ಗಾಯಕಿ ಸುಶ್ಮಿತಾ ಆತ್ಮಹತ್ಯೆ; ಸಹೋದರ ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 19 : "ಮಧ್ಯರಾತ್ರಿ ಸುಮಾರು 1.30ಕ್ಕೆ ಅಕ್ಕ ಮೆಸೇಜ್ ಮಾಡಿದ್ದಾಳೆ. ನಾನು ನಾಲ್ಕು ಗಂಟೆಗೆ ಎದ್ದು ರೂಂನಲ್ಲಿ ನೋಡಿದಾಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು" ಎಂದು ಗಾಯಕಿ ಸುಶ್ಮಿತಾ ಸಹೋದರ ಯಶವಂತ್ ಹೇಳಿದ್ದಾರೆ.
ಸೋಮವಾರ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸುಶ್ಮಿತಾ ಪತಿ ಶರತ್ ಮತ್ತು ಆತನ ಕುಟುಂಬ ಸದಸ್ಯರು ನಾಪತ್ತೆಯಾಗಿದ್ದು, ಪೊಲೀಸರು ಹುಟುಕಾಟ ನಡೆಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಸುಶ್ಮಿತಾ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ ಸುಶ್ಮಿತಾ ಪತಿ ಶರತ್ ಕುಮಾರ್, ಆತನ ದೊಡ್ಡಮ್ಮ ವೈದೇಹಿ, ಸಹೋದರಿ ಗೀತಾ ಕಿರುಕುಳ ಕೊಟ್ಟಿದ್ದರು ಎಂದು ಉಲ್ಲೇಖಿಸಿದ್ದರು. ಆದ್ದರಿಂದ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದ ಬಳಿಕ ಶರತ್ ಕುಮಾರ್ ಮತ್ತು ಕುಟುಂಬದವರು ನಾಪತ್ತೆಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಶ್ಮಿತಾ ಶವದ ಮರಣೋತ್ತರ ಪರೀಕ್ಷೆ ನಡೆಸುವಾಗಲೂ ಯಾರೂ ಸಹ ಬಂದಿರಲಿಲ್ಲ.

ಬೆಳಗ್ಗೆ 4 ಗಂಟೆಗೆ ಎಬ್ಬಿಸು ಎಂದು ಹೇಳಿದ್ದೆ
ಸುಶ್ಮಿತಾ ತಾಯಿ ಮನೆಯಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದರು. ಮನೆಗೆ ಬಂದಿದ್ದ ಅಕ್ಕನಿಗೆ ಸಹೋದರ ಯಶವಂತ್, "ಬೆಳಗ್ಗೆ 4 ಗಂಟೆಗೆ ಎಬ್ಬಿಸು, ಕೆಲಸಕ್ಕೆ ಹೋಗಬೇಕು" ಎಂದು ಹೇಳಿದ್ದರು. ಯಶವಂತ್ ಮೊಬೈಲ್‌ನಲ್ಲಿ ಅಲಾರಂ ಇಟ್ಟುಕೊಂಡಿದ್ದರು.

ರೂಂ ನಲ್ಲಿ ನೋಡಿದ್ದ ಸಹೋದರ
ಮೊಬೈಲ್ ಅಲಾರಾಂ ಹೊಡೆದಾಗ ಎದ್ದ ಯಶವಂತ್ ಅಕ್ಕ ಎಬ್ಬಿಸಲಿಲ್ಲ ಎಂದು ರೂಂನಲ್ಲಿ ನೋಡಿದ್ದಾರೆ. ಆಗ ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ. ತಕ್ಷಣ ಅವರು ಮೊಬೈಲ್ ನೋಡಿದಾಗ 1.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಕಳಿಸಿದ್ದ ವಾಟ್ಸಪ್ ಮೆಸೇಜ್ ಬಂದಿದೆ.

ಭಾವನಿಗೆ ಸುದ್ದಿ ತಿಳಿಸಿದ್ದರು
ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ತಕ್ಷಣ ಭಾವ ಶರತ್ ಕುಮಾರ್‌ಗೆ ಯಶವಂತ್ ತಿಳಿಸಿದ್ದಾರೆ. ಆದರೆ, ಭಾವನಾಗಲಿ ಅವರ ಕುಟುಂಬ ಸದಸ್ಯರಾಗಲಿ ಯಾರೂ ಮನೆಗೆ ಬರಲಿಲ್ಲ. ಆಸ್ಪತ್ರೆ ಬಳಿಗೂ ಸಹ ಬರಲಿಲ್ಲ. ಆತ್ಮಹತ್ಯೆ ವಿಚಾರ ಬೆಳಕಿಗೆ ಬರುತ್ತಲೇ ಎಲ್ಲರೂ ನಾಪತ್ತೆಯಾಗಿದ್ದಾರೆ.

ಕಿರುಕುಳದ ಬಗ್ಗೆ ಉಲ್ಲೇಖ
ಶರತ್ ಕುಮಾರ್, ಆತನ ದೊಡ್ಡಮ್ಮ ವೈದೇಹಿ, ಸಹೋದರಿ ಗೀತಾ ತನಗೆ ಕಿರುಕುಳ ಕೊಡುತ್ತಿದ್ದಾರೆ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ಸುಶ್ಮಿತಾ ಸಹೋದರ ಯಶವಂತ್ ಮತ್ತು ತಾಯಿಗೆ ವಾಟ್ಸಪ್ ಮೆಸೇಜ್ ಕಳಿಸಿದ್ದಳು. ಪತಿಯನ್ನು ಸುಮ್ಮನೆ ಬಿಡಬಾರದು ಎಂದು ಸಂದೇಶದಲ್ಲಿ ಹೇಳಿದ್ದಾಳೆ.












Click it and Unblock the Notifications