ಬೆಂಗಳೂರು; ಬೈಕ್ ವೀಲ್ಹಿಂಗ್ ಮಾಡಿದರೆ ಲೈಸೆನ್ಸ್ ರದ್ದು
ಬೆಂಗಳೂರು, ಜುಲೈ 18; ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್ ವೀಲ್ಹಿಂಗ್ ಮಾಡುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ವೀಲ್ಹಿಂಗ್ ಮಾಡುವಾಗ ಅಪಘಾತವಾಗಿ ಗಾಯಗೊಂಡರೂ ಸಹ ಬುದ್ಧಿ ಕಲಿಯುತ್ತಿಲ್ಲ. ಈಗ ಸಂಚಾರಿ ಪೊಲೀಸರಿಗೆ ಬೈಕ್ ವೀಲ್ಹಿಂಗ್‌ಗೆ ಬ್ರೇಕ್ ಹಾಕಿ ಎಂದು ಖಡಕ್ ಸೂಚನೆ ನೀಡಲಾಗಿದೆ.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಂಚಾರ ಮತ್ತು ರಸ್ತೆ ಸುರಕ್ಷತೆ ಅಲೋಕ್ ಕುಮಾರ್ ಈ ಕುರಿತು ಪೊಲೀಸರಿಗೆ ಜ್ಞಾಪನಾ ಪತ್ರವನ್ನು ಬರೆದಿದ್ದಾರೆ. ವಾಹನ ಸವಾರರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುವುದು ಹಾಗೂ ನಿಷ್ಪಕ್ಷವಾಗಿ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

ಯುವಕರು ಅಪಾಯಕಾರಿ ಬೈಕ್ ವೀಲ್ಹಿಂಗ್ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕುತ್ತಿದ್ದಾರೆ. ವಾಹನ ಸವಾರರ ವಿಡಿಯೋ ಅಥವಾ ಪೋಸ್ಟ್‌ಗಳ ಬಗ್ಗೆ ಎಲ್ಲಾ ಘಟಕಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲು ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.
ಪತ್ರದಲ್ಲಿ ಏನಿದೆ?; ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಘಟಕಗಳಲ್ಲಿ ಅದರಲ್ಲೂ ಬೆಂಗಳೂರು ನಗರದ ಹೊರವಲಯದ ರಿಂಗ್ ರಸ್ತೆ, ನೈಸ್ ರಸ್ತೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಹೊಸಕೋಟೆ ರಸ್ತೆ, ಬೆಳಗಾವಿ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ, ಮೈಸೂರಿನ ರಿಂಗ್ ರಸ್ತೆಗಳಲ್ಲಿ ಕೆಲವು ವಾಹನ ಸವಾರರು ಬೈಕ್ ವೀಲ್ಹಿಂಗ್ ಮಾಡುತ್ತಿರುವುದು ಕಂಡು ಬಂದಿದೆ.
ಈ ಸಂಬಂಧ ವಾಹನ ಸವಾರರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುವುದು ಎಂದು ತಿಳಿಸಲಾಗಿದೆ. ಬೈಕ್ ವೀಲ್ಹಿಂಗ್ ಮಾಡುವ ವಾಹನ ಸವಾರರ ವಿರುದ್ಧ ಕಲಂ 279 ಐಪಿಸಿ ಮತ್ತು ಕಲಂ 184, 189 ಅಡಿ ಕ್ರಮ ತೆಗೆದುಕೊಳ್ಳುವುದು ಎಂದು ವಿವರಣೆ ನೀಡಲಾಗಿದೆ.
ಬೈಕ್ ವೀಲ್ಹಿಂಗ್ ಮಾಡುವವರ ಚಾಲನ ಪರವಾನಗಿಯನ್ನು ಅಮಾನತ್ತುಗೊಳಿಸಲು ಅಥವಾ ಈ ಸಂಚಾರ ನಿಯಮ ಉಲ್ಲಂಘನೆಯನ್ನು ಪದೇ ಪದೇ ಮಾಡುತ್ತಿದ್ದರೆ ವಾಹನ ಸವಾರರ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚನೆ ಕೊಡಲಾಗಿದೆ.
ಬೆಂಗಳೂರು ನಗರದಲ್ಲಿ ಬೈಕ್ ವೀಲ್ಹಿಂಗ್ ಮಾಡುವ ವಾಹನ ಸವಾರರ ವಿರುದ್ಧ ಜಂಟಿ ಪೊಲೀಸ್ ಆಯುಕ್ತರು, ಸಂಚಾರ ಬೆಂಗಳೂರು ನಗರ ಇವರು ಕಠಿಣ ಕ್ರಮ ತೆಗೆದುಕೊಂಡು, ಇಂತಹ ಪಕರಣಗಳನ್ನುಕಡಿವಾಣ ಹಾಕಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಮೈಸೂರು ನಗರದಲ್ಲಿಯೂ ಬೈಕ್ ವೀಲ್ಹಿಂಗ್ ವಿರುದ್ಧ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ನರಸಿಂಹರಾಜ ಸಂಚಾರ ಠಾಣಾ ವ್ಯಾಪ್ತಿಯ ರಿಂಗ್ ರಸ್ತೆ ಮತ್ತು ನಗರ ಒಳಭಾಗದ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಬೈಕ್ ಪತ್ತೆ ಮಾಡಿ ವಾಹನ ಸವಾರನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications