Accident: ಕಾರ್ ಮೇಲೆ ಕಂಟೇನರ್ ಉರುಳಿ 6 ಮಂದಿ ಅಪ್ಪಚ್ಚಿ, 10 ಕಿ.ಮೀ ಟ್ರಾಫಿಕ್ ಜಾಮ್
ವೀಕೆಂಡ್ ಮೂಡ್‌ನಲ್ಲಿ ಕಾರ್‌ನಲ್ಲಿ ಹೊರಟಿದ್ದವರು ಭೀಕರ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೆಲಮಂಗಲದ ಟಿ.ಬೇಗೂರು ಬಳಿ ಕಾರುಗಳು, ಲಾರಿ ಹಾಗೂ ಸ್ಕೂಲ್ ಬಸ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೆಂಗಳೂರಿನ ಉದ್ಯಮಿ ಕುಟುಂಬದ ಆರು ಮಂದಿ ಮಸಣ ಸೇರಿದ್ದಾರೆ.
ಕಾರಿನಲ್ಲಿ ಇಬ್ಬರು ಮಹಿಳೆಯರು, ಎರಡು ಹೆಣ್ಣು ಮಕ್ಕಳು, ಹಾಗೂ ಇಬ್ಬರು ಪುರುಷರು ಸೇರಿ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ನೆಲಮಂಗಲ ಸಮೀಪದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದಾರುಣ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಅಪಘಾತದಲ್ಲಿ ದೊಡ್ಡ ಕಂಟೇನರ್‌ವೊಂದು ನಿಯಂತ್ರಣ ತಪ್ಪಿ ಈ ಕಾರಿನ ಮೇಲೆ ತಕ್ಷಣ ಉರುಳಿದೆ. ಈ ವೇಳೆ ಕಾರಿನಲ್ಲಿ ಆರು ಮಂದಿ ಇದ್ದರು. ಕಂಟೇನರ್ ಉರುಳಿದ್ದರಿಂದ ಕಾರು ಅಪ್ಪಚ್ಚಿಯಾಗಿದ್ದು, ಒಳಗಿದ್ದವರು ಕೂಡ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮೃತರ ಮಾಹಿತಿ: ಮೃತರು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಮೂಲದವರಾದ ಚಂದ್ರಮ್ ಕುಟುಂಬದವರು ಎಂದು ತಿಳಿದುಬಂದಿದೆ.ಚಂದ್ರಮ್ ಅವರು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಿದ್ದು,ಐಎಎಸ್ಟಿ ಸಾಫ್ಟ್‌ವೇರ್ ಕಂಪನಿ ಮಾಲೀಕರು ಎನ್ನಲಾಗಿದೆ ತಂದೆಗೆ ಅನಾರೋಗ್ಯ ಸಮಸ್ಯೆ ಎಂದು ವಾರಾಂತ್ಯದಲ್ಲಿ ಕುಟುಂಬ ಸಮೇತ ವಿಜಯಪುರಕ್ಕೆ ಹೊರಟಿದ್ದರು. ಈ ಕಾರು ಸಹ ಇತ್ತೀಚೆಗೆ ಖರೀದಿಸಿದ್ದರು ಎನ್ನಲಾಗಿದೆ.
ಚಂದ್ರಮ್ ಏಗಪ್ಪಗೋಳ್, ಧೋರಾಬಾಯಿ, ಪುತ್ರ ಗ್ಯಾನ್, ಪುತ್ರಿಯರಾದ ದೀಕ್ಷಾ, ಆರ್ಯ ಹಾಗೂ ಚಂದ್ರಮ್ ಅವರ ಸಹೋದರನ ಪತ್ನಿ ವಿಜಯಲಕ್ಷ್ಮೀ ಮೃತರು ಎಂದು ತಿಳಿದುಬಂದಿದೆ
ಇನ್ನು ಕಂಟೇನರ್ ಹೆಚ್ಚು ಭಾರ ಇದ್ದಿದ್ದರಿಂದ ಅದನ್ನು ಮೇಲಕ್ಕೆತ್ತಲು ಸಹ ಆಗಲಿಲ್ಲ. ಕಾರು ಕೆಲ ಸಮಯದವರೆಗೂ ಕಂಟೇನರ್‌ನಿಂದ ಪಕ್ಕಕ್ಕೆ ಸರಿಸಲು ಸಾಧ್ಯವೇ ಆಗಲಿಲ್ಲ. ಪೊಲೀಸರು ಸ್ಥಳಕ್ಕಾಗಮಿಸಿ ಹರಸಾಹಸಪಟ್ಟರೂ ಕಾರನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಮೂರು ಕ್ರೇನ್‌ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಕಂಟೇನರ್ ಅನ್ನು ಪಕ್ಕಕ್ಕೆ ಸರಿಸಿದ್ದಾರೆ.
ನೆಲಮಂಗಲ ಪೊಲೀಸರು ಸದ್ಯ ಅಪಘಾತದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕಾರಿನ ಒಳಗಿದ್ದವರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕಿದ್ದು, ಈ ಕಾರು ಕಳೆದ ಕೆಲವು ತಿಂಗಳ ಹಿಂದಷ್ಟೇ ಖರೀದಿಸಲಾಗಿದ್ದು, ವೀಕೆಂಡ್ ಇದ್ದಿದ್ದರಿಂದ ವಿಜಯಪುರದತ್ತ ಹೊರಟಿದ್ದರು ಎಂದು ತಿಳಿದುಬಂದಿದೆ.
ಈ ಭೀಕರ ಅಪಘಾತದಿಂದಾಗಿ ಸುತ್ತಮುತ್ತಲ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು. ರಸ್ತೆಯಲ್ಲಿ ಉರುಳಿದ್ದ ಕಂಟೇನರ್ ಉಳಿದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಟ್ರಾಫಿಕ್ ಜಾಮ್ ಹಲವು ಗಂಟೆಗಳವರೆಗೆ ಇತ್ತು ಎನ್ನಲಾಗಿದೆ. ಬರೋಬ್ಬರಿ 10 ಕಿ.ಮೀ ವರೆಗೆ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು ಎಂದು ತಿಳಿದುಬಂದಿದೆ. ಇದರಿಂದ ವಾಹನ ಸವಾರರಿಗೂ ಭಾರಿ ಸಮಸ್ಯೆಯಾಗಿದೆ.
ಸದ್ಯ ನಜ್ಜುಗುಜ್ಜಾಗಿರುವ ಕಾರಿನಿಂದ ಮೃತದೇಹಗಳನ್ನು ಹೊರಗೆ ತೆಗೆಯಲಾಗುತ್ತಿದೆ. ಮೃತದೇಹಗಳು ಕೂಡ ಕಂಟೇನರ್ ಬಿದ್ದಿದ್ದರಿಂದ ಅಪ್ಪಚ್ಚಿಯಾಗಿವೆ ಎಂದು ಹೇಳಲಾಗುತ್ತಿದೆ. ಇನ್ನು ಈ ಅಪಘಾತ ಕಂಡು ಅಲ್ಲಿದ್ದವರೆಲ್ಲ ಬೆಚ್ಚಿಬಿದ್ದಿದ್ದಾರೆ. ಈ ವಾರಾಂತ್ಯವು ಮೃತರ ಪಾಲಿಗೆ ಬದುಕಿನ ಅಂತ್ಯವನ್ನೇ ಹಾಡಿದೆ.












Click it and Unblock the Notifications