ಎಸ್‌ಟಿ ಮೀಸಲಾತಿ ಹೆಚ್ಚಿಸುವ ಪ್ರಸನ್ನಾನಂದ ಶ್ರೀಗಳ ಹೋರಾಟಕ್ಕೆ ಎಸ್ ಆರ್ ನವಲಿ ಹಿರೇಮಠ್ ಬೆಂಬಲ
ಬೆಂಗಳೂರು, ಮಾರ್ಚ್ 13: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಯವರು ನಡೆಸುತ್ತಿರುವ ಹೋರಾಟ 32ನೇ ದಿನಕ್ಕೆ ಕಾಲಿಟ್ಟಿದೆ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 32 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪ್ರಸನ್ನಾನಂದ ಮಹಾಸ್ವಾಮಿಯವರ ಹೋರಾಟಕ್ಕೆ ಸಮಾಜ ಸೇವಕ ಎಸ್ ಆರ್ ನವಲಿ ಹಿರೇಮಠ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡಾ 7.5ಕ್ಕೆ ಏರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ಪಂದಿಸಬೇಕು ಎಂದು ಎಸ್ ಆರ್ ನವಲಿ ಹಿರೇಮಠ್ ಆಗ್ರಹಿಸಿದ್ದಾರೆ.

ಮೀಸಲಾತಿ ಪ್ರಮಾಣ ಹೆಚ್ಚಿಸಲು ಒತ್ತಾಯ:
ಕರ್ನಾಟಕದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಮೀಸಲಾತಿಯ ಪ್ರಮಾಣವೂ ಹೆಚ್ಚಾಗಬೇಕು. ಇದರ ಮಧ್ಯೆ ರಾಜ್ಯ ಸರ್ಕಾರ ಎಸ್.ಟಿ ಪಟ್ಟಿಗೆ ಹಲವಾರು ಜಾತಿಗಳನ್ನು ಸೇರ್ಪಡೆಗೊಳಿಸಿದೆ. ಹೊಸ ಜಾತಿ ಸೇರ್ಪಡೆಗೊಳಿಸಿದ ರೀತಿಯಲ್ಲೇ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕಾಗಿತ್ತು. ಆದರೆ, ಅದನ್ನು ಮಾಡದಂತಹ ಸರ್ಕಾರ ಎಸ್.ಟಿ ಮೀಸಲಾತಿಯ ಮೇಲೆ ಒತ್ತಡವನ್ನು ಹೆಚ್ಚಿಸಿದೆ ಎಂದು ಎಸ್ ಆರ್ ನವಲಿ ಹಿರೇಮಠ್ ಆರೋಪಿಸಿದ್ದಾರೆ.
ಪ್ರಸನ್ನಾನಂದ ಸ್ವಾಮಿಯವರ ಹೋರಾಟಕ್ಕೆ ಬೆಂಬಲ:
ಪರಿಶಿಷ್ಟ ಪಂಗಡದವರ ಮೇಲಿನ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ. ವಾಲ್ಮೀಕಿ ರಾಜನಹಳ್ಳಿ ಪೀಠದ ಪ್ರಸನ್ನಾನಂದ ಮಹಾಸ್ವಾಮಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಪ್ರಮುಖ ಬೇಡಿಕೆ ಆಗಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.












Click it and Unblock the Notifications