ಕೊರೊನಾ ಸೋಂಕು: ಬೆಂಗಳೂರಿನ ಪಶ್ಚಿಮ ವಲಯದ ಜನರೇ ಹುಷಾರ್...!
ಬೆಂಗಳೂರು, ಏ. 22: ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ರಾಜ್ಯವೂ ಹೊರತಾಗಿಲ್ಲ. ಈಗಾಗಲೇ ಸೋಂಕಿತರ ಸಂಖ್ಯೆ 418ಕ್ಕಿಂತ ಹೆಚ್ಚಾಗಿದ್ದು, 17 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಲಾಕ್‌ಡೌನ್ ಮಧ್ಯವೂ ಬೆಂಗಳೂರಿನಲ್ಲಿ ಜನರ ಓಡಾಟ ಜೋರಾಗಿದೆ. ಬೆಂಗಳೂರಿನಲ್ಲಿ ಈವರೆಗೆ 91 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಹೀಗಾಗಿ ದೇಶದ ಕೊರೊನಾ ಹಾಟ್‌ಸ್ಪಾಟ್‌ಗಳಲ್ಲಿ ಬೆಂಗಳೂರು ಕೂಡ ಒಂದು ಎಂದು ಗುರುತಿಸಲಾಗಿದೆ. ಜೊತೆಗೆ ಬೆಂಗಳೂರಿನ 34 ವಾರ್ಡ್‌ಗಳಲ್ಲಿ ಸೀಲ್‌ಡೌನ್ ಜಾರಿಯಲ್ಲಿದೆ. ಅದರಲ್ಲೂ ಪಶ್ಚಿಮ ವಲಯದಲ್ಲಿ ಪರಿಸ್ಥಿತಿ ತೀರಾ ಆತಂಕಕಾರಿಯಾಗಿದೆ.
Recommended Video
ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಒಟ್ಟು 7 ವಾರ್ಡ್‌ಗಳು ಬರುತ್ತವೆ. ಈ ಏಳೂ ವಾರ್ಡ್‌ಗಳ ಜನರಿಗೆ ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಆದರೂ ಜನರು ಮನೆಯಿಂದ ಹೊರೆಗ ಬರುತ್ತಿರುವುದು ಸಾಮಾನ್ಯವಾಗಿದೆ. ಪಶ್ಚಿಮ ವಲಯದಲ್ಲಿ ನಿಜಕ್ಕೂ ಅಷ್ಟೊಂದು ಆತಂಕವಿದೆಯಾ? ಅಲ್ಲಿನ ವಸ್ತುಸ್ಥಿತಿ ಏನಿದೆ? ಈ ವರದಿ ಓದಿ!

ಬಿಬಿಎಂಪಿಯ 34 ವಾರ್ಡ್‌ಗಳು ಸೀಲ್‌ಡೌನ್
ಬಿಬಿಎಂಪಿ ವ್ಯಾಪ್ತಿಯ 7 ವಲಯಗಳಲ್ಲಿ 34 ವಾರ್ಡ್‌ಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಬೊಮ್ಮನಹಳ್ಳಿ ವಲಯದ ಸಿಂಗಸಂದ್ರ, ಮಹಾದೇವಪುರ ವಲಯದ ಗರುಡಾಚಾರ್ಯ ಪಾಳ್ಯ, ಹಗದೂರು, ವರ್ತೂರು, ಹೂಡಿ, ಹೊರಮಾವು, ಪೂರ್ವ ವಲಯದ ಹೊಯ್ಸಳ ನಗರ, ಹೊಸ ತಿಪ್ಪಸಂದ್ರ, ವಸಂತ ನಗರ, ಲಿಂಗರಾಜಪುರ, ರಾಧಾಕೃಷ್ಣ ದೇವಸ್ಥಾನ, ಸಿವಿ ರಾಮನ್ ನಗರ, ರಾಮಸ್ವಾಮಿ ಪಾಳ್ಯ, ಮಾರುತಿ ಸೇವಾನಗರ, ದೊಮ್ಮಲೂರು, ದಕ್ಷಿಣ ವಲಯದ ಸುಧಾಮನಗರ, ಕರಿಸಂದ್ರ, ಈಜಿಪುರ, ಗುರಪ್ಪನ ಪಾಳ್ಯ, ಅತ್ತಿಗುಪ್ಪೆ, ಶಾಖಾಂಬರಿ ನಗರ, ಜೆಪಿ ನಗರ, ಬಾಪೂಜಿನಗರ ಹಾಗೂ ಹೊಸಹಳ್ಳಿ, ಯಲಹಂಕ ವಲಯದ ಥಣಿಸಂದ್ರ, ಬ್ಯಾಟರಾಯನಪುರ, ಆರ್‌ಆರ್ ನಗರ ವಲಯದ ಆರ್.ಆರ್. ನಗರ ವಾರ್ಡ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ ಪಶ್ಚಿಮ ವಲಯದ ಸ್ಥಿತಿ ಎಲ್ಲದಕ್ಕಿಂತ ಕರಾಳವಾಗಿದೆ.

ಪಾದರಾಯನಪುರ ಸೇರಿ ಪಶ್ಚಿಮ ವಲಯದ ವಾರ್ಡ್‌ಗಳು
ಮೊನ್ನೆ ಗಲಾಟೆಯಾಗಿದ್ದ ಪಾದರಾಯನಪುರ ಸೇರಿದಂತೆ ರಾಜಮಹಲ್, ಸುಧಾಮನಗರ, ನಾಗರಭಾವಿ, ಶಿವನಗರ, ಕೆಆರ್ ಮಾರುಕಟ್ಟೆ ಹೀಗೆ ಪಶ್ಚಿಮ ವಲಯದ 7 ವಾರ್ಡ್‌ಗಳಲ್ಲಿ ಆತಂಕಕಾರಿ ಪರಿಸ್ಥಿತಿಯಿದೆ. ಈ ಎಲ್ಲ ವಾರ್ಡ್‌ಗಳಲ್ಲಿಯೂ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಪಶ್ಚಿಮ ವಲಯವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.

ಪಶ್ಚಿಮ ವಲಯದ ಜನರೇ ಹುಷಾರ್!
ಮೊನ್ನೆ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಪಾದರಾಯನಪುರ ಸೇರಿದಂತೆ ಪಶ್ಚಿಮ ವಲಯದ 7 ವಾರ್ಡ್‌ಗಳಲ್ಲಿ ಪರಿಸ್ಥಿತಿ ಭಯಾನಕವಾಗಿದೆ. ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಈ ವಲಯದಲ್ಲಿವೆ. ಆದರೂ ಜನರು ಮಾತ್ರ ಸೀಲ್‌ಡೌನ್ ನಿಯಮಗಳನ್ನು ಮುರಿಯುವುದರಲ್ಲಿ ನಿರತರಾಗಿದ್ದಾರೆ.
ಬೆಂಗಳೂರಿನ ಪಶ್ಚಿಮ ವಲಯದ ಜನರು ಹುಷಾರಾಗಿರಬೇಕಾಗಿದೆ. ಯಾಕೆಂದರೆ ಪಶ್ಚಿಮ ವಲಯದಲ್ಲಿಯೆ ಇದೆ ಅತಿಹೆಚ್ಚು ಕೊರೋನಾ ಸೋಂಕಿತರ ಸಂಖ್ಯೆಯಿದೆ. ಈ ವರೆಗೆ ಈ ವಲಯದಲ್ಲಿ 29 ಸೋಂಕಿತರು ಪತ್ತೆಯಾಗಿದ್ದಾರೆ. ಜೊತೆಗೆ ಈಗಾಗಲೇ ಇದೇ ವಲಯದಲ್ಲಿ ಇಬ್ಬರು ಸೋಂಕಿತರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. 29 ರೋಗಿಗಳಲ್ಲಿ ಕೇವಲ 5 ಮಂದಿ ಮಾತ್ರ ಗುಣಮುಖರಾಗಿದ್ದು, ಇನ್ನೂ 24 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಯಲದಲ್ಲಿ ಜನರು ಮನೆಯಿಂದ ಹೊರಗೆ ಬರಲೇ ಬೇಡಿ. ಮನೆಯಿಂದ ಹೊರಗೆ ಬಂದರೆ ನಿಮ್ಮನ್ನು ಕಾಡಲಿದೆ ಕೊರೋನಾ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ಕೊಡುತ್ತಿದ್ದಾರೆ.

ಪೂರ್ವ, ದಕ್ಷಿಣ ವಲಯದಲ್ಲಿದ್ದಾರೆ 17 ಸೋಂಕಿತರು
ಪೂರ್ವ ಹಾಗೂ ದಕ್ಷಿಣ ವಲಯಗಳಲ್ಲಿ ಒಟ್ಟು 17 ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೂ ಪಶ್ಚಿಮ ವಲಯದಲ್ಲಿ ಮಾತ್ರ ಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿಯೆ ಪಶ್ಚಿಮ ವಲಯವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರಿನಲ್ಲಿ ಪತ್ತೆಯಾಗಿರುವ ಒಟ್ಟಾರೆ ಸೋಂಕಿತ ಪ್ರಕರಣಗಳಲ್ಲಿ ಹೆಚ್ಚನವು ಪಶ್ಚಿಮ ವಲಯದಲ್ಲಿ ಪತ್ತೆಯಾಗಿವೆ. ಹೀಗಾಗಿ ಅಲ್ಲಿನ ಜನರು ಅತ್ಯಂಕ ಪರಿಣಾಮಕಾರಿಯಾಗಿ ಸರ್ಕಾರದ ಸೀಲ್‌ಡೌನ್ ಸೂಚನೆಗಳನ್ನು ಪಾಲಿಸಬೇಕಬೇಕಾಗಿದೆ.












Click it and Unblock the Notifications