ಡ್ರೋನ್ ಮೂಲಕ ಡೆಲಿವರಿ: 100 ಡೆಲಿವರಿ ಪೂರ್ಣಗೊಳಿಸಿದ ಸ್ಕೈ ಏರ್
ಬೆಂಗಳೂರು, ಏಪ್ರಿಲ್ 20: ಉದ್ಯಾನ ನಗರಿ ಬೆಂಗಳೂರಿನಲ್ಲಿ ಡ್ರೋನ್ ಮೂಲಕ ಔಷಧಿ ಮತ್ತು ಪರಿಕರಗಳನ್ನು ತ್ವರಿತವಾಗಿ ತಲುಪಿಸುವ ಸ್ಕೈ ಏರ್‌ನ ವಾಣಿಜ್ಯ ಡ್ರೋನ್ ಸೇವೆ ಆರಂಭವಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮೂರು ವಾರದಲ್ಲಿ 100ಕ್ಕೂ ಅಧಿಕ ಡೆಲಿವರಿಗಳನ್ನು ಮಾಡುವ ಮೂಲಕ ಜನರ ಮೆಚ್ಚುಗೆಯನ್ನು ಸ್ಕೈ ಏರ್‌ಗಳಿಸಿದೆ.
ಗುರುಗ್ರಾಮದ ಬಳಿಕ ಸ್ಕೈ ಏರ್ ಡ್ರೋನ್ ಸೇವೆಯನ್ನು ಬೆಂಗಳೂರು ನಗರದಲ್ಲಿ ಮಾರ್ಚ್ ಅಂತ್ಯದಲ್ಲಿ ಆರಂಭಿಸಿತ್ತು. ಸದ್ಯ ನಗರದ ಪೂರ್ಣ ಭಾಗದಲ್ಲಿ ಈ ಸೇವೆ ಲಭ್ಯವಿಲ್ಲ. ಕೋಣನಕುಂಟೆ ಮತ್ತು ಕನಕಪುರ ರಸ್ತೆಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಸೇವೆಯನ್ನು ನೀಡಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ಗುರುಗ್ರಾಮ ಮೂಲದ ಸ್ಕೈ ಏರ್ ವಾಣಿಜ್ಯ ಡ್ರೋನ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 100 ಡೆಲಿವರಿಗಳನ್ನು ಪೂರ್ಣಗೊಳಿಸಲಾಗಿದ್ದು, ಇದರಲ್ಲಿ ಔಷಧಿಗಳು, ಗೃಹಪಯೋಗಿ ಹಣ್ಣು-ತರಕಾರಿಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿವೆ ಎಂದು ಸ್ಕೈ ಏರ್ ಹೇಳಿದೆ.
ಸರಕು ಸಾಗಣೆ ಮಾಡುವ ಕಂಪನಿಗಳ ಜೊತೆ ಒಪ್ಪಂದವನ್ನು ಮಾಡಿಕೊಂಡು ಕೋಣನಕುಂಟೆ ಮತ್ತು ಕನಕಪುರ ರಸ್ತೆಗಳಲ್ಲಿ ಮಾತ್ರ ಸ್ಕೈ ಏರ್ ವಾಣಿಜ್ಯ ಡ್ರೋನ್ ಸೇವೆ ಆರಂಭಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸ್ಕೈ ಏರ್ ತಿಳಿಸಿದೆ. ಇದು ಸರಕು ಸಾಗಣೆ ಮಾಡುವ ಕಂಪನಿಗಳಿಗೆ ಲಭ್ಯವಿದ್ದು ಇನ್ನೂ ಸಹ ಗ್ರಾಹಕರಿಗೆ ನೇರವಾಗಿ ನೀಡಲಾಗಿಲ್ಲ.
ಈ ಸೇವೆ ಪ್ರಸ್ತುತ ಬಳಕೆದಾರರಿಗೆ ಉಚಿತವಾಗಿದೆ. ಇದು ನೇರವಾಗಿ ಗ್ರಾಹಕರಿಗೆ ಲಭ್ಯವಿಲ್ಲ, ಕೇವಲ ವ್ಯವಹಾರಗಳಿಗೆ ಮಾತ್ರ ಲಭ್ಯವಿದೆ. ವ್ಯಾಪಾರ, ಔಷಧ ಮತ್ತು ಆರೋಗ್ಯ ಸೇವೆ ವಿತರಣೆ ವೇದಿಕೆಗಳಿಂದ ಹೆಚ್ಚುತ್ತಿರುವ ಆಸಕ್ತಿ ವ್ಯವಹಾರವನ್ನು ನಗರದ ಇನ್ನಷ್ಟು ಪ್ರದೇಶಕ್ಕೆ ವಿಸ್ತರಣೆ ಮಾಡಲು ಉತ್ಸಾಹವನ್ನು ತುಂಬಿದೆ ಎಂದು ಸ್ಕೈ ಏರ್ ತಿಳಿಸಿದೆ.
ಸ್ಕೈ ಏರ್‌ಗೆ ಯಾರು ಯಾರು ಪಾಲುದಾರರು? ಎಂದು ಬಹಿರಂಗಪಡಿಸಲು ನಿರಾಕರಿಸಿದೆ. ಸ್ಕೈ ಏರ್‌ನ ವ್ಯಾಣಿಜ್ಯ ಪಾಲುದಾರರು ತಕ್ಷಣ ಡ್ರೋನ್ ಸೇವೆಯನ್ನು ಪಡೆಯಲು ಬುಕ್ ಮಾಡಬಹುದು. 5 ರಿಂದ 7 ನಿಮಿಷಗಳನ್ನು ಈ ಡೆಲಿವರಿ ಸೇವೆ ತೆಗೆದುಕೊಳ್ಳುತ್ತದೆ ಮತ್ತು ಸುಮಾರು 3 ಕಿ. ಮೀ. ವ್ಯಾಪ್ತಿಯನ್ನು ಸದ್ಯ ಇದು ಹೊಂದಿದೆ.
ಈ ಡ್ರೋನ್‌ಗಳು ಗರಿಷ್ಠ 120 ಮೀಟರ್ ಎತ್ತರದಲ್ಲಿ ಹಾರುತ್ತವೆ ಮತ್ತು 8 ರಿಂದ 10 ಕೆ. ಜಿ. ತೂಕದ ಸರಕುಗಳನ್ನು ಸಾಗಿಸಬಹುದು. ಸದ್ಯ ಬೆಂಗಳೂರು ನಗರದಲ್ಲಿ ಸರಕು ಸಾಗಣೆ ಮಾಡಲು 3 ಡ್ರೋನ್‌ಗಳನ್ನು ಸ್ಕೈ ಏರ್ ಕಾರ್ಯಾಚರಣೆ ನಡೆಸುತ್ತಿದೆ.
ಈ ಹಿಂದೆ ಸ್ವಿಗ್ಗಿ ಮತ್ತು ಝೊಮ್ಯಾಟೋ ಮುಂತಾದ ಆಹಾರ ಮತ್ತು ಗ್ರೋಸರಿ ಅಪ್ಲಿಕೇಶನ್‌ಗಳು ಡ್ರೋನ್ ಸಾಗಾಟದ ಪ್ರಯೋಗಕ್ಕೆ ಮುಂದಾಗಿದ್ದವು. ಆದರೆ ಈಗ ಈ ಕುರಿತು ಎರಡೂ ಕಂಪನಿಗಳು ಪ್ರತಿಕ್ರಿಯೆಯನ್ನು ನೀಡಿಲ್ಲ. ಸ್ಕೈ ಏರ್ ಸಹ ತನ್ನ ಪಾಲುದಾರರು ಯಾರು ಎಂದು ಹೇಳಿಲ್ಲ.
ಬೆಂಗಳೂರು ನಗರದಲ್ಲಿ ಕಳೆದ 2 ವರ್ಷಗಳಿಂದ ಡ್ರೋನ್ ಮೂಲಕ ಸರಕು ಸಾಗಣೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿತ್ತು. ಆದರೆ ಸ್ಕೈ ಏರ್ ವಾಣಿಜ್ಯ ಡ್ರೋನ್ ಸೇವೆಯನ್ನು ಮೊದಲು ಗುರುಗ್ರಾಮದಲ್ಲಿ ಆರಂಭಿಸಿತು. ಬಳಿಕ ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಬೆಂಗಳೂರು ನಗರದಲ್ಲಿ ಸೇವೆ ಆರಂಭಗೊಂಡಿತು.
ಗುರುಗ್ರಾಮದಲ್ಲಿ ಒಂದು ವರ್ಷದಲ್ಲಿ10 ಲಕ್ಷ ಡೆಲಿವರಿಯನ್ನು ಪೂರ್ಣಗೊಳಿಸಿದ್ದೇವೆ ಎಂದು ಸ್ಕೈ ಏರ್ ಸಂಸ್ಥಾಪಕ ಹಾಗೂ ಸಿಇಒ ಅಂಕಿತ್ ಕುಮಾರ್ ಹೇಳಿದ್ದಾರೆ. ಬೇಡಿಕೆ ಮತ್ತು ಮೂಲ ಸೌಕರ್ಯವನ್ನು ಆಧರಿಸಿ ಈ ಮಾರ್ಗವನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಇತರ ಕಡೆಯೂ ಈ ಮಾದರಿ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications