'ನಮ್ಮ ಮೆಟ್ರೋ' ಟ್ರ್ಯಾಕ್ ಮೇಲೆ ಮರದ ಕೊಂಬೆ ಬಿದ್ದಲ್ಲಿ ತುರ್ತು ಸ್ಪಂದನೆ: BMRCL
ಬೆಂಗಳೂರು, ಜೂನ್ 07: ಮಳೆಗಾಲ ಆರಂಭವಾಗಿದ್ದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಭಾರೀ ಮಳೆ ಆಗುತ್ತಿದೆ. ಬೆಂಗಳೂರಿನಲ್ಲಿ ಕೆಲವೇ ನಿಮಿಷಗಳ ಮಳೆಗೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಈ ಪೈಕಿ ಮೊನ್ನೆಯಷ್ಟೇ ಜೋರು ಗಾಳಿಗೆ ನಮ್ಮ ಮೆಟ್ರೋ ಹಳಿಗೆ ಮೇಲೆ ಮರದ ಕೊಂಬೆ ಅಡ್ಡಲಾಗಿ ಬಿದ್ದಿತ್ತು. ಇದನ್ನು ತ್ವರಿತಗತಿಯಲ್ಲಿ ತೆರವುಗೊಳಿಸುವಲ್ಲಿ BMRCL ಯಶಸ್ವಿಯಾಯಿತು.
ಬೆಂಗಳೂರು ಮೆಟ್ರೋ ರೈಲು ನಿಗಮವು ಮೆಟ್ರೋ ಹಳಿಯ ಮೇಲೆ ಬಿದ್ದಿದ್ದ ಮರದ ಕೊಂಬೆಯನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ವಿಶೇಷ ಉಪಕರಣವೊಂದನ್ನು ಬಳಕೆ ಮಾಡಿದೆ. ಮರ, ಮರದ ಕೊಂಬೆಗಳು ಹಳಿಗೆ ಅಡ್ಡಲಾಗಿ ಬೀಳುತ್ತಿದ್ದಂತೆ ಅವುಗಳ ತೆರವಿಗೆ ಈ ಉಪಕರಣ ನಿಯೋಜಿಸಲಾಗುವುದು ಎಂದು ಇತ್ತೀಚೆಗೆ ತಿಳಿಸಿತ್ತು.

ತುರ್ತು ಪ್ರೊಟೋಕಾಲ್ ಸಕ್ರಿಯೆಗೊಳಿಸಿದ BMRCL
ಮರದ ಕೊಂಬೆ ತೆರವುಗೊಳಿಸುತ್ತಿದ್ದಂತೆ ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಯಿತು. ಅಲ್ಲದೇ ಮರ ಬಿದ್ದ ಮಹಾತ್ಮಾ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಇಂದಿರಾನಗರದ ವರೆಗಿನ ಪ್ರದೇಶವರೆಗೆ ತುರ್ತು ಪ್ರೊಟೋಕಾಲ್ ಸಕ್ರಿಯಗೊಳಿಸಲಾಯಿತು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಇನ್ನೂ ನಾಲ್ಕು ತಿಂಗಳ ಸುದೀರ್ಘ ಮಳೆಯನ್ನು ಎದುರಿಸಲಿದೆ. ಈ ವೇಳೆಯಲ್ಲಿ ಮತ್ತೆ ಮರದ ಕೊಂಬೆಗಳು ಹೀಗೆ ಅಚಾನಕ್ಕಾಗಿ ಬಿದ್ದಲ್ಲಿ ಅವುಗಳ ತೆರವಿಗೆ ಇದೇ ವಿಶೇಷ ಉಪಕರಣ ಬಳಸಲಿದೆ. ಇದರಿಂದ ನಮ್ಮ ಮೆಟ್ರೋ ಹಸಿರು, ಇಲ್ಲವೇ ನೇರಳೆ ಮಾರ್ಗದಲ್ಲಿ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳಲಿದೆ. ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಬಿಎಂಆರ್‌ಸಿಎಲ್ ಕ್ರಮ ಕೈಗೊಳ್ಳಲಿದೆ.

ಮೆಟ್ರೋ ಸೇವೆ ಕೆಲ ಕಾಲ ವ್ಯತ್ಯಯ
ಕಳೆದ ಭಾನುವಾರ ಜೋರು ಗಾಳಿ ಸಮೇತವಾಗಿ ನಗರದಲ್ಲಿ ಭರ್ಜರಿ ಮಳೆ ಆಗಿತ್ತು. ಸಂಜೆಯಿಂದ ತಡರಾತ್ರಿವರೆಗೆ ಧಾರಾಕಾರ ಮಳೆ ಆಗಿತ್ತು. ಈ ವೇಳೆ ಭಾನುವಾರ ಸಂಜೆ ಭಾರೀ ಮಳೆಗೆ ಟ್ರಿನಿಟಿ ಮತ್ತು ಎಂಜಿ ರಸ್ತೆ ನಿಲ್ದಾಣಗಳ ನಡುವಿನ ಹಳಿಗಳ ಮೇಲೆ ದೊಡ್ಡ ಮರದ ಬೃಹತ್ ಕೊಂಬೆ ಹಳಿ ಮೇಲೆ ಬಿದ್ದಿತ್ತು.
ಇದರಿಂದ ನೇರಳೆ ಮಾರ್ಗದ ಎಂಜಿ ರಸ್ತೆ ಮತ್ತು ಇಂದಿರಾನಗರ ಮಧ್ಯದ ಸೇವೆಗೆ ಅಡ್ಡಿಪಡಿಸಿತು. ಜನರ ಸುರಕ್ಷತಾ ದೃಷ್ಟಿಯಿಂದ ಕೂಡಲೇ ಈ ಎರಡು ನಿಲ್ದಾಣಗಳ ಮಧ್ಯೆದ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಯಿತು. ನಂತರ ಕೆಲವು ಗಂಟೆಗಳ ಬಳಿಕ ಮತ್ತೆ ಸೇವೆ ಆರಂಭಿಸಲಾಯಿತು.
ಈ ವೇಳೆ ನಮ್ಮ ಮೆಟ್ರೋ ಜೊತೆಗೆ ರಾಜ್ಯ ವಿಪತ್ತು ರಕ್ಷಣಾ ಪಡೆ-ಕರ್ನಾಟಕ, ಬಿಬಿಎಂಪಿ ಮತ್ತು ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಗಳು ತುರ್ತಾಗಿ ಸ್ಪಂದಿಸಿದವು. ಈ ಎಲ್ಲ ಸಂಸ್ಥೆಗಳು ಮತ್ತು ಸಿಬ್ಬಂದಿಗೆ BMRCL ವಿಶೇಷ ಧನ್ಯವಾದ ಸಹ ತಿಳಿಸಿತು.












Click it and Unblock the Notifications