ಮನ್ಸೂರ್ ಅಲಿಖಾನ್ 3ನೇ ಪತ್ನಿ ಮನೆ ಮೇಲೆ ಎಸ್‌ಐಟಿ ದಾಳಿ
ಬೆಂಗಳೂರು, ಜೂನ್ 17 : ಬಹುಕೋಟಿ ರೂಪಾಯಿ ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮನ್ಸೂರ್ ಅಲಿ ಖಾನ್ 3ನೇ ಪತ್ನಿ ಮನೆ ಮೇಲೆ ದಾಳಿ ನಡೆಸಿದೆ. ಮತ್ತೊಂದು ಕಡೆ ಮನ್ಸೂರ್ 45 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಸೋಮವಾರ ಎಸ್‌ಐಟಿ ಅಧಿಕಾರಿಗಳು ಮನ್ಸೂರ್ ಅಲಿ ಖಾನ್ 3ನೇ ಪತ್ನಿ ತಬಸ್ಸುಮ್ ಮನೆ ಮೇಲೆ ದಾಳಿ ಮಾಡಿದರು. ಶಿವಾಜಿನಗರದ ವೆಂಕಟಪ್ಪ ರಸ್ತೆಯಲ್ಲಿರುವ ಮನೆಯಲ್ಲಿ ಹುಡುಕಾಟ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸ್‌ಐಟಿ ತನಿಖಾಧಿಕಾರಿ ಎಸ್.ಗಿರೀಶ್ ನೇತೃತ್ವದಲ್ಲಿ ನಡೆದ ದಾಳಿಯ ವೇಳೆ 2.50 ಲಕ್ಷ ನಗದು, ಸುಮಾರು ಎರಡೂವರೆ ಕೆಜಿ ಚಿನ್ನ, ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ತಬಸ್ಸುಮ್ ಅವರು ನೀಡಿದ ಮಾಹಿತಿ ಅನ್ವಯ ತನಿಖೆಯನ್ನು ಮುಂದುವರೆಸಲು ಎಸ್ಐಟಿ ನಿರ್ಧರಿಸಿದೆ.

45 ಲಕ್ಷ ರೂ. ವಂಚನೆ : ಮನ್ಸೂರ್ ಅಲಿ ಖಾನ್ ತಮಗೆ 45 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಔಷಧಗಳ ಉದ್ಯಮ ನಡೆಸುತ್ತಿರುವ ಜಯಂತ್ ಮೆಹತಾ ಅವರು ದೂರು ನೀಡಿದ್ದಾರೆ. ದೂರಿನ ಅನ್ವಯ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ಐಎಂಎ ಗ್ರೂಪ್‌ಗೆ ಸೇರಿದ ಫ್ರಂಟ್ ಲೈನ್ ಫಾರ್ಮಸಿಗೆ 2018ರ ಜುಲೈನಿಂದ ಜಯಂತ್ ಮೆಹತಾ ಅವರು ಔಷಧ ಸರಬರಾಜು ಮಾಡುತ್ತಿದ್ದರು. ಪ್ರತಿ ತಿಂಗಳ 7ರಂದು ಬಿಲ್ ಆಗುತ್ತಿತ್ತು. ಆದರೆ, 2019ರ ಏಪ್ರಿಲ್‌ನಿಂದ ಬಿಲ್ ಹಣ ಪಾವತಿ ಮಾಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಯಂತ್ ಮೆಹತಾ ಅವರು ಮನ್ಸೂರ್ ಅಲಿ ಖಾನ್, ನವೀದ್ ಅಹ್ಮದ್, ನಾಸೀರ್ ಹುಸೇನ್, ನಿಜಾವುದ್ದೀನ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಇವರೆಲ್ಲರೂ ಐಎಂಎಎಲ್‌ಎಫ್ ಹೆಲ್ತ್‌ಕೇರ್ ನವರಾಗಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.












Click it and Unblock the Notifications