ಬೆಂಗಳೂರಲ್ಲಿ ಸೋನು ನಿಗಮ್ ಇವೆಂಟ್, ಅನುಮತಿ ಕೊಟ್ರೆ ರಾಜ್ಯಾದ್ಯಂತ ಉಗ್ರ ಹೋರಾಟ: ಕರವೇ
ಬೆಂಗಳೂರು: ಗಾಯಕ ಸೋನು ನಿಗಮ್ ಕಾರ್ಯಕ್ರಮ ಎಂದರೆ ಮುಗಿಬಿದ್ದು ನೋಡುವ ಜನರಿದ್ದಾರೆ. ಆದರೆ ಈ ವ್ಯಕ್ತಿ ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಕೆ ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ನಡುವೆ ಬೆಂಗಳೂರಿನಲ್ಲಿ ಮತ್ತೊಂದು ಮ್ಯೂಸಿಕ್ ಇವೆಂಟ್‌ನಲ್ಲಿ ಪಾಲ್ಗೊಳ್ಳಲು ಇದೇ ಆಕ್ಟೋಬರ್ 24ರಂದು ಆಗಮಿಸಲಿದ್ದಾರೆ. ಅವರ ಕಾರ್ಯಕ್ರಮಕ್ಕೆ ಅನುಮತಿ ನೀಡಕೂಡದು. ಅವರನ್ನು ಬರಲು ಬಿಡುವುದಿಲ್ಲ ಎಂದು ಕರವೇ ಎಚ್ಚರಿಸಿದೆ.
ಕರ್ನಾಟಕ ರಕ್ಷಣಾ ವೇಧಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು, ನಗರ ಪೊಲೀಸ್ ಆಯುಕ್ತರಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸಿದ್ದಾರೆ. ಕನ್ನಡಿಗರನ್ನು ಪಹಲ್ಕಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿ ಅವಮಾನಿಸಿದ ಗಾಯಕ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಅತ್ಯಂತ ಬಲವಾಗಿ ಒತ್ತಾಯಿಸಿದ್ದಾರೆ.

ಕಾನೂನು-ಸುವ್ಯವಸ್ಥೆ ಪಾಲನೆ ದೃಷ್ಟಿಯಿಂದ ಮನವಿ ನೀಡಿದ್ದೇವೆ. ಒಂದು ವೇಳೆ ಸೋನು ನಿಗಮ್ ಅವರ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದೇ ಆದಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
'ದಿ ರೆವಲೂಷನ್ ಇಂಡಿಯಾ ಟೂರ್' ಇವೆಂಟ್
ಇತ್ತ ಸೋನು ನಿಗಮ್ ಅವರ 'ದಿ ರೆವಲೂಷನ್ ಇಂಡಿಯಾ ಟೂರ್' ಮ್ಯೂಸಿಕ್ ಇವೆಂಟ್ ಅನ್ನು ಬೆಂಗಳೂರಿನ ಥಣಿಸಂದ್ರದ ಮುಖ್ಯ ರಸ್ತೆಯ ಭಾರತೀಯ ಮಾಲ್ ಆಫ್ ಬೆಂಗಳೂರಿನ ಆವರಣದಲ್ಲಿ ಅ.24ರಂದು ಸಂಜೆ 7ಕ್ಕೆ ನಡೆಸಲು ಎಲ್ಲ ವಿಧದ ತಯಾರಿ ನಡೆಸಲಾಗಿದೆ. ಕಾರ್ಯಕ್ರಮ ನಡೆಯುತ್ತಾ? ಇಲ್ಲವಾ? ಎಂಬುದರ ಮೇಲೆ ಸಾರ್ವಜನಿಕರ ಕುತೂಹಲ ಮೂಡಿದೆ.
ಅಂದು ಸೋನು ನಿಗಮ್ ಹೇಳಿದ್ದೇನು? ಏನಿದು ವಿವಾದ?
'ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ 2025ರ ಏಪ್ರಿಲ್ ತಿಂಗಳಿನಲ್ಲಿ ಸಂಗೀತ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಒಬ್ಬ ವಿದ್ಯಾರ್ಥಿ ಕನ್ನಡ ಹಾಡು ಹಾಡುವಂತೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸೋನು ನಿಗಮ್, ಕನ್ನಡ, ಕನ್ನಡ, ಕನ್ನಡ, ಇದೇ ಕಾರಣಕ್ಕೆ ಪಹಲ್ಗಾಮ್‌ನಲ್ಲಿ ಘಟನೆ' (ಭಯೋತ್ಪಾದಕ ದಾಳಿ) ಸಂಭವಿಸಿತು"' ಎಂದು ಹೇಳಿಕೆ ನೀಡಿದ್ದರು.
'ಕನ್ನಡ ಹಾಡು ಕೇಳುವುದು ಯಾವ ದೃಷ್ಟಿಯಿಂದಲೂ ಅಪರಾಧವಲ್ಲ. ಆದರೆ ಕನ್ನಡಿಗರ ಭಾಷಾಭಿಮಾನವನ್ನು ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ತಳುಕು ಹಾಕಿದ್ದು ಅತ್ಯಂತ ಆಕ್ಷೇಪಾರ್ಹ, ಬೇಜವಾಬ್ದಾರಿಯುತ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ
ಅಪಮಾನವಾಗಿದೆ' ಎಂದು ಅಂದೇ ಕರವೇ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.
ಕನ್ನಡ ಮೇಲಿನ ಪ್ರೀತಿ ಬಗ್ಗೆ ಗಾಯಕನೊಳಗೆ ಕೀಳು ಅಭಿಪ್ರಾಯ
'ಕನ್ನಡಿಗರು ತಮ್ಮ ಭಾಷೆಯನ್ನು ಪ್ರೀತಿಸುವುದು, ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸುವುದು ಅಥವಾ ಕನ್ನಡ ಹಾಡನ್ನು ಕೇಳುವುದು ಭಯೋತ್ಪಾದನೆಯೇ? ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ಭಯೋತ್ಪಾದಕ ದಾಳಿಗೆ ಹೋಲಿಸುವ ಅಧಿಕಾರವನ್ನು ಸೋನು ನಿಗಮ್ ಅವರಿಗೆ ಕೊಟ್ಟವರಾರು? ಕನ್ನಡಿಗರ ಬಗ್ಗೆ ಇಂತಹ ಕೀಳುಮಟ್ಟದ ಅಭಿಪ್ರಾಯ ವ್ಯಕ್ತಪಡಿಸಿದ ವ್ಯಕ್ತಿಗೆ ಕರ್ನಾಟಕದ ನೆಲದಲ್ಲಿ ಕೆಂಪಹಾಸಿನ ಸ್ವಾಗತ ನೀಡಬೇಕೆ? ವಿರುದ್ಧ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟ ನಡೆಸುವುದು ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ.' ಎಂದು ನಾರಾಯಣಗೌಡರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ಕೊಟ್ಟ ಕರವೇ
'ನಮ್ಮ ಮನವಿ, ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸಬಾರದು. ಸೋನು ನಿಗಮ್ ಅವರ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ. ಕನ್ನಡಿಗರ ಸ್ವಾಭಿಮಾನ ವಿರುದ್ಧ ನೀವು ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದ್ದೆ ಆದಲ್ಲಿ ಸಂಘಟಿತ ಹೋರಾಟ ನಡೆಸುವುದು ಅನಿವಾರ್ಯ. ನಮ್ಮದು ನ್ಯಾಯಸಮ್ಮತ ಬೇಡಿಕೆ ನಿರ್ಲಕ್ಷಿಸಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳಿಸುವ ನಿರ್ಧಾರ ಕೈಗೊಳ್ಳದಂತೆ' ಎಚ್ಚರಿಕೆ ಸಹ ಕರವೇ ನೀಡಿದೆ.
ಕನ್ನಡಿಗರನ್ನು ಅಪಮಾನಿಸದವರಿಗೆ ವೇದಿಕೆ ಏಕೆ?
ಕನ್ನಡಿಗರನ್ನು ಅವಮಾನಿಸಿದವರಿಗೆ ಕನ್ನಡಿಗರ ನಾಡಿನಲ್ಲಿ ಗೌರವದ ವೇದಿಕೆ ಕಲ್ಪಿಸಬಾರದು. ಕನ್ನಡಿಗರ ಸ್ವಾಭಿಮಾನಕ್ಕಿಂತ ಯಾವುದೇ ಕಲಾವಿದನ ಕಾರ್ಯಕ್ರಮ ದೊಡ್ಡದಲ್ಲ. ಆದ್ದರಿಂದ, ಸಾರ್ವಜನಿಕ ಶಾಂತಿ, ಕನ್ನಡಿಗರ ಭಾವನೆಗಳು ಮತ್ತು ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಮತ್ತೊಮ್ಮೆ ಆಗ್ರಹಿಸುತ್ತೇವೆ. ಈ ಮನವಿಯ ಕುರಿತು ತುರ್ತಾಗಿ ಸೂಕ್ತ ನಿರ್ಧಾರ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ನಮಗೆ ಲಿಖಿತವಾಗಿ ತಿಳಿಸಬೇಕೆಂದು ನಾರಾಯಣಗೌಡರು ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications
