'ಕ್ಷೌರಿಕರ ಕುರಿತ ನಿಂದನಾತ್ಮಕ ಪದ' ಬಳಕೆಗೆ ಶಿವರಾಜ್ ತಂಗಡಗಿ ಆಕ್ಷೇಪ, ವಿಶೇಷ ಕಾನೂನು ತರಲು ಚಿಂತನೆ
ಬೆಂಗಳೂರು: ಮನುಷ್ಯನ ಹುಟ್ಟಿನಿಂದ ಜಾತಿ ಬಂದಿಲ್ಲ, ವೃತ್ತಿಯಿಂದ ಜಾತಿ ಬಂದಿದೆ. ಸವಿತಾ ಸಮಾಜದವರನ್ನು ಕೀಳು ಭಾವನೆಯಿಂದ ನೋಡುವ ಪರಿಸ್ಥಿತಿಯನ್ನು, ಅವರ ಕುರಿತು ನಿಂದನಾತ್ಮಕ ಪದ (ಹಜಾಮ) ಬಳಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ .ಎಸ್.ತಂಗಡಗಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೌರಿಕ ವೃತ್ತಿ ಮಾಡುವ ಸವಿತಾ ಸಮಾಜದ ಬಂಧುಗಳನ್ನು ಕೆಲವೆಡೆ 'ಹಜಾಮ' ಎಂಬ ಕೀಳುಮಟ್ಟದ ಪದ ಬಳಸುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಪದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವಿಶೇಷ ಕಾನೂನು ತರುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗುವುದು. ಅಗತ್ಯ ಬಿದ್ದರೆ ನಿಮ್ಮ ಸಮಾಜದ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆದೊಯ್ಯಲಾಗುವುದು ಎಂದು ತಿಳಿಸಿದರು.

ಸಾಮಾಜಿಕ ಸಮಾನತೆ ಸಾರಬೇಕಿದೆ
ಸಮಾಜದಲ್ಲಿರುವ ಕೀಳು ಭಾವನೆಯನ್ನು ತೊಡೆದು ಹಾಕಿ, ಸಾಮಾಜಿಕ ಸಮಾನತೆಯನ್ನು ಸಾರುವ ಅಗತ್ಯವಿದೆ. ಹುಟ್ಟುವಾಗ ಯಾರು ಕೂಡ ಜಾತಿಯ ಸೀಲ್ ಹಾಕಿಕೊಂಡು ಹುಟ್ಟಿಲ್ಲ. ನಾನು ಕೂಡ ಸಣ್ಣ ಸಮುದಾಯದಿಂದಲೇ ಬಂದಿರುವುದು. ಕೀಳು ಮಟ್ಟದಿಂದ ಕರೆಯುವವರಿಗೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಸವಿತಾ ಸಮುದಾಯದವರು ಒಗ್ಗಟ್ಟಿನಿಂದ ಮುನ್ನಡೆಯ ಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಅಗತ್ಯವಿದೆ ಎಂದು ಹೇಳಿರುವುದು ಛಲವಾದಿ ಸಮುದಾಯಕ್ಕೆ ಮಾತ್ರವಲ್ಲ. ಪ್ರತಿಯೊಂದು ಶೋಷಿತ ಸಮುದಾಯದವರು ಎಚ್ಚರಗೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಆ ನಿಟ್ಟಿನಲ್ಲಿ ಸವಿತಾ ಸಮುದಾಯದವರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಲಹೆ ಕೊಟ್ಟರು.
ಸವಿತಾ ಸಮಾಜದ ಕೊಡುಗೆ ಅಪಾರ
ಸಮಾಜ ತಮ್ಮನ್ನು ಎಷ್ಟೇ ಕಡೆಗಣಿಸಿದರೂ ಅವೆಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಂಡು, ಸಂಗೀತದ ಮೂಲಕ ತಮ್ಮೆಲ್ಲ ನೋವುಗಳನ್ನು ಮರೆಯುತ್ತದೆ ಈ ಸಮುದಾಯ. ಇಂದಿಗೂ ಮಂಗಳವಾದ್ಯವಿಲ್ಲದೆ, ಚೌಲಕರ್ಮವಿಲ್ಲದೆ ಯಾವ ಶುಭ ಕಾರ್ಯಗಳು ಪ್ರಾರಂಭವಾಗುವುದೇ ಇಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಸವಿತಾ ಜನಾಂಗದವರ ಕೊಡುಗೆ ಅಪಾರ. ಇಂತಹ ತ್ಯಾಗಜೀವಿಗಳ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಶ್ರೀ ಸವಿತಾ ಮಹರ್ಷಿಯವರನ್ನು ಗೌರವಿಸುವ ಈ ಸಂದರ್ಭ ಅವಿಸ್ಮರಣೀಯ ಎಂದು ತಿಳಿಸಿದರು.
ಸವಿತಾ ಮಹರ್ಷಿಗಳು ತಮ್ಮ ಕಾಯಕವನ್ನು ಮಾಡುತ್ತಲೇ ಅಧ್ಯಯನವನ್ನು ಮುಂದುವರೆಸಿ, ಮಹಾ ಜ್ಞಾನಿಗಳಾದರು. ಅವರ ಈ ನಡೆ ನಮಗೆಲ್ಲ ಮಾದರಿಯಾಗಬೇಕು ಎಂದರು.












Click it and Unblock the Notifications