ಬೆಂಗಳೂರಿಗೆ ಸರಕು ಸಾಗಣೆ; ನೈಋತ್ಯ ರೈಲ್ವೆ ದಿಟ್ಟ ಹೆಜ್ಜೆ
ಬೆಂಗಳೂರು, ಡಿಸೆಂಬರ್ 20 : ನೈಋತ್ಯ ರೈಲ್ವೆ ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ರೋರೊ ಸೇವೆಯನ್ನು ಆರಂಭಿಸುತ್ತಿದೆ. ನಗರದ ಹೊರವಲಯದ ನೆಲಮಂಗಲ ರೈಲು ನಿಲ್ದಾಣವನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ರೋಲ್ ಆನ್ ರೋಲ್ ಆಫ್ ರೈಲಿನ ಮೇಲೆ ಗೂಡ್ಸ್ ಲಾರಿಗಳನ್ನು ಸಾಗಣೆ ಮಾಡುವ ಸೇವೆ ಕೊಂಕಣ ರೈಲ್ವೆಯಲ್ಲಿ ಪ್ರಸಿದ್ಧ ಪಡೆದಿದೆ. ಸುಮಾರು 13 ವರ್ಷಗಳ ಹಿಂದೆ ಆರಂಭಿಸಿದ ಈ ಸೇವೆಗೆ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.
ಸಮೀಕ್ಷೆಗಳ ಬಳಿಕ ನೈಋತ್ಯ ರೈಲ್ವೆ ಬೆಂಗಳೂರಲ್ಲಿ ರೋರೊ ಸೇವೆಯನ್ನು ಆರಂಭಿಸುತ್ತಿದೆ. ನೆಲಮಂಗಲದಿಂದ ಮಹಾರಾಷ್ಟ್ರ ರಾಜ್ಯದ ಗಡಿ ಭಾಗದ ಸೊಲ್ಹಾಪುರದ ತನಕ ರೋರೊ ಸೇವೆ ನೀಡಲು ರೈಲ್ವೆ ಸಮೀಕ್ಷೆ ನಡೆಸಿದೆ.

ನೆಲಮಂಗಲ ರೈಲು ನಿಲ್ದಾಣ ನಗರದ ಹೊರವಲಯದಲ್ಲಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಿಲ್ದಾಣದ ಸಮೀಪ ಎಪಿಎಂಸಿ ಇದೆ. ನೂರಾರು ಲಾರಿಗಳನ್ನು ನಿಲ್ಲಿಸಲು ಅಗತ್ಯವಾದ ಸ್ಥಳಾವಕಾಶವಿದೆ.
ನೆಲಮಂಗಲ-ಸೊಲ್ಹಾಪುರ ನಡುವಿನ ಸುಮಾರು 600 ಕಿ. ಮೀ. ರೋರೊ ಸೇವೆ ಆರಂಭವಾದರೆ ಉತ್ತರ ಕರ್ನಾಟಕ ಮತ್ತು ಬೆಂಗಳೂರು ನಡುವೆ ಸರಕು ಸಾಗಣೆಯಲ್ಲಿ ಸಮಯದ ಉಳಿತಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಒಂದು ರೈಲು ಬೋಗಿಯ ಪ್ರದೇಶದಲ್ಲಿ 25 ಲಾರಿಗಳನ್ನು ಸಾಗಣೆ ಮಾಡಬಹುದಾಗಿದೆ. ನೆಲಮಂಗಲದಿಂದ ಹೊರಡುವ ರೋರೊ ರೈಲು ಯಲಹಂಕ, ಗುಂತಕಲ್, ರಾಯಚೂರು, ಕಲಬುರಗಿ ಮೂಲಕ ಸೊಲ್ಹಾಪುರದ ಬಾಲೆ ರೈಲ್ವೆ ನಿಲ್ದಾಣ ತಲುಪಲಿದೆ.
ಸರಕು ಸಾಗಣೆ ಲಾರಿಗಳನ್ನು ರೈಲಿನಲ್ಲಿ ಸಾಗಿಸುವ ಮುನ್ನ ಮಾರ್ಗದ ಸಮೀಕ್ಷೆ ನಡೆಸಲಾಗಿದೆ. ಮಾರ್ಗದಲ್ಲಿ ಯಾವುದಾದರೂ ಸೇತುವೆಗಳಿವೆಯೇ?, ಅವುಗಳು ರೈಲಿನ ಬಾರವನ್ನು ತಡೆದುಕೊಳ್ಳಲಿದೆಯೇ? ಎಂದು ಸಮೀಕ್ಷೆ ನಡೆಸಿ ವರದಿ ತಯಾರು ಮಾಡಲಾಗಿದೆ.
ನೆಲಮಂಗಲ-ಸೊಲ್ಹಾಪುರ ನಡುವೆ ರೋರೊ ಸೇವೆ ಆರಂಭಿಸಲು ಯಾವುದೇ ಅಡೆ ತಡೆ ಇಲ್ಲ. ರೈಲ್ವೆ ಇಲಾಖೆಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆ ದರಗಳನ್ನು ಅಂತಿಮಗೊಳಿಸಿದ ಬಳಿಕ ಸೇವೆ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications