ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ; ಕಾರಿಡಾರ್-4 ವಿಳಂಬ?
ಬೆಂಗಳೂರು, ಜನವರಿ 15: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಭರವಸೆ ಹುಟ್ಟುಹಾಕಿರುವ ಬೆಂಗಳೂರು ನಗರದ ಉಪ ನಗರ ರೈಲು (ಸಬ್-ಅರ್ಬನ್) ಯೋಜನೆ ಕಾಮಗಾರಿ ನಡೆಯುತ್ತಿದೆ. ಒಟ್ಟು 4 ಕಾರಿಡಾರ್ ಆಗಿ ಯೋಜನೆಯನ್ನು ವಿಭಾಗ ಮಾಡಿ ಕಾಮಗಾರಿ ಕೈಗೊಳ್ಳಲಾಗಿದೆ.
ಈ ಸಬ್-ಅರ್ಬನ್ ರೈಲು ಯೋಜನೆಯನ್ನು ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ 4ನೇ ಕಾರಿಡಾರ್‌ಗೆ 'ಕನಕ' ಎಂದು ಹೆಸರು ಇಡಲಾಗಿದೆ.

ಕೆಲವು ದಿನಗಳ ಹಿಂದೆ 'ಕನಕ' ಕಾರಿಡಾರ್‌ನ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಟೆಂಡರ್ ನೀಡುವಾಗ 30 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಷರತ್ತು ಹಾಕಲಾಗಿದೆ. ಆದರೆ ಈಗ ಕಾಮಗಾರಿ ವಿಳಂಬವಾಗುವ ಸೂಚನೆ ಸಿಕ್ಕಿದೆ.
ಭೂಮಿ ಹಸ್ತಾಂತರವಾಗಬೇಕು: ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ 4 ಕಾರಿಡಾರ್‌ಗಳ ಪೈಕಿ 2ನೇ ಕಾರಿಡಾರ್ (ಚಿಕ್ಕಬಣಾವರ-ಬೈಯಪ್ಪನಹಳ್ಳಿ) ಕಾಮಗಾರಿ ಮಾತ್ರ ನಡೆಯುತ್ತಿದೆ. ಕಾರಿಡಾರ್-4 ಕನಕ ಮಾರ್ಗದ ಟೆಂಡರ್ ಡಿಸೆಂಬರ್ 2023ರಲ್ಲಿ ಎಲ್ & ಟಿ ಕಂಪನಿ ಪಡೆದುಕೊಂಡಿದೆ.
ಈ 'ಕನಕ' ಮಾರ್ಗದ ಕಾಮಗಾರಿಯನ್ನು ಆರಂಭಿಸಲು ಟೆಂಡರ್ ಪಡೆದ ಕಂಪನಿಗೆ ಭೂಮಿ ಹಸ್ತಾಂತರ ಸಮಸ್ಯೆ ಉಂಟಾಗಿದೆ. ಕಾಮಗಾರಿಗೆ ಅಗತ್ಯವಿರುವ ಶೇ 85ರಷ್ಟು ಜಮೀನು ರೈಲ್ವೆ ಹಳಿಗೆ ಹೊಂದಿಕೊಂಡಿದೆ. ಈ ಭೂಮಿಯನ್ನು ನೈಋತ್ಯ ರೈಲ್ವೆ ಹಸ್ತಾಂತರ ಮಾಡಬೇಕಿದೆ. ಉಳಿದ ಶೇ 15ರಷ್ಟು ಖಾಸಗಿ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕೆ-ರೈಡ್ ಸ್ವಾಧೀನಪಡಿಸಿಕೊಳ್ಳಬೇಕು.
ಕಾರಿಡಾರ್-4 'ಕನಕ' ಹೀಲಲಿಗೆ-ರಾಜನಕುಂಟೆ ನಡುವೆ ನಿರ್ಮಾಣವಾಗುತ್ತಿದೆ. ಯೋಜನೆಯಡಿ 9 ಕಿ. ಮೀ. ಎತ್ತರಿಸಿದ ಮಾರ್ಗ ಮತ್ತು 38 ಕಿ. ಮೀ. ನೆಲಮಟ್ಟದ ಮಾರ್ಗ ನಿರ್ಮಾಣಗೊಳ್ಳಲಿದೆ. ನೈಋತ್ಯ ರೈಲ್ವೆ ಕಾಮಗಾರಿಗೆ ಅಗತ್ಯವಾದ 193 ಎಕರೆ ಭೂಮಿಯನ್ನು ಕೆ-ರೈಡ್‌ಗೆ ಹಸ್ತಾಂತರ ಮಾಡಬೇಕು, ಬಳಿಕ ಆ ಭೂಮಿ ಟೆಂಡರ್ ಪಡೆದ ಎಲ್ & ಟಿಗೆ ಹಸ್ತಾಂತರವಾಗಲಿದೆ.
2023ರ ಡಿಸೆಂಬರ್ ಅಂತ್ಯಕ್ಕೆ 'ಕನಕ' ಮಾರ್ಗದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತು. ಬಳಿಕ ಎರಡು ವಾರದಲ್ಲಿ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಹೇಳಿತ್ತು. ಆದರೆ ಈಗ ಭೂಮಿ ಹಸ್ತಾಂತರ ವಿಳಂಬವಾಗುತ್ತಿದೆ. ಆದ್ದರಿಂದ ಟೆಂಡರ್ ಷರತ್ತಿನ ಅನ್ವಯ ಕಾಮಗಾರಿ 30 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.
ಎಲ್ & ಟಿ ಕಂಪನಿ 'ಕನಕ' ಕಾರಿಡಾರ್ ನಿರ್ಮಾಣಕ್ಕೆ 1040.51 ಕೋಟಿ ರೂ.ಗಳಿಗೆ ಟೆಂಡರ್ ಪಡೆದಿದೆ. ಈ ಮಾರ್ಗದಲ್ಲಿ ಬರುವ ನಿಲ್ದಾಣಗಳ ನಿರ್ಮಾಣಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತದೆ. ಕಾರಿಡಾರ್-2 ಟೆಂಡರ್ ಸಹ ಇದೇ ಕಂಪನಿ ಪಡೆದಿದ್ದು, ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಆದರೆ 4ನೇ ಕಾರಿಡಾರ್‌ಗೆ ಭೂಮಿಯೇ ಕಂಟಕವಾಗಿದೆ.
ಬೆಂಗಳೂರು ರೈಲು ವಿಭಾಗದ ಅಧಿಕಾರಿಗಳು ಭೂಮಿ ಹಸ್ತಾಂತರ ವಿಳಂಬವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಕಾರಿಡಾರ್-4 ನಿರ್ಮಾಣಕ್ಕೆ ಕೆ-ರೈಡ್ ಹೆಚ್ಚುವರಿ ಭೂಮಿಯ ಪ್ರಸ್ತಾವನೆ ಇಟ್ಟಿದೆ. ಮತ್ತೆ ಅಲೈನ್‌ಮೆಂಟ್ ವರದಿ ನೀಡಲು ಸೂಚಿಸಲಾಗಿತ್ತು, ವರದಿ ಸಲ್ಲಿಕೆಯಾಗಿದೆ. ಪರಿಶೀಲನೆ ನಡೆಸಿ ನೈಋತ್ಯ ರೈಲ್ವೆಯಿಂದ ಶೀಘ್ರವೇ ಭೂಮಿ ಹಸ್ತಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಲ್ದಾಣಗಳು; 'ಕನಕ' ಕಾರಿಡಾರ್‌ನಲ್ಲಿ ರಾಜನಕುಂಟೆ, ಮುದ್ದನಹಳ್ಳಿ, ಯಲಹಂಕ, ಜಕ್ಕೂರು, ಹೆಗಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ, ಕಗ್ಗದಾಸಪುರ, ಮಾರತ್ತಹಳ್ಳಿ, ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಅಂಬೇಡ್ಕರ್ ನಗರ, ಹುಸ್ಕೂರು, ಸಿಂಗೇನ ಅಗ್ರಹಾರ, ಬೊಮ್ಮಸಂದ್ರ ಮತ್ತು ಹೀಲಲಿಗೆ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.












Click it and Unblock the Notifications