿಂಗಳು 8ರಿಂದ 25 ಸಾವಿರ ರು. ತಗಲುತ್ತದೆ. ಇಷ್ಟು ಯಾರು ಖರ್ಚು ಮಾಡುತ್ತಾರೆ ಎಂದು ತಾವೇ ನಿರ್ಧರಿಸಿ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿದ್ದಾರೆ ಎಂಬುದು ರೀನಾ ಅವರ ಕಾಳಜಿ.

ಸರಕಾರದ ಕದವನ್ನು ತಟ್ಟದ ರೀನಾ

ಸರಕಾರದ ಕದವನ್ನು ತಟ್ಟದ ರೀನಾ

ತಮ್ಮ ಈ ಕೈಂಕರ್ಯಕ್ಕಾಗಿ ಅವರು ಸರಕಾರದ ಕದವನ್ನು ತಟ್ಟಿಲ್ಲ. ತಾವೇ ಸ್ವತಃ ನಿಂತು, ಲೈಟ್ ಎ ಲೈಫ್ - ರೀನಾ ರಾಜು ಫೌಂಡೇಷನ್ ಮುಖಾಂತರ ವಿವಿಧ ಕಾರ್ಯಕ್ರಮಗಳನ್ನು ನೀಡುವ ಮುಖಾಂತರ ಹಣವನ್ನು ಸಂಗ್ರಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಬಡಜನತೆ ಚಿಕಿತ್ಸೆ ಇಲ್ಲದೆ ಬಳಲಬಾರದು, ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಹಣಕಾಸಿನ ಅರಿವಿದೆ ಎಂಬ ಸಂದೇಶವನ್ನು ಅವರು ಮಾಧ್ಯಮದ ಮೂಲಕ ರವಾನಿಸಿದ್ದಾರೆ.

ರೀನಾ ಹೆಗಲಿಗೆ ಹೆಗಲಾಗಿ ನಿಂತ ತಂಡ

ರೀನಾ ಹೆಗಲಿಗೆ ಹೆಗಲಾಗಿ ನಿಂತ ತಂಡ

ಅಂದ ಹಾಗೆ, ರೀನಾ ರಾಜುವಿನಲ್ಲಿ ಒಬ್ಬ ಅಪರೂಪದ ಕಲಾವಿದೆ ಇದ್ದಾಳೆ. ಶುಶ್ರಾವ್ಯವಾಗಿ ಹಾಡುವ ರೀನಾ ಅವರ 'ಬಾಳು ಬೆಳಗಿಸಿ' ಎಂಬ ಹಾಡು ಯುಟ್ಯೂಬ್ ನಲ್ಲಿ ಜನಪ್ರಿಯವಾಗಿದೆ. ರೀನಾ ರಾಜು ಅವರ ಅವಳಿ ತಂಗಿ ರೂಪಾ ರಾಜು, ಸ್ನೇಹಿತೆ ಮೀತಾ ಆಸ್ತಾನಾ ಮತ್ತು ಸಂಗೀತ ನಿರ್ದೇಶಕ ರಾಜ್ ಅವರು ರೀನಾ ಅವರ ಎಲ್ಲ ಕಾರ್ಯಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ.

ರೀನಾ ಹೃದಯ ಕದ್ದ ರಾಜ್

ರೀನಾ ಹೃದಯ ಕದ್ದ ರಾಜ್

ಬಡವರಿಗಾಗಿ ಮಿಡಿಯುತ್ತಿರುವ ರೀನಾ ಅವರ ಹೃದಯವನ್ನು ಕದ್ದವರು, ಯೋಗರಾಜ್ ಭಟ್ ನಿರ್ದೇಶನದ ಕನ್ನಡ ಚಿತ್ರ 'ಮಣಿ' ಚಿತ್ರಕ್ಕಾಗಿ ಸಂಗೀತ ನಿರ್ದೇಶನ ಮಾಡಿದ ರಾಜ್. ಸದ್ಯದಲ್ಲಿಯೇ ರೀನಾ ಮತ್ತು ರಾಜ್ ಹೃದಯಗಳು ಮಾತ್ರವಲ್ಲ ಮನಸುಗಳು ಕೂಡ ಬೆಸೆಯುತ್ತಿವೆ. ಅವರು ಸತಿಪತಿಗಳಾಗಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ರೀನಾ ರಾಜು ಅಂಥ ಯುವತಿಯನ್ನು ಮದುವೆಯಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ರಾಜ್ ಅವರು ಅಭಿಮಾನದಿಂದ ಹೇಳುತ್ತಾರೆ.

ರೀನಾ ರಾಜು ಸಂಪರ್ಕ

ರೀನಾ ರಾಜು ಸಂಪರ್ಕ

ಲೈಟ್ ಎ ಲೈಫ್ - ರೀನಾ ರಾಜು ಫೌಂಡೇಷನ್

ಮೊಬೈಲ್ : +91 99005 65762

ರೀನಾ : +91 97390 99296, +91 96203 36633

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hats off to Reena Raju, 1st Heart transplant lady of Karnataka, on the occasion of completing four years post her heart transplant. She had called for press conference at Press Club, Bangalore on 19th November to share her experience. Through Reena Raju Foundation she is helping the patients with heart and kidney transplantation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more