Bengaluru Skydeck: ಹೆಮ್ಮಿಗೆಪುರ ಬದಲಿಗೆ ಬೆಂಗಳೂರಿನ ಈ ಭಾಗದಲ್ಲಿ ಸ್ಕೈಡೆಕ್ ನಿರ್ಮಾಣ ಫಿಕ್ಸ್
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ಕೈಡೆಕ್ ನಿರ್ಮಾಣಕ್ಕೆ ಕೊನೆಗೂ ಜಾಗ ಫೈನಲ್ ಆಗಿದೆ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ಅಪ್ಡೇಟ್ ನೀಡಿದ್ದಾರೆ. ಮೊದಲಿಗೆ ಬೆಂಗಳೂರಿನ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರ ಇರಬೇಕು ಎಂಬ ನಿಯಮ ಇರುವ ಕಾರಣಕ್ಕೆ ಸ್ಥಳ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.
ಹೆಮ್ಮಿಗೆಪುರದ ಬದಲಿಗೆ ಕೆಂಗೇರಿ ಬಳಿಯ ನಾಡಪ್ರಭು ಕೆಂಪೇಗೌಡ ಲೇಔಟ್‌ನ ಬಿಡಿಎ ಜಾಗದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರು ನಗರವನ್ನು ಆಕರ್ಷಣೆಯ ಕೇಂದ್ರವನ್ನಾಗಿಸಲು ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೆಂಗಳೂರು ಸಂಸ್ಕೃತಿ, ಪರಂಪರೆಯನ್ನು ಅನಾವರಣಗೊಳಿಸುವ 250 ಅಡಿ ಎತ್ತರದ ಸ್ಕೈಡೆಕ್ (ವೀಕ್ಷಣಾ ಗೋಪುರ) ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿತ್ತು.

ಮೊದಲಿಗೆ ಹೆಮ್ಮಿಗೆಪುರದಲ್ಲಿ ₹500 ಕೋಟಿ ಅಂದಾಜು ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಾಣಗೊಳ್ಳುವುದಾಗಿ ಹೇಳಿದ್ದರು. ಆದರೆ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣವಾದರೆ ವಿಮಾನ ನಿಲ್ದಾಣಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ 20 ಕಿ.ಮೀ. ದೂರ ಇರಬೇಕು ಎಂಬ ನಿಯಮವಿದ್ದು, ಅದರಂತೆ ಕೆಂಗೇರಿ ಬಳಿಯ ನಾಡಪ್ರಭು ಕೆಂಪೇಗೌಡ ಲೇಔಟ್‌ಗೆ ಸ್ಕೈಡೆಕ್ ಶಿಫ್ಟ್ ಆಗಿದೆ.
ಹೆಮ್ಮಿಗೆಪುರದ ಬಳಿಕ ಈ ಹಿಂದೆ ಫಿಕ್ಸ್ ಆಗಿದ್ದ ಆ ಪ್ರದೇಶವು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್‌ಗೆ (ನೈಸ್) ಸೇರಿದ್ದರಿಂದ ಆ ಪ್ರದೇಶದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಕೂಡ ಸಮಸ್ಯೆಯಾಗಿತ್ತು. ಹಾಗಾಗಿ ಕೆಂಪೇಗೌಡ ಲೇಔಟ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಒಡೆತನದಲ್ಲಿರುವ ಭೂಮಿಯಲ್ಲಿ ಸ್ಕೈಡೆಕ್ ನಿರ್ಮಿಸಲು ನಾವು ನಿರ್ಧರಿಸಿದ್ದೇವೆ. ಭವಿಷ್ಯದಲ್ಲಿ ಈ ಪ್ರದೇಶವು ಮೆಟ್ರೋ ಸಂಪರ್ಕವನ್ನು ಪಡೆಯುವ ನಿರೀಕ್ಷೆಯಿದ್ದು, ಆದ್ದರಿಂದ ಇದೇ ಜಾಗದಲ್ಲಿ ಸ್ಕೈಡೆಕ್ ನಿರ್ಮಿಸುವಂತೆ ನಾನು ಅಧಿಕಾರಿಗಳಿಗೆ ಕೇಳಿಕೊಂಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೀದಿಬದಿ ವ್ಯಾಪಾರಿಗಳಿಗೆ ಶಾಕ್!
ಬೆಂಗಳೂರಿನ ಫುಟ್‌ಪಾತ್ ಅಂಗಡಿಗಳನ್ನು ತೆರವು ಮಾಡಲಾಗುವುದು. 27,665 ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ಅವರಿಗೆ ತಳ್ಳುವ ವಾಹನ ನೀಡಲು ಸಿದ್ಧ ಎಂದು ಡಿಕೆ ಶಿವಕುಮಾರ್ ಶಾಕ್ ಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ಹಾಕಿರುವ ಆಪ್ಟಿಕಲ್ ಕೇಬಲ್‌ಗಳನ್ನು ಕತ್ತರಿಸಲು ಸೂಚನೆ ನೀಡಿದ್ದೇನೆ. ರಸ್ತೆ ಅಗಲೀಕರಣಕ್ಕೆ ಶಾಸಕರು ಶಿಫಾರಸ್ಸು ಮಾಡಿದರೆ ಟಿಡಿಆರ್ ನೀಡಲು ಸಿದ್ಧರಿದ್ದೇವೆ. ಮಳೆಯಿಂದ ಮನೆಯೊಳಗೆ ನೀರು ನುಗ್ಗಿದರೆ 10 ಸಾವಿರ ರೂಪಾಯಿ ಪರಿಹಾರ ಕೊಡಲಾಗುವುದು ಎಂದು ಘೋಷಿಸಿದ್ದಾರೆ.
ಟ್ಯಾಂಕರ್ ನೀರಿನ ವಿಚಾರವಾಗಿ ದೂರು ಬಂದಿರುವ ಪ್ರದೇಶಗಳಲ್ಲಿ ಆಯಾ ಋತುವಿಗೆ ತಕ್ಕಂತೆ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ. ರಾಜಕಾಲುವೆ ಅಕ್ಕಪಕ್ಕದ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಚರ್ಚಿಸಿದ್ದು, ಈಗಾಗಲೇ 300 ಕಿ.ಮೀ ಉದ್ದದ ರಸ್ತೆ ಗುರುತಿಸಿದ್ದು, ಶಾಸಕರು ಕೂಡ ಸುಮಾರು 300 ಕಿ.ಮೀ ಉದ್ದದಷ್ಟು ರಸ್ತೆ ನಿರ್ಮಾಣಕ್ಕೆ ಶಿಫಾರಸ್ಸು ನೀಡಬಹುದು ಎಂದಿದ್ದಾರೆ.
ಇನ್ನು ಮುಂದೆ ತಗ್ಗು ಪ್ರದೇಶಗಳಲ್ಲಿ ಬೇಸ್‌ಮೆಂಟ್ ಪಾರ್ಕಿಂಗ್‌ಗೆ ಯಾವುದೇ ಅವಕಾಶ ಇರುವುದಿಲ್ಲ. ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಒಳಚರಂಡಿ ಹಾಗೂ ನೀರುಗಾಲುವೆಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ಕೆಲವು ಶಾಸಕರು ಹೇಳಿದ್ದಾರೆ. ಈ ರೀತಿ ಎಳೆದಿರುವ ಕೇಬಲ್‌ಗಳನ್ನು ಕತ್ತರಿಸಿ ಹಾಕಲು ಸೂಚನೆ ನೀಡಿದ್ದೇನೆ. ಚರಂಡಿಗಳಲ್ಲಿ ಹೂಳೆತ್ತಲು ಸಹ ಸೂಚಿಸಿದ್ದೇನೆ ಎಂದಿದ್ದಾರೆ.












Click it and Unblock the Notifications